ಭಾಗ 2 |ಮತಯಂತ್ರಗಳ ದುರುಪಯೋಗ ತಡೆಯುವುದು ಸಾಧ್ಯವೇ?

Most read

ಭಾಗ 2 – ನಮಗೇಕೆ ಇವಿಎಂ ಬೇಕು?!

ಭಾರತದ ಇವಿಎಂ ಗಳಿಗೆ “ಚಿಪ್” ಗಳನ್ನು ತಯಾರಿಸಿ ಕೊಡುತ್ತಿರುವ ಜಪಾನ್ ದೇಶವೇ ಸ್ವತಃ ತನ್ನ ದೇಶದ ಚುನಾವಣೆಗೆ ಇವಿಎಂ ಬಳಸುತ್ತಿಲ್ಲ!  ಬಿ‌ಜೆ‌ಪಿಯವರಿಗೆ ಅತ್ಯಂತ ಪ್ರಿಯವಾಗಿರುವ ಮತ್ತು ಪೆಗಾಸಸ್ ಸ್ಪೈವೇರ್ ಪೂರೈಸುವ ಇಸ್ರೇಲ್ ದೇಶವೂ ಇವಿಎಂ ಬಳಸುತ್ತಿಲ್ಲ.  ನಮ್ಮ ನೆರೆಯ ಬಾಂಗ್ಲಾದೇಶ, ಶ್ರೀಲಂಕಾ  ಮತ್ತು ಪಾಕಿಸ್ತಾನ ಕೂಡ ಇವಿಎಂ  ಬಳಸುತ್ತಿಲ್ಲ. ಅಂದ ಮೇಲೆ ನಮಗೇಕೆ ಇವಿಎಂ ಬೇಕು?! – ಪ್ರವೀಣ್‌ ಎಸ್‌ ಶೆಟ್ಟಿ, ಚಿಂತಕರು.

ಮೊದಲೆಲ್ಲಾ ಇವಿಎಂ ಯಂತ್ರದ ಚಿಪ್ಪನ್ನು ಆ ಯಂತ್ರದಲ್ಲಿ ಅಳವಡಿಸುವಾಗಲೇ ಒಂದು ರಾಜಕೀಯ ಪಕ್ಷದವರು ಆ ಇವಿಎಂನ್ನು ತಿರುಚಲು ಸಾಧ್ಯವಾಗುವಂತ ಪ್ರೋಗ್ರಾಮಿಂಗ್‌ ನ್ನು ಚಿಪ್ ನಲ್ಲಿ ಅಳವಡಿಸುತ್ತಾರೆ ಅಥವಾ ರಿಮೋಟ್ ಕಂಟ್ರೋಲ್ ಮುಖಾಂತರ ದೂರದ ಕಂಪ್ಯೂಟರ್ ನಿಂದ ಇವಿಎಂ ಹ್ಯಾಕ್ ಮಾಡಿ ತಮ್ಮ ಪಕ್ಷದ ಅಭ್ಯರ್ಥಿ ಗೆಲ್ಲುವಂತೆ ಮಾಡಲು ಅನುವಾಗುವ ಟೆಕ್ನಾಲಜಿ ಅಳವಡಿಸಿಕೊಳ್ಳುತ್ತಾರೆ ಎಂಬ ಆರೋಪವಿತ್ತು.  ಆದರೆ ಕಳೆದ ವರ್ಷ ನಡೆದ ಮಧ್ಯಪ್ರದೇಶ ಮತ್ತು ಛತ್ತಿಸ್‌ ಗಡ ರಾಜ್ಯಗಳಲ್ಲಿ ಚುನಾವಣೆಯಲ್ಲಿ ಸಿಕ್ಕಿರುವ ಪುರಾವೆಯಿಂದ ತಿಳಿದು ಬಂದಿದ್ದೇನೆಂದರೆ ಇವಿಎಂ ಗಳನ್ನು ದೂರದಿಂದ ರಿಮೋಟ್ ಕಂಟ್ರೋಲ್ ಮೂಲಕ ಅಥವಾ ದೂರದ ಲ್ಯಾಪ್ ಟಾಪ್ ನಿಂದ ತಾಂತ್ರಿಕವಾಗಿ ತಿರುಚುವುದಿಲ್ಲ,  ಬದಲಾಗಿ ಇವಿಎಂ ಯಂತ್ರ ಮತ್ತು ವಿ‌ವಿಪ್ಯಾಟ್ ಯಂತ್ರ ಇವೆರಡನ್ನೂ ವ್ಯಕ್ತಿಗತವಾಗಿ ಬದಲಾಯಿಸಲಾಗುತ್ತದೆ. ಅಂದರೆ ಮತದಾನದಲ್ಲಿ ಬಳಸಿದ ಇವಿಎಂ ಮತ್ತು ವಿ‌ವಿಪ್ಯಾಟ್ ಎರಡನ್ನೂ ಸ್ಟ್ರಾಂಗ್ ರೂಂ ನಲ್ಲಿ ಇಟ್ಟಾಗ ಅಥವಾ ಸಾಗಾಟ ಮಾಡುವಾಗ, ಅವನ್ನು ಅಲ್ಲಿಂದ ತೆಗೆದು ಅದರ ಜಾಗದಲ್ಲಿ ಬೇರೊಂದು “ಪ್ರಿಲೋಡೆಡ್” ಇವಿಎಂ ಮತ್ತು ವಿ‌ವಿಪ್ಯಾಟ್ ಇಟ್ಟರೆ ಆನಂತರ ನೂರಕ್ಕೆ ನೂರು ವಿ‌ವಿಪ್ಯಾಟ್ ಚೀಟಿಗಳನ್ನು ಎಣಿಸಿ ಇ‌ವಿಎಂ ನೊಂದಿಗೆ ತಾಳೆ ಹಾಕಿದರೂ ಕಳ್ಳಾಟ ಸಿಕ್ಕಿ ಬೀಳುವುದಿಲ್ಲ ಎಂದು ಆರೋಪಿಸಲಾಗುತ್ತಿದೆ.  ಅದಕ್ಕೆ ಅನುಕೂಲ ಮಾಡಿಕೊಡಲೆಂದೇ ಕಳೆದ ವರ್ಷ ಛತ್ತೀಸ್ ಗಡ ಮತ್ತು ಮಧ್ಯಪ್ರದೇಶ ವಿಧಾನ ಸಭಾ ಚುನಾವಣೆಯಲ್ಲಿ ಮತದಾನದ ನಂತರ 20 ರಿಂದ 28 ದಿನಗಳ ಅಂತರ ಇಟ್ಟು ಮತಎಣಿಕೆ ಮಾಡಿರುವುದು.  ಅಂದರೆ ಈ ಅವಧಿಯಲ್ಲಿ ಮತದಾನಕ್ಕೆ ಬಳಸಿದ ಇವಿಎಂ ಮತ್ತು ವಿ‌ವಿಪ್ಯಾಟ್ ಬದಲಾಯಿಸಿ ಬೇರೆ ಪ್ರಿಲೋಡೆಡ್ ಯಂತ್ರಗಳನ್ನು ರಾತೋರಾತ್ರಿ ತಂದಿಡಲಾಗಿತ್ತು ಎಂದು ಆರೋಪಿಸಲಾಗುತ್ತಿದೆ. (ಇಂತಹಾ ಪ್ರೀ-ಲೋಡೆಡ್ ಇವಿಎಂ ಗಳೇ ಮೊನ್ನೆ ಮತ ಎಣಿಕೆಯಂದು 99% ಬ್ಯಾಟರಿ ಚಾರ್ಜ್ ತೋರಿಸಿದ್ದು. ನಿಜವಾಗಿ ಮತದಾನದ ದಿನ ಸತತ 12-13 ಗಂಟೆ ಬಳಕೆಯಾದ ಇವಿಎಂಗಳು 60% ಗಿಂತ ಹೆಚ್ಚು ಬ್ಯಾಟರಿ ಚಾರ್ಜ್ ಬಾಕಿ ತೋರಿಸಲು ಸಾಧ್ಯವೇ ಇಲ್ಲವಂತೆ!).

ಆದರೆ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಮಾತ್ರ ಈ ವಂಚನೆ ಮಾಡಲಿಲ್ಲ, ಕಾರಣ ಆಗ ತೆಲಂಗಾಣದಲ್ಲಿ ಟಿ ಆರ್ ಎಸ್ ಸರಕಾರವಿತ್ತು. ಮೇಲಾಗಿ ಜನಪ್ರಿಯತೆಯಲ್ಲಿ ಕೆಳಗಿನ ನಾಲ್ಕನೇ ಸ್ಥಾನದಲ್ಲಿ ಇದ್ದ ಬಿ‌ಜೆ‌ಪಿಯು ಹೆಚ್ಚು ಸೀಟು ಗೆದ್ದರೆ ಜನರಿಗೆ ತಕ್ಷಣ ಸಂಶಯ ಬರುತ್ತದೆ ಮತ್ತು ಸಿಕ್ಕಿಬೀಳುವ ಸಾಧ್ಯತೆ ಹೆಚ್ಚು ಇದ್ದುದರಿಂದ ತೆಲಂಗಾಣದಲ್ಲಿ ಮತದಾನ ದಿನಾಂಕವನ್ನು ಮತ ಎಣಿಕೆಗಿಂತ ಕೇವಲ ಎರಡು ದಿನ ಮುಂಚೆ ಇಟ್ಟಿದ್ದು ಎಂದು ಆರೋಪಿಸಲಾಗುತ್ತಿದೆ. ಸ್ಥಳೀಯ ಜಿಲ್ಲಾಡಳಿತದ ಮತ್ತು ಪೊಲೀಸ್ ಉಚ್ಚಾಧಿಕಾರಿಗಳ ಸಹಕಾರ ಇದ್ದರೆ ಇವಿಎಂ ಅದಲಾ-ಬದಲಿ ಸುಲಭವಾಗುತ್ತದೆ ಹಾಗೂ ಈ ವಂಚನೆಯ ಹೂರಣ ಹೊರಗೆ ಬರುವುದಿಲ್ಲ ಎಂದು ಆರೋಪಿಸುತ್ತಾರೆ ಇತರ ಪಕ್ಷದ ನೇತಾರರು.

ಹತ್ತೊಂಬತ್ತು ಲಕ್ಷ ಇವಿಎಂ ಗಳು ಕಾಣೆಯಾಗಿರುವುದನ್ನು ಚು.ಆಯೋಗ ಖಚಿತ ಪಡಿಸಿದೆ, ಆದರೆ ಅದನ್ನು ಹುಡುಕುವ ಪ್ರಯತ್ನ ಆಗಿರುವಂತೆ ಕಾಣುತ್ತಿಲ್ಲ. ಈ ವಿಷಯ ಮುಂಬೈ ಹೈಕೋರ್ಟ್ ಮೆಟ್ಟಲೇರಿದ್ದರೂ ಕಾಣೆಯಾಗಿರುವ ಇವಿಎಂ ಗಳ ವಿಷಯದಲ್ಲಿ ಹೈಕೋರ್ಟ್ ಇನ್ನೂ ತೀರ್ಪು ಕೊಟ್ಟಿಲ್ಲವಂತೆ. 

2018 ರ ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ಹುಬ್ಬಳ್ಳಿ ಕ್ಷೇತ್ರದಲ್ಲಿ ಇವಿಎಂ ತಿರುಚಿ ಜಗದೀಶ್ ಶೆಟ್ಟರ್ ಗೆದ್ದಿದ್ದಾರೆ ಎಂಬ ಆರೋಪ ಬಂದಿತ್ತು. ಆಗ ಮತ ಎಣಿಕೆಯ ದಿನ ಮೊದಲು 21,306 ಮತಗಳಿಂದ ಶೆಟ್ಟರ್ ಗೆದ್ದರು ಎಂದು ಚುನಾವಣಾ ಅಧಿಕಾರಿ ಘೋಷಿಸಿದರು.  ಆದರೆ ಕಾಂಗ್ರೆಸ್ ಅಭ್ಯರ್ಥಿ ಮಹೇಶ್ ನಲವಡೆಯವರೇ ಹಠ ಹಿಡಿದು 100% ವಿ‌ವಿಪ್ಯಾಟ್ ಮತಚೀಟಿ ಎಣಿಸುವಂತೆ ಮಾಡಿದರು. ಮತಚೀಟಿ ಎಣಿಸಿದಾಗ ಇವಿಎಂ ಗಿಂತ ವಿ‌ವಿಪ್ಯಾಟ್ ನಲ್ಲಿ 21,000 ಮತಗಳು ಕಡಿಮೆ ಇದ್ದಿದ್ದು ಕಂಡು ಬಂತು. ಅಂದರೆ ಇವಿಎಂ ನಲ್ಲಿ 21,000 ಮತಗಳನ್ನು ಹೆಚ್ಚು ಹಾಕಲಾಗಿತ್ತು. ಕೊನೆಗೆ ಶೆಟ್ಟರ್ ಗೆದ್ದಿದ್ದು ಕೇವಲ 300 ವೋಟುಗಳಿಂದ ಮಾತ್ರ ಎಂದು ಡಿಕ್ಲೇರ್ ಮಾಡಲಾಯಿತು. (ಆದರೆ ಚು.ಆಯೋಗದ ವೆಬ್ಸೈಟ್ ನಲ್ಲಿ ಉದ್ದೇಶಪೂರ್ವಕವಾಗಿ ಇಂದಿಗೂ ಈ ಅಂಕಿಸಂಖ್ಯೆಗಳನ್ನು ಸರಿಪಡಿಸಿಲ್ಲ!)

ಹೀಗೆ ಹಸಿ ಹಸಿ ಕೈಯಲ್ಲಿ ಬಿ‌ಜೆ‌ಪಿಯ ಮೋಸ ಸಿಕ್ಕಿ ಬಿದ್ದಿದ್ದರೂ ಕಾಂಗ್ರೆಸ್ಸಿನವರು ಈ ಪ್ರಕರಣವನ್ನು ಸುಪ್ರೀಂ ಕೋರ್ಟಿಗೆ ಒಯ್ಯದೆ ಸುಮ್ಮನಿದ್ದರು ಹಾಗೂ ಸೋತ ಕಾಂಗ್ರೆಸ್ ಅಭ್ಯರ್ಥಿ ಮಹೇಶರಿಗೂ ಕೋರ್ಟಿಗೆ ಹೋಗಲು ಕಾಂಗ್ರೆಸ್ ಹೈಕಮಾಂಡ್ ಅನುಮತಿಯನ್ನೇ ಕೊಡಲಿಲ್ಲ. ಹೀಗಾಗಿ ಶೆಟ್ಟರ ಕ್ಷೇತ್ರದಲ್ಲಿಯ ಆ ಮಹಾಮೋಸ ಮುಚ್ಚಿ ಹೋಯಿತು. ಈಗ ನೋಡಿದರೆ, ಅದೇ ಕಾಂಗ್ರೆಸ್ಸಿನವರು 2018 ರಲ್ಲಿ ಸಿಕ್ಕಿದ್ದ ಸುವರ್ಣ ಅವಕಾಶವನ್ನು ಕೈಚೆಲ್ಲಿ, ಈಗಿನ ಹರಿಯಾಣ-ಮಹಾರಾಷ್ಟ್ರ ಚುನಾವಣೆಯಲ್ಲಿ ವಿ‌ವಿಪ್ಯಾಟ್ ಮತಚೀಟಿ 100% ಎಣಿಸದಿದ್ದರೆ ಇವಿಎಂ ನಲ್ಲಿಯ ಚುನಾವಣೆ ನಂಬಿಕೆಗೆ ಅರ್ಹವಲ್ಲ ಎಂದು ಅಭಿಯಾನ ನಡೆಸುತ್ತಿರುವುದು ವಿಪರ್ಯಾಸ.

ಕಾಂಗ್ರೆಸ್ಸಿನ ಹೈಕಮಾಂಡ್ ನಲ್ಲಿ ಬೇರೆ ಧೈರ್ಯವಂತರು ಇರುತ್ತಿದ್ದರೆ 2018ರ ಈ ಹುಬ್ಬಳ್ಳಿಯ ಕೇಸನ್ನು ಸುಪ್ರೀಂ ಕೋರ್ಟಿಗೆ ಕೊಂಡು ಹೋಗಿ ಅಲ್ಲಿ ಇದರ ವಿಚಾರಣೆ ಆಗುವಂತೆ ಮಾಡುತ್ತಿದ್ದರು. ಆಗ ಆ ಹುಬ್ಬಳ್ಳಿ ಕ್ಷೇತ್ರದಲ್ಲಿ ಒಟ್ಟು 415 ಇವಿಎಂ ಯಂತ್ರ ಬಳಸಲಾಗಿತ್ತು, ಹಾಗೂ ಪ್ರತಿ ಇವಿಎಂ ನಲ್ಲೂ ಸರಿಯಾಗಿ 50 ಮತಗಳು ಬಿ‌ಜೆ‌ಪಿಗೆ ಅಧಿಕವಾಗಿ ಬಿದ್ದಿದ್ದವು. ಒಂದೆರಡು ಯಂತ್ರಗಳಲ್ಲಿ ಈ ತಪ್ಪು ಆಗಿದ್ದರೆ ನಾವು ಕ್ಷಮಿಸಬಹುದಿತ್ತು. ಆದರೆ ಎಲ್ಲಾ 415 ಇವಿಎಂ ಯಂತ್ರದಲ್ಲೂ ತಲಾ 50 ಮತಗಳು ಹೆಚ್ಚು ಬೀಳಲು ಹೇಗೆ ಸಾಧ್ಯ?  ಹೈಸ್ಕೂಲ್ ಮಕ್ಕಳೂ ಇಂತಹಾ ತಾರ್ಕಿಕ ಪ್ರಶ್ನೆ ಕೇಳದೆ ಬಿಡುತ್ತಿರಲಿಲ್ಲ, ಆದರೆ ಕಾಂಗ್ರೆಸ್ಸಿನ ಹಿರಿಯರು ಮಾತ್ರ ಆಗ ಪೆದ್ದರಂತೆ ಸುಮ್ಮನಿದ್ದರು.

ಅದರಂತೆ 2018 ರಲ್ಲಿ ನಮ್ಮ ಬೆಳ್ತಂಗಡಿ ಕ್ಷೇತ್ರ ಸಹಿತ ಕರ್ನಾಟಕದ ಹಲವೆಡೆ ಸೋತ ಕಾಂಗ್ರೆಸ್ ಅಭ್ಯರ್ಥಿಗಳು ಹೈಕೋರ್ಟಿನಲ್ಲಿ ತಮ್ಮ ಕ್ಷೇತ್ರದ ಫಲಿತಾಂಶದ ವಿರುದ್ಧ ಸಾಕ್ಷಿ ಸಹಿತ ದಾವೆ ಹೂಡುತ್ತೇವೆ ಎಂದು ಮುಂದೆ ಬಂದಿದ್ದರೂ ಕಾಂಗ್ರೆಸ್ ಹೈಕಮಾಂಡ್ ಈ ಎಲ್ಲರನ್ನೂ ಗದರಿ ಸುಮ್ಮನಾಗಿಸಿತು. ಇದರಿಂದಾಗಿ ಇವಿಎಂ ಬದಲಾವಣೆಯಿಂದ ಗೆದ್ದಿದ್ದ ಎಲ್ಲಾ ಬಿ‌ಜೆ‌ಪಿ ಅಭ್ಯರ್ಥಿಗಳು ನಿರಾಳರಾಗಿ ಕಾಂಗ್ರೆಸ್ ಹೈಕಮಾಂಡ್ ಗೆ ಮನಸ್ಸಿನಲ್ಲಿಯೇ ಥ್ಯಾಂಕ್ಸ್ ಹೇಳಿದರಂತೆ.

2019ರ ಲೋಕಸಭಾ ಚುನಾವಣೆಯಲ್ಲಿ ಕಲಬುರ್ಗಿಯಲ್ಲಿ ಸೋತ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆಯವರೂ ತಾನು ಸುಪ್ರೀಂ ಕೋರ್ಟಿಗೆ ಹೋಗಿ ತನ್ನ ಕ್ಷೇತ್ರದ ಫಲಿತಾಂಶವನ್ನು ಪ್ರಶ್ನಿಸುವುದಾಗಿ ಹೇಳಿದರೂ ಕಾಂಗ್ರೆಸ್ ಹೈಕಮಾಂಡ್ ಅವರನ್ನೂ ಸುಮ್ಮನಾಗಿಸಿತು. ಕಾಂಗ್ರೆಸ್ಸಿನ ಇದೇ ಹೇತ್ಲಾಂಡಿತನ ಬಿ‌ಜೆ‌ಪಿಯವರಿಗೆ 2014 ರಿಂದಲೂ ವರದಾನ ಆಗಿರುವುದು.

ಮಹಾರಾಷ್ಟ್ರ ಚುನಾವಣೆ….

ಇದೆ ವರ್ಷ ಏಪ್ರಿಲ್ ಮೇ ತಿಂಗಳಲ್ಲಿ ನಡೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ನಮ್ಮ ನೆರೆಯ ಕಾಸರಗೊಡಿನಲ್ಲಿ ಒಂದು ವಿಚಿತ್ರ ನಡೆಯಿತು. ಕ್ಷೇತ್ರದ ಮತದಾನಕ್ಕೆ ಮುಂಚೆ ಇವಿಎಂ ಮತ್ತು ವಿ‌ವಿಪ್ಯಾಟ್ ಪರೀಕ್ಷಿಸಲು ಅಣಕು ಓಟಿಂಗ್ ಮಾಡುತ್ತಾ ಕಾಂಗ್ರೆಸ್ ಬಟನ್ ಒತ್ತಿದಾಗ ವಿವಿಪ್ಯಾಟ್ ನೊಳಗೆ ಸರಿಯಾಗಿ ಒಂದು ಕಾಂಗ್ರೆಸ್ಸಿನ ಚೀಟಿ ಬೀಳುತ್ತಿತ್ತು. ಆದರೆ ಬಿ‌ಜೆ‌ಪಿಯ ಬಟನ್ ಒಮ್ಮೆ ಒತ್ತಿದಾಗ ಎರಡೆರಡು ಚೀಟಿಗಳು ವಿವಿಪ್ಯಾಟ್ ನಲ್ಲಿ ಒಟ್ಟಿಗೆ ಬೀಳುತ್ತಿದ್ದವು. ಅಂದರೆ ಬಿ‌ಜೆ‌ಪಿಗೆ 1000 ಜನ ವೋಟು ಹಾಕಿದರೆ ಇವಿಎಂ ಮತ್ತು ವಿವಿಪ್ಯಾಟ್ ನಲ್ಲಿ ಅವರಿಗೆ 2000 ವೋಟು ಬೀಳುತ್ತಿದ್ದವು. ದೇಶದಲ್ಲಿ ಬೇರೆಡೆಯೂ  ಹೀಗೆ ಇವಿಎಂ ಮತ್ತು ವಿ‌ವಿಪ್ಯಾಟ್ ಸೆಟ್ ಮಾಡಿರುವ ಸಾಧ್ಯತೆ ತಳ್ಳಿ ಹಾಕಲಾಗದು. ಇವಿಎಂ ಯಂತ್ರವನ್ನು ಹೀಗೆ ಸೆಟ್ ಮಾಡುವುದು ಇಸ್ರೇಲಿನ ಟೆಕ್ನಾಲಜಿಯೆ?  ಇಸ್ರೇಲ್ ನವರು ತಮ್ಮ ದೇಶದ ಚುನಾವಣೆಯಲ್ಲಿ ಇವಿಎಂ ಬಳಸುವುದಿಲ್ಲ ನಿಜ! ಆದರೆ ಬೇರೆ ದೇಶಗಳಿಗಾಗಿ ಇಂತಹಾ ಟೆಕ್ನಾಲಜಿ ತಯಾರಿಸಿ ಕೊಡಬಾರದು ಎಂದೇನಿಲ್ಲವಲ್ಲ? ಎಷ್ಟೇ ಆಗಲಿ, ಮೋದಿಯವರ ಮಿತ್ರ ನೆತನ್ಯಾಹುರ ಆಳ್ವಿಕೆಯ ಇಸ್ರೇಲ್ ನಮ್ಮ ದೇಶಕ್ಕೆ ಪೆಗಾಸೆಸ್ ಸ್ಪೈವೇರ್ ಕೊಟ್ಟವರು ಅಲ್ಲವೇ!? 

ಈ ಬಾರಿಯ ಮಹಾರಾಷ್ಟ್ರದ ಚುನಾವಣೆಯಲ್ಲಿ ಸಂಜೆ 5 ಗಂಟೆಯ ನಂತರ ಕೇವಲ 60 ನಿಮಿಷದಲ್ಲಿ 76 ಲಕ್ಷ ವೋಟುಗಳು ಬಿದ್ದವಂತೆ. ಇದು ಅಸಾಧ್ಯ ಎಂದು ತಜ್ಞರ ಅಭಿಮತ. ಒಂದು ಹಳ್ಳಿಯಲ್ಲಿ ಒಟ್ಟು ಇದ್ದಿದ್ದು 375 ಮತಗಳು ಮಾತ್ರ. ಆದರೆ ಮತ ಎಣಿಕೆಯ ದಿನ ಆ ಹಳ್ಳಿಯ ಇವಿಎಂ ನಲ್ಲಿ 675 ಮತಗಳು ಇದ್ದವು. ಅದೃಶ್ಯ 300 ಮತದಾರರು ಯಾರು?  ಮುಂಬಯಿಯ ದಹಿಸರ್ ಎಂಬ ಕ್ಷೇತ್ರದಲ್ಲಿ ಒಬ್ಬ ಅಭ್ಯರ್ಥಿಗೆ ಅವನ ಮನೆಯವರು ಮಾತ್ರವಲ್ಲ ಅವನು ಸ್ವತಃ ತನಗೆ ತಾನೇ ಹಾಕಿಕೊಂಡಿದ್ದ ಮತವೂ ಇಲ್ಲದೆ ಇವಿಎಂ ಅವನಿಗೆ ಶೂನ್ಯ ಮತ ತೋರಿಸಿತ್ತು! ಈ ಎಲ್ಲಾ ಪ್ರಶ್ನೆಗಳಿಗೆ ಚು.ಆಯೋಗದಿಂದ ಉತ್ತರವಿಲ್ಲ.

ಅದಕ್ಕಾಗಿ ಮುಂದಿನ ಎಲ್ಲಾ ಚುನಾವಣೆಗಳನ್ನು ಬ್ಯಾಲೆಟ್ ಪೇಪರಲ್ಲಿ ಮಾಡಿಸಬೇಕು ಎಂದು ವಿರೋಧ ಪಕ್ಷಗಳು ಒತ್ತಾಯಿಸುತ್ತಿವೆ. ಇಲ್ಲಿಯೂ ಕಾಂಗ್ರೆಸ್ಸಿನ ಧ್ವನಿ ಕ್ಷೀಣವಾಗಿದೆ. ಉತ್ತರ ಭಾರತದ ರಾಜ್ಯಗಳಲ್ಲಿ ಇವಿಎಂ ತಿರುಚಿದಾಗ ಯಾರೂ ಹುಯಿಲೆಬ್ಬಿಸಬಾರದು ಎಂಬ “ಪೂರ್ವಭಾವಿ” ಆಲೋಚನೆಯಿಂದ ಕರ್ನಾಟಕ, ಹಿಮಾಚಲ ಮತ್ತು ತೆಲಂಗಾಣದಲ್ಲಿ ಉದಾರತೆ ತೋರಿ ಕಾಂಗ್ರೆಸ್ಸನ್ನು ಗೆಲ್ಲಲು ಬಿಟ್ಟು, ವಿರೋಧ ಪಕ್ಷಗಳ ಇವಿಎಂ ಟೀಕಾಕಾರರನ್ನು ಬಿ‌ಜೆ‌ಪಿಯವರು ಪೂರ್ವಭಾವಿಯಾಗಿಯೇ ಬಾಯಿ ಮುಚ್ಚಿಸಿದ್ದರು ಅಷ್ಟೇ. ಬ್ಯಾಲೆಟ್ ಪೇಪರ್ ಬಂದರೂ ಆ ಕಾಗದದ ಮತಪತ್ರಗಳಿರುವ ಸಂಪೂರ್ಣ ಪೆಟ್ಟಿಗೆಯನ್ನೇ ಜಿಲ್ಲಾಡಳಿತದ ಸಹಕಾರದಿಂದ ಬದಲಾಯಿಸಬಹುದು ತಾನೇ ಎಂದು ಕೆಲವರು ಸಂಶಯಿಸುತ್ತಿದ್ದಾರೆ.

ಆದರೆ, ಜಗತ್ತಿನಲ್ಲಿ ಅತಿ ದೊಡ್ಡ ಪ್ರಜಾತಂತ್ರ ದೇಶಗಳಾದ ಅಮೆರಿಕಾ, ಕೆನಡಾ, ಆಸ್ಟ್ರೇಲಿಯಾ, ಯೂರೋಪಿಯನ್ ದೇಶಗಳು, ತಂತ್ರಜ್ಞಾನದಲ್ಲಿ ಅತ್ಯಂತ ಮುಂದುವರಿದಿರುವ ಜಪಾನ್, ಜರ್ಮನಿ, ದಕ್ಷಿಣ ಕೊರಿಯಾ ಇವೆಲ್ಲವೂ ಕಾಗದದ ಮತಪತ್ರಗಳನ್ನೇ ಬಳಸಿ ಸಾರ್ವತ್ರಿಕ ಚುನಾವಣೆ ನಡೆಸುವಾಗ ಭಾರತದವರು ಮಾತ್ರ ಇನ್ನೂ ನಂಬಿಕೆಗೆ ಅರ್ಹವಲ್ಲದ ಇವಿಎಂಗೆ ಜೋತು ಬಿದ್ದಿರುವುದು ಯಾಕೆ ಎಂದು ಎಲಾನ್ ಮಸ್ಕ್ ಸಹಿತ ಇಡೀ ಜಗತ್ತೇ ಕೇಳುತ್ತಿದೆ.  ಭಾರತದ ಇವಿಎಂ ಗಳಿಗೆ “ಚಿಪ್” ಗಳನ್ನು ತಯಾರಿಸಿ ಕೊಡುತ್ತಿರುವ ಜಪಾನ್ ದೇಶವೇ ಸ್ವತಃ ತನ್ನ ದೇಶದ ಚುನಾವಣೆಗೆ ಇವಿಎಂ ಬಳಸುತ್ತಿಲ್ಲ!  ಬಿ‌ಜೆ‌ಪಿಯವರಿಗೆ ಅತ್ಯಂತ ಪ್ರಿಯವಾಗಿರುವ ಮತ್ತು ಪೆಗಾಸಸ್ ಸ್ಪೈವೇರ್ ಪೂರೈಸುವ ಇಸ್ರೇಲ್ ದೇಶವೂ ಇವಿಎಂ ಬಳಸುತ್ತಿಲ್ಲ.  ನಮ್ಮ ನೆರೆಯ ಬಾಂಗ್ಲಾದೇಶ, ಶ್ರೀಲಂಕಾ  ಮತ್ತು ಪಾಕಿಸ್ತಾನ ಕೂಡ ಇವಿಎಂ  ಬಳಸುತ್ತಿಲ್ಲ. ಅಂದ ಮೇಲೆ ನಮಗೇಕೆ ಇವಿಎಂ ಬೇಕು?!

ಪ್ರವೀಣ್ ಎಸ್  ಶೆಟ್ಟಿ

ಚಿಂತಕರು

ಭಾಗ ಒಂದನ್ನು ಓದಿದ್ದೀರಾ? ಮತಯಂತ್ರಗಳ ದುರುಪಯೋಗ ತಡೆಯುವುದು ಸಾಧ್ಯವೇ?

More articles

Latest article