ಬೆಂಗಳೂರು: ಮಲ ಹೊರುವ ಮತ್ತು ಮನುಷ್ಯರಿಂದ ಶೌಚಗುಂಡಿಗಳನ್ನು ಸ್ವಚ್ಛಗೊಳಿಸುವ ಅನಿಷ್ಟ ಪದ್ದತಿಯನ್ನು ನಿಷೇಧಿಸಿದ್ದರೂ ಇಂದಿಗೂ ನಡೆದುಕೊಂಡು ಬರುತ್ತಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಹೈಕೋರ್ಟ್ ಹೇಳಿದೆ.
ಶೌಚ ಗುಂಡಿ ಒಳಚರಂಡಿ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು (ಎಸ್ ಟಿಪಿ) ಸ್ವಚ್ಛಗೊಳಿಸಲು ಮನುಷ್ಯರನ್ನು ಬಳಸಿಕೊಳ್ಳುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಕೋರಿ ‘ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಟ್ರೇಡ್ ಯೂನಿಯನ್ (ಎಐಸಿಸಿಟಿಯು) ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ.ಕಾಮೇಶ್ವರ್ ರಾವ್ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿ ಈ ಕಳವಳ ವ್ಯಕ್ತಪಡಿಸಿದೆ.
ಅರ್ಜಿ ಪರಿಶೀಲಿಸಿದ ನ್ಯಾಯಾಧೀಶರು ‘ಮಲ ಹೋರುವ ಪದ್ಧತಿ ಇನ್ನೂ ಜೀವಂತವಾಗಿದೆಯೇ’ ಎಂದು ಅಚ್ಚರಿ ವ್ಯಕ್ತಪಡಿಸಿದರು. ಸುಪ್ರೀಂ ಕೋರ್ಟ್ ಈಗಾಗಲೇ ಸಂಪೂರ್ಣವಾಗಿ ನಿಷೇಧಿಸಿದೆಯಲ್ಲಾ ಎಂದೂ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅರ್ಜಿದಾರರ ಪರ ವಕೀಲೆ ಮೈತ್ರೇಯಿ ಕೃಷ್ಣನ್ ‘ಈ ಪದ್ಧತಿಯನ್ನು ನಿಷೇಧಿಸಲಾಗಿದ್ದರೂ ಮತ್ತೊಂದು ರೂಪದಲ್ಲಿ ಅಸ್ತಿತ್ವದಲ್ಲಿದೆ. ಈ ಕೆಲಸಕ್ಕೆ ಮನುಷ್ಯರನ್ನು ಬಳಸಿಕೊಳ್ಳುವ ಘಟನೆಗಳು ಮರುಕಳಿಸುತ್ತಲೇ ಇವೆ. ಇತ್ತೀಚೆಗೆ ಎಸ್ ಟಿಪಿ ಘಟಕವೊಂದನ್ನು ಸ್ವಚ್ಛಗೊಳಿಸುವಾಗ ಇಬ್ಬರು ಪೌರ ಕಾರ್ಮಿಕರು ಮೃತಪಟ್ಟಿದ್ದಾರೆ ಎಂಬ ಅಂಶವನ್ನು ನ್ಯಾಯಾಲಯದ ಗಮನಕ್ಕೆ ತಂದರು.
ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ (ಎಸ್ ಟಿಪಿ)ಗಳ ನಿರ್ವಹಣೆಗೆ ನಿರ್ದಿಷ್ಟ ವ್ಯವಸ್ಥೆ ಉಸ್ತುವಾರಿ ಅಥವಾ ಮಾರ್ಗಸೂಚಿ ಇಲ್ಲವಾಗಿದೆ. ಎಸ್ ಟಿಪಿಗಳು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ವ್ಯಾಪ್ತಿಗೆ ಒಳಪಡುತ್ತವೆ. ದುರ್ಘಟನೆಯಲ್ಲಿ ಪ್ರಾಣ ಹಾನಿ ಸಂಭವಿಸಿದರೆ ತನಗೆ ಸಂಬಂಧವಿಲ್ಲ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ವಾದಿಸುತ್ತದೆ. ಆದ್ದರಿಂದ ಎಸ್ ಟಿಪಿಗಳ ನಿರ್ವಹಣೆ ಬಗ್ಗೆ ಸಮಗ್ರ ಪರಿಶೀಲನೆ ನಡೆಸಬೇಕು ಹಾಗೂ ಸೂಕ್ತ ಮಾರ್ಗಸೂಚಿಗಳನ್ನು ರೂಪಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಮೈತ್ರೇಯಿ ಅವರು ನ್ಯಾಯಪೀಠಕ್ಕೆ ಮನವಿ ಮಾಡಿದರು.
ಈ ವಾದವನ್ನು ಪರಿಗಣಿಸಿದ ನ್ಯಾಯಪೀಠ ರಾಜ್ಯದ ಎಲ್ಲಾ ಕೈಗಾರಿಕಾ ಹಾಗೂ ಜನವಸತಿ ಪ್ರದೇಶಗಳ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ (ಎಸ್ ಟಿಪಿ) ನಿರ್ವಹಣೆ ಬಗ್ಗೆ ನಾಲ್ಕು ವಾರಗಳಲ್ಲಿ ಸಮಗ್ರ ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿ ವಿಚಾರಣೆಯನ್ನು ಆಗಸ್ಟ್ 12ಕ್ಕೆ ಮುಂದೂಡಿತು.