ಸಾಗಣೆದಾರನೆಂದು ತಪ್ಪಾಗಿ ಭಾವಿಸಿ 12ನೇ ತರಗತಿಯ ವಿದ್ಯಾರ್ಥಿ ಹತ್ಯೆಯಾದ ಬಗ್ಗೆ ಉಪರಾಷ್ಟ್ರಪತಿ ಜಗದೀಪ್ ಧನಕರ್ ಮತ್ತು ಪ್ರಧಾನಿ ನರೇಂದ್ರ ಮೋದಿ ಮಾತನಾಡುತ್ತಾರಾ ಎಂದು ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಪ್ರಶ್ನಿಸಿದ್ದಾರೆ.
ಆಗಸ್ಟ್ 23 ರಂದು ಫರಿದಾಬಾದ್‌ನಲ್ಲಿ ಐದು ಶಂಕಿತ ಗೋರಕ್ಷಕರ ತಂಡ ದನ ಕಳ್ಳಸಾಗಣೆದಾರ ಎಂದು ತಪ್ಪಾಗಿ ಭಾವಿಸಿ ಕಾರಿನಲ್ಲಿ ಹಿಂಬಾಲಿಸಿ ಆರ್ಯನ್ ಮಿಶ್ರಾ ಎಂಬ ವಿದ್ಯಾರ್ಥಿಯನ್ನು ಗುಂಡಿಕ್ಕಿ ಕೊಂದಿತ್ತು ಎಂದು ಪೊಲೀಸ್ ಮೂಲಗಳು ಮಂಗಳವಾರ ತಿಳಿಸಿವೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಕಿಡಿಕಾರಿರುವ ಕಪಿಲ್ ಸಿಬಲ್, ನಮಗೆ ನಾಚಿಕೆಯಾಗುತ್ತಿದೆ. ಹರಿಯಾಣದಲ್ಲಿ ದನ ಕಳ್ಳಸಾಗಣೆದಾರ ಎಂದು ತಪ್ಪಾಗಿ ಭಾವಿಸಿ ಗೋರಕ್ಷಕರು ಆರ್ಯನ್ ಎಂಬ ವಿದ್ಯಾರ್ಥಿಯನ್ನು ಗುಂಡಿಕ್ಕಿ ಕೊಂದಿದ್ದಾರೆ. ಇದಕ್ಕೆ ಕಾರಣ ದ್ವೇಷದ ಅಜೆಂಡಾಕ್ಕೆ ನೀಡುತ್ತಿರುವ ಪ್ರೋತ್ಸಾಹ ಎಂದಿದ್ದಾರೆ
“ನಮ್ಮ ಪ್ರಧಾನಿ, ಉಪರಾಷ್ಟ್ರಪತಿ, ನಮ್ಮ ಗೃಹ ಸಚಿವರು ಈ ಬಗ್ಗೆ ಮಾತನಾಡುತ್ತಾರೆಯೇ” ಎಂದು ಸಿಬಲ್ ಕೇಳಿದ್ದಾರೆ.