ಬೆಂಗಳೂರು: ಜನರ ಗಮನವನ್ನು ಬೇರೆಡೆಗೆ ಸೆಳೆದು ನಗದು ಕಳ್ಳತನ ಮಾಡುತ್ತಿದ್ದ ತಮಿಳುನಾಡಿನ ಓಜಿಕುಪ್ಪಂ ಗ್ಯಾಂಗ್ ನ ಮೂವರು ಸದಸ್ಯರನ್ನು ಕೆ.ಆರ್.ಪುರ ಮತ್ತು ಕೊತ್ತನೂರು ಠಾಣೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಓಜಿಕುಪ್ಪಂನ ಗೋಪಿ (35), ಅಭಿಷೇಕ್ (36) ಮತ್ತು ಅಖಿಲ್ (36) ಬಂಧಿತ ಆರೋಪಿಗಳು. ಇವರಿಂದ 46 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ನಗದು ವಶಪಡಿಸಿಕೊಳ್ಳಲಾಗಿದೆ.
ದೇವಸಂದ್ರದ ನಿವಾಸಿಯೊಬ್ಬರು ನವೆಂಬರ್ 29ರಂದು ಬ್ಯಾಂಕ್‌ನಿಂದ 4 ಲಕ್ಷ ರೂ. ಹಣವನ್ನು ಡ್ರಾ ಮಾಡಿಕೊಂಡು ಕಾರಿನಲ್ಲಿ ತೆರಳುತ್ತಿದ್ದರು. ಟಿ.ಸಿ.ಪಾಳ್ಯದ ಸಮೀಪ ಎರಡು ದ್ವಿಚಕ್ರ ವಾಹನಗಳಲ್ಲಿ ಕಾರು ಹಿಂಬಾಲಿಸಿಕೊಂಡು ಬಂದಿದ್ದ ಆರೋಪಿಗಳು, ಕಾರಿನ ಟೈಯರ್ ಪಂಕ್ಚರ್ ಆಗಿದೆ ಎಂದು ಹೇಳಿದ್ದರು. ಬಳಿಕ ಪಂಕ್ಚರ್ ಹಾಕಿಸಿಕೊಂಡು ಹಣ ಕೊಡಲು ಹೋದಾಗ ಕಾರಿನ ಡ್ಯಾಶ್‌ಬೋರ್ಡ್ ನಲ್ಲಿದ್ದ ಹಣವನ್ನು ಕಳವು ಮಾಡಿ ಆರೋಪಿಗಳು ಪರಾರಿಯಾಗಿದ್ದರು. ಕಾರಿನ ಮಾಲೀಕರು ನೀಡಿದ ದೂರನ್ನು ಆಧರಿಸಿ, ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಮಹಿಳೆಯೊಬ್ಬರು ಬ್ಯಾಂಕ್‌ನ ಲಾಕರ್‌ನಲ್ಲಿಟ್ಟಿದ್ದ ಚಿನ್ನಾಭರಣ ಮತ್ತು ಬೆಳ್ಳಿಯ ವಸ್ತುಗಳನ್ನು ತೆಗೆದುಕೊಂಡು ಮನೆಗೆ ಮರಳುತ್ತಿದ್ದಾಗ ಬೈಕ್‌ನಲ್ಲಿ ಬಂದ ಮೂವರು ಚಿನ್ನಾಭರಣ ಮತ್ತು ಬೆಳ್ಳಿಯ ವಸ್ತುಗಳಿದ್ದ ಬ್ಯಾಗ್ ಕಿತ್ತುಕೊಂಡು ಪರಾರಿ ಆಗಿದ್ದರು. ಆ ಆರೋಪಿಗಳು ಓಜಿಕುಪ್ಪಂ ಗ್ಯಾಂಗ್ ನ ಸದಸ್ಯರು ಎನ್ನುವುದು ತನಿಖೆಯಿಂದ ಖಚಿತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.