ವ್ಯಂಗ್ಯಚಿತ್ರ ಪ್ರಕರಣ; ವಾಕ್‌ ಸ್ವಾತಂತ್ರ್ಯದ ದುರುಪಯೋಗವಾಗುತ್ತಿದೆ: ಸುಪ್ರೀಂ ಕೋರ್ಟ್‌ ಅಭಿಪ್ರಾಯ

Most read

ನವದೆಹಲಿ: ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಆರ್‌ ಎಸ್‌ ಎಸ್ ಕಾರ್ಯಕರ್ತರ ಆಕ್ಷೇಪಾರ್ಹ ವ್ಯಂಗ್ಯಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಆರೋಪ ಎದುರಿಸುತ್ತಿರುವ ವ್ಯಂಗ್ಯಚಿತ್ರಕಾರ ಹೇಮಂತ್‌ ಮಾಳವೀಯ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸುವಾಗ ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಅರವಿಂದ ಕುಮಾರ್‌ ಅವರ ದ್ವಿಸದಸ್ಯ ಪೀಠವು ಹೀಗೆ ಅಭಿಪ್ರಾಯಪಟ್ಟಿದೆ. ನೀವು ಇದನ್ನೆಲ್ಲಾ ಏಕೆ ಮಾಡುತ್ತೀರಿ ಎಂದೂ ನ್ಯಾಯಮೂರ್ತಿಗಳು ಪ್ರಶ್ನಿಸಿದರು.

ಹೇಮಂತ್‌ ಮಾಳವೀಯ ಪರ ಹಾಜರಿದ್ದ ವಕೀಲರಾದ ವೃಂದಾ ಗ್ರೋವರ್‌ ಅವರು,ಈ ಅರ್ಜಿಯು 2021ರಲ್ಲಿ ಕೋವಿಡ್‌ ಸಮಯದಲ್ಲಿ ಮಾಡಿದ್ದ ವ್ಯಂಗ್ಯಚಿತ್ರಕ್ಕೆ ಸಂಬಂಧಿಸಿದ್ದಾಗಿದೆ. ಆ ವ್ಯಂಗ್ಯಚಿತ್ರ ಕೆಟ್ಟ ಅಭಿರುಚಿಯಿಂದ ಕೂಡಿದೆ ಎಂದು ಒಪ್ಪಿಕೊಳ್ಳುತ್ತೇನೆ.  ಆದರೆ ಅದು ಅಪರಾಧವೇ? ನಾನು ಇಲ್ಲಿ ಯಾವುದನ್ನೂ ಸಮರ್ಥಿಸಲು ಪ್ರಯತ್ನಿಸುತ್ತಿಲ್ಲ ಎಂದು ಗ್ರೋವರ್‌ ಹೇಳಿದರು. ನಂತರ ಮಾಳವೀಯ ಮಾಡಿದ್ದ ಪೋಸ್ಟ್‌ಅನ್ನು ತೆಗೆದು ಹಾಕಲು ಅವರು ಒಪ್ಪಿಕೊಂಡರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ಏನೇ ತೀರ್ಪು ನೀಡಿದರೂ, ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂಬುದು ಖಚಿತ ಎಂದು ನ್ಯಾಯಮೂರ್ತಿ ಧುಲಿಯಾ ಹೇಳಿದರು. ಮಧ್ಯಪ್ರದೇಶದ ಸರ್ಕಾರದ ಪರ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ.ನಟರಾಜ್, ಇಂತಹ ಪ್ರಕರಣಗಳು ಪದೇ ಪದೇ ಪುನರಾವ್ರತನೆಯಾಗುತ್ತಿವೆ ಎಂಬುದನ್ನು ಪೀಠದ ಗಮನಕ್ಕೆ ತಂದರು.

ಮಧ್ಯಪ್ರದೇಶ ಹೈಕೋರ್ಟ್ ಜುಲೈ 3ರಂದು ನಿರೀಕ್ಷಣಾ ಜಾಮೀನು ನಿರಾಕರಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಮಾಳವೀಯ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ವಕೀಲ ವಿನಯ್ ಜೋಶಿ ಸಲ್ಲಿಸಿದ ದೂರಿನ ಮೇರೆಗೆ ಮೇ ತಿಂಗಳಲ್ಲಿ ಇಂದೋರ್‌ನ ಲಸೂಡಿಯಾ ಪೊಲೀಸ್ ಠಾಣೆಯಲ್ಲಿ ಮಾಳವೀಯ ವಿರುದ್ಧ ಪ್ರಕರಣ ದಾಖಲಾಗಿದೆ.

More articles

Latest article