ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ 2 ನೇ ಆರೋಪಿ ಚಿತ್ರನಟ
ದರ್ಶನ್ ಜಾಮೀನು ಅರ್ಜಿಯನ್ನು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪಿ. ಪ್ರಸನ್ನ ಕುಮಾರ್ ಪ್ರಬಲವಾಗಿ ವಿರೋಧಿಸಿ ಜಾಮೀನು ನೀಡಬಾರದು ಮತ್ತು ಈಗಾಗಲೇ ನೀಡಲಾಗಿರುವ ಮಧ್ಯಂತರ ಜಾಮೀನು ರದ್ದುಗೊಳಿಸುವಂತೆ ವಾದಿಸಿದರು.
ಬೆನ್ನುಹುರಿ ಶಸ್ತ್ರಚಿಕಿತ್ಸೆಗೆ ಒಳಗಾಗದಿದ್ದರೆ ನಾಳೆಯೇ ಲಕ್ವ ಹೊಡೆಯುತ್ತದೆ. ಮರಣ ಹೊಂದುತ್ತಾರೆ ಎಂದೆಲ್ಲಾ ಆತಂಕ ಸೃಷ್ಟಿಸಿ ವೈದ್ಯಕೀಯ ಚಿಕಿತ್ಸೆ ನೆಪದಲ್ಲಿ ಮಧ್ಯಂತರ ಜಾಮೀನು ಪಡೆದಿದ್ದಾರೆ. ಈ ನೆಪದಲ್ಲಿ ಘನ ನ್ಯಾಯಾಲಯದ ಹಾದಿ ತಪ್ಪಿಸಿದ್ದಾರೆ. ಹೈಕೋರ್ಟ್ ನ ಸಹಾನುಭೂತಿಯನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ದರ್ಶನ್, ಪವಿತ್ರಾಗೌಡ ಜತೆಗೆ ಈ ಕೊಲೆ ಪ್ರಕರಣದ ಇತರ ಆರೋಪಿಗಳಾದ ಶ್ರೀನಿವಾಸ್, ಆರ್.ನಾಗರಾಜು, ಎಂ.ಲಕ್ಷ್ಮಣ್, ಅನುಕುಮಾರ್ ಅಲಿಯಾಸ್ ಅನು, ಜಗದೀಶ್ ಅಲಿಯಾಸ್ ಜಗ್ಗ ಸಲ್ಲಿಸಿರುವ ನಿಯಮಿತ (ರೆಗ್ಯುಲರ್) ಜಾಮೀನು ಅರ್ಜಿಗಳನ್ನು ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.
ದರ್ಶನ್ ಚಿಕಿತ್ಸೆ ಪಡೆಯುತ್ತಿರುವ ಬಿಜಿಎಸ್ ಆಸ್ಪತ್ರೆಯು ನವೆಂಬರ್ 6 ಮತ್ತು 21ರಂದು ಎರಡು ವೈದ್ಯಕೀಯ ವರದಿಗಳನ್ನು ನೀಡಿದೆ. ನ. 6ರ ವರದಿಯಲ್ಲಿ ಶಸ್ತ್ರಚಿಕಿತ್ಸೆ ನಡೆಸುವವರೆಗೆ ಮಧ್ಯಂತರ ಚಿಕಿತ್ಸೆ ಮುಂದುವರಿಯುತ್ತದೆ. ಈ ಚಿಕಿತ್ಸೆ ತಾತ್ಕಾಲಿಕವಾಗಿದ್ದು, ಶಸ್ತ್ರಚಿಕಿತ್ಸೆ ಬಾಕಿ ಉಳಿದಿದೆ ಎಂದು ಮಾಹಿತಿ ನೀಡಲಾಗಿದೆ. ಆದರೆ, ನ. 21ರಂದು ದರ್ಶನ್ ಅವರ ಬಿ.ಪಿ ಏರುಪೇರಾಗುತ್ತಿದ್ದು, ಶಸ್ತ್ರಚಿಕಿತ್ಸೆಗೆ ಸಜ್ಜುಗೊಳಿಸಬೇಕಿದೆ. ಶಸ್ತ್ರಚಿಕಿತ್ಸೆ ನಡೆದ ನಂತರ ಎಷ್ಟು ದಿನಗಳಲ್ಲಿ ಚೇತರಿಸಿಕೊಳ್ಳುತ್ತಾರೆ ಎಂಬುದನ್ನು ನಂತರವಷ್ಟೇ ಅಂದಾಜು ಮಾಡಬಹುದು ಎಂದು ತಿಳಿಸಲಾಗಿದೆ ಎನ್ನುವುದನ್ನು ನ್ಯಾಯಾಲಯದ ಗಮನಕ್ಕೆ ತಂದರು.
ವೈದ್ಯಕೀಯ ಚಿಕಿತ್ಸೆಗಾಗಿ ಮಧ್ಯಂತರ ಜಾಮೀನು ಪಡೆದು ಈಗಾಗಲೇ ಐದು ವಾರ ಕಳೆದು ಹೋಗಿವೆ. ಆದರೆ, ದರ್ಶನ್ ಈವರೆಗೆ ಯಾವುದೇ ಶಸ್ತ್ರಚಿಕಿತ್ಸೆಗೆ ಒಳಗಾಗಿಲ್ಲ. ಬಿ.ಪಿ ವ್ಯತ್ಯಾಸ ಎನ್ನುವುದು ಕೇವಲ ನೆಪವಾಗಿದೆ. ರಕ್ತದೊತ್ತಡ ವ್ಯತ್ಯಾಸವಾಗುತ್ತಿರುವ ಕಾರಣ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿಲ್ಲ ಎಂಬ ಬಿಜಿಎಸ್ ವೈದ್ಯರ ಹೇಳಿಕೆಯನ್ನು ಖಚಿತಪಡಿಸಿಕೊಳ್ಳಲು ತಜ್ಞ ವೈದ್ಯರನ್ನು ಕೇಳಿದಾಗ ಶಸ್ತ್ರಚಿಕಿತ್ಸೆ ಅನಿವಾರ್ಯವಾಗಿದ್ದರೆ ಬಿ.ಪಿಯಿಂದ ಬಳಲುತ್ತಿರುವ ರೋಗಿಗೆ ಅಮಲಾಂಗ್-5 ಎಂ.ಜಿ ಮಾತ್ರೆ ಕೊಟ್ಟರೆ ಸಹಜ ಸ್ಥಿತಿಗೆ ಬರುತ್ತದೆ. ಆಗ ಶಸ್ತ್ರ ಚಿಕಿತ್ಸೆ ನಡೆಸಲಾಗುತ್ತದೆ ಎನ್ನುತ್ತಾರೆ. ಆದರೆ, ದರ್ಶನ್ ಅವರಿಗೆ ಕಾಡುತ್ತಿರುವ ಬಿ.ಪಿ ಯಾವುದಿರಬಹುದು ಎಂದು ಆಶ್ಚರ್ಯ ವ್ಯಕ್ತಪಡಿಸಿದರು.
ದರ್ಶನ್ ಅವರನ್ನು ಶಸ್ತ್ರಚಿಕಿತ್ಸೆಗೆ ಅಣಿಗೊಳಿಸಲಾಗುತ್ತಿದೆ ಎಂಬ ವೈದ್ಯರ ವಿವರಣೆ ಹೇಗಿದೆಯೆಂದರೆ ಸಿನಿಮಾದ ಹಾಡೊಂದು ನೆನಪಾಗುತ್ತದೆ. ಸೋಪ್ ಹಾಕ್ಕೊಳಿ ತಲೆ ತೊಳ್ಕೊಳಿ ತಲೆ ಬಾಚೋಳಿ ಪೌಡರ್ ಹಾಕ್ಕೊಳ್ಳಿ ಎಂಬ ಹಾಗಿದೆ. ಅವರಿಗೆ ಚಿಕಿತ್ಸೆ ನೀಡಿ ವರದಿ ನೀಡುತ್ತಿರುವ ವೈದ್ಯರು ಮತ್ತು ಆರೋಪಿ ದರ್ಶನ್ ನಡವಳಿಕೆ ಪ್ರಶ್ನಾರ್ಹವಾಗಿದೆ. ಆದ್ದರಿಂದ ದರ್ಶನ್ ಗೆ ಮಧ್ಯಂತರ ಜಾಮೀನು ಮುಂದುವರೆಸುವ ಅಗತ್ಯವಿಲ್ಲ. ಅವರು
ನ್ಯಾಯಾಲಯಕ್ಕೆ ಶರಣಾಗಲೇಬೇಕು. ಶರಣಾದ ನಂತರ ಅವರ ರೆಗ್ಯುಲರ್ ಜಾಮೀನು ಅರ್ಜಿಯ ವಿಚಾರಣೆ ನಡೆಸಬಹುದಾಗಿದೆ ಎಂದು ಪ್ರಸನ್ನ ಕುಮಾರ್ ವಾದ ಮಂಡಿಸಿದರು.
ಇವರ ವಾದಕ್ಕೆ ಪ್ರತಿಕ್ರಿಯಿಸಿದ ದರ್ಶನ್ ಪರ ವಕೀಲ ಸಿ.ವಿ.ನಾಗೇಶ್ ಮಧ್ಯಂತರ ಜಾಮೀನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ ಎಂಬ ಅಂಶವನ್ನು ನ್ಯಾಯಮೂರ್ತಿಗಳ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿದೆ ಎಂದ ಮಾತ್ರಕ್ಕೆ ಹೈಕೋರ್ಟ್ ನಲ್ಲಿ ವಿಚಾರಣೆ ನಡೆಸಬಾರದು ಎಂದೇನೂ ಇಲ್ಲವಲ್ಲ ಎಂದು ಪ್ರತಿಕ್ರಿಯಿಸಿದರು. ಪ್ರಕರಣದ 14ನೇ ಆರೋಪಿ ಪ್ರದೋಷ್ ಪರ ಹಿರಿಯ ವಕೀಲ ಕೆ.ದಿವಾಕರ್ ಅವರೂ ವಾದ ಮಂಡಿಸಿದರು. ವಿಚಾರಣೆಯನ್ನು ನ್ಯಾಯಾಲಯ ಇದೇ 9, ಸೋಮವಾರಕ್ಕೆ ಮುಂದೂಡಿತು.