ಬೆಂಗಳೂರು: ಬೆಂಗಳೂರಿನಲ್ಲಿ ಮಾರಾಟವಾಗುತ್ತಿರುವ ಕೋಳಿ ಮೊಟ್ಟೆಗಳಲ್ಲಿ ನೈಟ್ರೋಫ್ಯೂರಾನ್ ಎಂಬ ಕ್ಯಾನ್ಸರ್ ಕಾರಕ ಅಂಶ ಕಂಡು ಬಂದಿದ್ದು, ಗ್ರಾಹಕರಲ್ಲಿ ಆತಂಕಕ್ಕೆ ಕಾರಣವಾಗಿದೆ. 6 ತಿಂಗಳ ಹಿಂದೆ ಪರೀಕ್ಷೆ ನಡೆಸಿದಾಗ ಸುರಕ್ಷಿತ ಎಂಬ ವರದಿ ಬಂದಿತ್ತು. ಇದೀಗ ಮತ್ತೊಮ್ಮೆ ಮೊಟ್ಟೆಗಳ ಪರೀಕ್ಷೆ ನಡೆಸುತ್ತೇವೆ. ರಾಜ್ಯಾದ್ಯಂತ 200ಕ್ಕೂ ಹೆಚ್ಚು ಸ್ಯಾಂಪಲ್ ಗಳನ್ನು ಸಂಗ್ರಹಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಸಚಿವರ ನಿರ್ದೇಶನದಂತೆ ನಗರದಾದ್ಯಂತ ಇರುವ ಸೂಪರ್ ಮಾರುಕಟ್ಟೆಗಳು ಮತ್ತು ಮಾಲ್ ಸೇರಿದಂತೆ 50ಕ್ಕೂ ಹೆಚ್ಚು ಕಡೆ ಮೊಟ್ಟೆಗಳ ಸ್ಯಾಂಪಲ್ಸ್ ಸಂಗ್ರಹಿಸಲಾಗುತ್ತಿದೆ. ಇವುಗಳನ್ನು ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಲಾಗಿದೆ ಎಂದು ಆಹಾರ ಹಾಗೂ ಗುಣಮಟ್ಟ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ನೈಟ್ರೋಫ್ಯೂರಾನ್ ನಿಷೇಧಿತ ಔಷಧದ ಅಂಶ ಕ್ಯಾನ್ಸರ್ ನಂತಹ ಅಪಾಯಕಾರಿ ರೋಗಗಳಿಗೆ ನಾಂದಿ ಹಾಡುತ್ತದೆ. ಹಾಗಾಗಿ ಜನರಲ್ಲಿ ಆತಂಕ ಮನೆ ಮಾಡಿದೆ.
ನಗರದ ಕೊರಮಂಗಲ, ಸಂಜಯನಗರ, ಆರ್ ಆರ್ ನಗರ, ಬಿಟಿಎಂ ಲೇಔಟ್, ಕೆಂಗೇರಿ, ಯಶವಂತಪುರ, ಹೆಬ್ಬಾಳ, ಕೆಆರ್ ಪುರಂ, ಚಾಮರಾಜಪೇಟೆ, ಮೈಸೂರು ರಸ್ತೆ ಸೇರಿದಂತೆ ವಿವಿಧ ಭಾಗಗಳ ಮಾಲ್ ಮಾರ್ಟ್ ಗಳಲ್ಲಿ ಮೊಟ್ಟೆಗಳನ್ನು ಸಂಗ್ರಹ ಮಾಡಲಾಗಿದೆ. ಕೇಂದ್ರ ಆರೋಗ್ಯ ಇಲಾಖೆಯಿಂದ ಯಾವುದೇ ಮಾಹಿತಿ ಬಂದಿಲ್ಲವಾದರೂ ರಾಜ್ಯ ಆರೋಗ್ಯ ಇಲಾಖೆ ಪರೀಕ್ಷೆಗೆ ತೀರ್ಮಾನಿಸಿದೆ.
ಆಹಾರ ತಜ್ಞೆ ಡಾ. ಕೀರ್ತಿ ಕಿರಿಸಾವೆ ಪ್ರತಿಕ್ರಿಯೆ ನೀಡಿದ್ದು, ಮೊಟ್ಟೆ ತಿಂದರೆ ಕ್ಯಾನ್ಸರ್ ಬರುತ್ತದೆ ಎನ್ನುವುದು ಸುಳ್ಳು. ಎಲ್ಲಾ ಮೊಟ್ಟೆಗಳಲ್ಲೂ ಕ್ಯಾನ್ಸರ್ ಕಾರಕ ಅಂಶ ಇರುವುದಿಲ್ಲ. ಫಲಿತಾಂಶ ಬಂದ ನಂತರ ಸತ್ಯಾಂಶ ಹೊರಬೀಳಳಿದೆ. ಸಾರ್ವಜನಿಕರು ಆತಂಕ ಪಡಬೇಕಿಲ್ಲ ಎಂದು ಹೇಳಿದ್ದಾರೆ.

