ಭಾಗ-1 ಯುಪಿಎ ಸರಕಾರ ಮಾಡಿದ ಎರಡು ಅತಿ ದೊಡ್ಡ ತಪ್ಪುಗಳು
ಇವಿಎಂಗಳಿಗೆ ವಿವಿಪ್ಯಾಟ್ ಜೋಡಿಸಿ ಪ್ರತಿಯೊಂದು ವಿವಿಪ್ಯಾಟ್ ನಲ್ಲಿಯ ನೂರಕ್ಕೆ-ನೂರು ಮತಚೀಟಿ ಪೂರ್ತಿ ಎಣಿಸುವ ಪರಿಪಾಠವನ್ನು ಆಗಿನ ಕೇಂದ್ರದ ಕಾಂಗ್ರೆಸ್ ಸರಕಾರ ಅಂದೇ ಶುರು ಮಾಡಿದ್ದರೆ ನಂತರದ ಲೋಕಸಭೆ ಮತ್ತು ವಿಧಾನಸಭೆಗಳ ಚುನಾವಣೆಗಳಲ್ಲಿಯೂ ಇದೆ ಪರಿಪಾಠ ಮುಂದುವರಿಸಲೇ ಬೇಕಾಗುತ್ತಿತ್ತು ಹಾಗೂ ಇವಿಎಂ ತಿರುಚಿ ಮೋಸ ಮಾಡಲು ಯಾವುದೇ ಪಕ್ಷದವರಿಗೂ ಸಾಧ್ಯವಾಗುತ್ತಿರಲಿಲ್ಲ – ಪ್ರವೀಣ್ ಎಸ್ ಶೆಟ್ಟಿ, ಚಿಂತಕರು
ಮಹಾರಾಷ್ಟ್ರದ ಚುನಾವಣೆಯ ತರುವಾಯ ಕಾಂಗ್ರೆಸ್ ಪಕ್ಷದ ನೇತಾರರು, ನಮ್ಮ ದೇಶದ ಪ್ರಜಾಪ್ರಭುತ್ವ ಈಗ ಅಪಾಯದಲ್ಲಿದೆ ಎಂದು ಹೇಳಿ ಹತಾಶೆ ತೋರಿಸಿದರು. ಆದರೆ 2012-14 ರಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಸ್ವತಃ ಡಾ.ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್- ಯುಪಿಎ ಸರಕಾರವೇ ಮಾಡಿರುವ ಎರಡು ಅತಿ ದೊಡ್ಡ ತಪ್ಪುಗಳಿಂದಾಗಿ ನಮ್ಮ ಪ್ರಜಾತಂತ್ರ ಇಂದು ಈ ದುಸ್ಥಿತಿಗೆ ತಲುಪಿದೆ ಹಾಗೂ ಇಡೀ ದೇಶದಲ್ಲಿ ಸಾಮಾಜಿಕ ಸ್ಥಿತಿ ಮತ್ತು ಆರ್ಥಿಕ ಸ್ಥಿತಿ ವಿಷಮವಾಗಿದೆ. !
ಕಾಂಗ್ರೆಸ್ ಮಾಡಿರುವ ಮೊದಲನೇ ದೊಡ್ಡ ತಪ್ಪು ಯಾವುದೆಂದರೆ- 2013 ರಲ್ಲಿಯೇ ಬಿಜೆಪಿ ಸಂಸದ ಸುಬ್ರಹ್ಮಣ್ಯ ಸ್ವಾಮಿಯವರ ಪೆಟಿಷನ್ ಗೆ ಪ್ರತಿಕ್ರಿಯಿಸಿ ಸುಪ್ರೀಂ ಕೋರ್ಟ್- ದೇಶದ ಮುಂದಿನ ಎಲ್ಲಾ ಚುನಾವಣೆಯಲ್ಲೂ ಇವಿಎಂ ಜೊತೆಗೆ ಪೇಪರ್ ಟ್ರೇಲ್ (ವಿವಿಪ್ಯಾಟ್) ಜೋಡಿಸಬೇಕು, ಹಾಗೂ ವಿವಿಪ್ಯಾಟ್ ಗಳಲ್ಲಿಯ ಮತಚೀಟಿಗಳನ್ನು ಪೂರ್ತಿಯಾಗಿ 100% ಎಣಿಸಿ ಇವಿಎಂ ಜೊತೆ ತಾಳೆ ಮಾಡಬೇಕು ಎಂದು ಆದೇಶಿಸಿತ್ತು. ಆದರೆ ಆಗಿನ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರವು ಸುಪ್ರೀಂ ಕೋರ್ಟಿನ ಈ ಆದೇಶವನ್ನು ಹಗುರವಾಗಿ ತೆಗೆದುಕೊಂಡು ಕೇವಲ ಅರೆಬರೆ ಪಾಲಿಸಿತು ಹಾಗೂ ಪ್ರಾಯೋಗಿಕವಾಗಿ ನಾಗಾಲ್ಯಾಂಡಿನ ನೋಕ್ಸೆನ್ ನಲ್ಲಿ ಕೇವಲ ವಿವಿಪ್ಯಾಟ್ ಬಳಕೆಯ ಹರಕೆ ತೀರಿಸಿತು. ಒಂದು ವೇಳೆ ಆಗಲೇ ಕೇವಲ ನಾಗಾಲ್ಯಾಂಡಿನ ಚುನಾವಣೆಯಲ್ಲಾದರೂ ಇವಿಎಂಗಳಿಗೆ ವಿವಿಪ್ಯಾಟ್ ಜೋಡಿಸಿ ಪ್ರತಿಯೊಂದು ವಿವಿಪ್ಯಾಟ್ ನಲ್ಲಿಯ ನೂರಕ್ಕೆ-ನೂರು ಮತಚೀಟಿ ಪೂರ್ತಿ ಎಣಿಸುವ ಪರಿಪಾಠವನ್ನು ಆಗಿನ ಕೇಂದ್ರದ ಕಾಂಗ್ರೆಸ್ ಸರಕಾರ ಅಂದೇ ಶುರು ಮಾಡಿದ್ದರೆ ನಂತರದ ಲೋಕಸಭೆ ಮತ್ತು ವಿಧಾನಸಭೆಗಳ ಚುನಾವಣೆಗಳಲ್ಲಿಯೂ ಇದೆ ಪರಿಪಾಠ ಮುಂದುವರಿಸಲೇ ಬೇಕಾಗುತ್ತಿತ್ತು ಹಾಗೂ ಇವಿಎಂ ತಿರುಚಿ ಮೋಸ ಮಾಡಲು ಯಾವುದೇ ಪಕ್ಷದವರಿಗೂ ಸಾಧ್ಯವಾಗುತ್ತಿರಲಿಲ್ಲ. ಒಂದು ವೇಳೆ ಅಂದು ಇದು ಸಾಕಾರವಾಗಿದ್ದರೆ ಇಂದು ನಮ್ಮ ದೇಶದ ರಾಜಕೀಯ ಚಿತ್ರಣವೇ ಬೇರೆಯಾಗಿರುತ್ತಿತ್ತು ಹಾಗೂ ಈಗ ಅಧಿಕಾರದಲ್ಲಿರುವ ಗುಜರಾತಿನ ಕೈಚಳಕದಾರರು ದೇಶದ ಯಾವುದೋ ಮೂಲೆಯಲ್ಲಿ ನಿವೃತ್ತ ಜೀವನ ನಡೆಸುತ್ತಾ ಇರುತ್ತಿದ್ದರು. ಜತೆಗೆ ನಮ್ಮ ದೇಶ ಆರ್ಥಿಕವಾಗಿ ಸುಭದ್ರ ಸ್ಥಾನದಲ್ಲಿ ಇರುತ್ತಿತ್ತು, ಮತ್ತು ಎಲ್ಲೆಡೆ ಕೋಮು ಸೌಹಾರ್ದ ನೆಲೆಸಿರುತ್ತಿತ್ತು. 2011-12 ರಲ್ಲಿ ಅಡ್ವಾಣಿ ಮತ್ತು ಮೋದಿಯವರ ನೇತೃತ್ವದಲ್ಲಿ ಬಿಜೆಪಿ ಯವರು ಇವಿಎಂ ವಿರುದ್ಧ ಹಲವಾರು ದಪ್ಪ ಪುಸ್ತಕಗಳನ್ನು ಬರೆದಿದ್ದಲ್ಲದೆ ಸುಪ್ರೀಂ ಕೋರ್ಟಿನಲ್ಲಿಯೂ ಮತಯಂತ್ರಗಳ ವಿರುದ್ಧ ದಾವೆ ಹೂಡಿ ಬ್ಯಾಲೆಟ್ ಪೇಪರ್ ಮರಳಿ ತರಬೇಕೆಂದು ಉಗ್ರ ಅಭಿಯಾನ ನಡೆಸಿದ್ದರು. ಆದರೆ ಈಗ ಬಿಜೆಪಿಯವರು ಅದೇ ಮತಯಂತ್ರದ ದುರ್ಲಾಭ ಪಡೆಯುತ್ತಿರುವುದು ವಿಪರ್ಯಾಸ.
ಯುಪಿಎ ಸರಕಾರದ ಎರಡನೇ ಘೋರ ತಪ್ಪೆಂದರೆ- 2012 ರಲ್ಲಿ ಉತ್ತರ ಪ್ರದೇಶದ ಆಗಿನ ಮುಖ್ಯಮಂತ್ರಿ ಮಾಯಾವತಿಯವರು ತನ್ನ ಬೃಹತ್ ರಾಜ್ಯವನ್ನು ನಾಲ್ಕು ಸಣ್ಣ ರಾಜ್ಯಗಳಾಗಿ ವಿಭಾಗಿಸಬೇಕು ಎಂಬ ಪ್ರಸ್ತಾವನೆಯನ್ನು ತಮ್ಮ ವಿಧಾನಸಭೆಯಲ್ಲಿ ಪಾಸ್ ಮಾಡಿ ಕೇಂದ್ರ ಸರಕಾರಕ್ಕೆ ಕಳುಹಿಸಿದ್ದರು. (ಆದಾಗಲೇ ಉ.ಪ್ರದಲ್ಲಿ 16 ಕೋಟಿ ಜನಸಂಖ್ಯೆ ಇತ್ತು. ಈಗ 26 ಕೋಟಿ ಜನಸಂಖ್ಯೆ ಇದೆ!). ಆದರೆ ಕೇಂದ್ರದ ಕಾಂಗ್ರೆಸ್-ಯುಪಿಎ ಸರಕಾರವು ಮಾಯಾವತಿಯವರ ಈ ಅಧಿಕೃತ ಪ್ರಸ್ತಾವನೆಯನ್ನು ಕಡೆಗಣಿಸಿತು. ಅದರಿಂದಾಗಿ ಉತ್ತರ ಪ್ರದೇಶವು ಅಂದಿನಿಂದ ಇಂದಿನ ವರೆಗೂ ಜಂಗಲ್ ರಾಜ್ಯವಾಗಿಯೇ ಇದೆ, ಹಾಗೂ 26 ಕೋಟಿ ಜನರ ಜೀವನ ನರಕ ಸದೃಶ್ಯವಾಗಿ ಮುಂದುವರಿದಿದೆ.
ಅದೇ ಸಮಯದಲ್ಲಿ ಅದೇ ಯುಪಿಎ ಸರಕಾರವು ವಿನಾಕಾರಣ ಟಿಆರ್‌ಎಸ್ ಪಕ್ಷದ ಒತ್ತಡಕ್ಕೆ ಮಣಿದು ಆಂಧ್ರಪ್ರದೇಶವನ್ನು ತೆಲಂಗಾಣ ಮತ್ತು ಆಂಧ್ರ ಎಂದು ವಿಭಾಗಿಸಿತು! ಆದರೂ ತರುವಾಯ ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷವು ಟಿಆರ್‌ಎಸ್ ನಿಂದ ಬೆನ್ನಿಗೆ ಚೂರಿ ಹಾಕಿಸಿಕೊಂಡಿದ್ದಲ್ಲದೆ ಆಂಧ್ರದ ಭಾಗದಲ್ಲಿ ಸಂಪೂರ್ಣ ನೆಲೆ ಕಳೆದುಕೊಂಡಿತು. ಒಂದು ವೇಳೆ ಅಂದು ಕೇವಲ ಒಂಬತ್ತು ಕೋಟಿ ಜನಸಂಖ್ಯೆ ಇದ್ದ ಆಂಧ್ರ ಪ್ರದೇಶವನ್ನು ವಿಭಜಿಸುವ ಜತೆಜತೆಗೇ ಆಗ 16 ಕೋಟಿ ಜನಸಂಖ್ಯೆ ಇದ್ದ ಉತ್ತರ ಪ್ರದೇಶವನ್ನೂ ವಿಭಜಿಸಿದ್ದರೆ ಇಂದು ಉ.ಪ್ರದ ವಿಭಜಿತ ನಾಲ್ಕೂ ರಾಜ್ಯಗಳಲ್ಲಿ ಕಾಂಗ್ರೆಸ್ ಗಟ್ಟಿ ಬೇರು ಗಳಿಸಿಕೊಳ್ಳುತ್ತಿತ್ತು. ಜತೆಗೆ ತೆಲಂಗಾಣದ ಒಟ್ಟಿಗೆ ಆಂಧ್ರದಲ್ಲಿಯೂ ಕಾಂಗ್ರೆಸ್ ತನ್ನ ಬೇರು ಉಳಿಸಿಕೊಳ್ಳುತ್ತಿತ್ತು.
ಉತ್ತರ ಪ್ರದೇಶದಂತ 26 ಕೋಟಿ ಜನಸಂಖ್ಯೆಯ ಬಡ ಅರೆಸಾಕ್ಷರ ರಾಜ್ಯದ ಕಾನೂನು ವ್ಯವಸ್ಥೆಯನ್ನು ಬಿಜೆಪಿ ಪಕ್ಷ ಬಿಡಿ, ಕಾಂಗ್ರೆಸ್ ಸಹಿತ ಯಾವುದೇ ಪಕ್ಷವೂ ಸುಲಭವಾಗಿ ಸರಿಪಡಿಸಲು ಸಾಧ್ಯವಿಲ್ಲ. ಉತ್ತರ ಪ್ರದೇಶ ವಿಭಜನೆಯಾಗಿ ನಾಲ್ಕು ಸಣ್ಣ ರಾಜ್ಯವಾಗಿದ್ದರೆ ಅಲ್ಲಿ ಅಭಿವೃದ್ಧಿ ವೇಗ ಪಡೆಯುತ್ತಿತ್ತು ಹಾಗೂ ಕಾನೂನು ವ್ಯವಸ್ಥೆ ಸರಿಪಡಿಸಬಹುದಿತ್ತು. ಉ.ಪ್ರ ನಾಲ್ಕು ಭಾಗವಾಗಿ ಸಣ್ಣ ರಾಜ್ಯಗಳಾದರೆ ಪಶ್ಚಿಮ ಭಾಗಕ್ಕೆ ಹರಿತ್ ಪ್ರದೇಶ, ಮಧ್ಯದ ಭಾಗಕ್ಕೆ ಅವಧಾ, ರಾಜಸ್ಥಾನಕ್ಕೆ ತಾಗಿರುವ ನೈರುತ್ಯ ಭಾಗಕ್ಕೆ ಬುಂದೇಲಖಂಡ, ಹಾಗೂ ಬಿಹಾರಕ್ಕೆ ತಾಗಿರುವ ಪ್ರದೇಶಕ್ಕೆ ಪೂರ್ವಂಚಲ ಎಂದು ಮಯಾವತಿಯವರು 2012-13 ರಲ್ಲಿಯೇ ಹೆಸರು ಸೂಚಿಸಿದ್ದರು. ದಿಲ್ಲಿಗೆ ಹತ್ತಿರವಿರುವ ಆಧುನಿಕ “ಗ್ರೇಟರ್ ನೋಯ್ಡಾ” ನಗರವನ್ನು ಹೊಂದಿರುವ ಪಶ್ಚಿಮ-ಉ.ಪ್ರ ಈಗಾಗಲೇ ಕೃಷಿ ಮತ್ತು ಕೈಗಾರಿಕೆಗಳಲ್ಲಿ ಹರಿಯಾಣಾ-ಪಂಜಾಬಿನಷ್ಟೆ ಅಭಿವೃದ್ಧಿ ಹೊಂದಿದೆ, ಆದರೆ ಬಿಹಾರಕ್ಕೆ ತಾಗಿರುವ ಪೂರ್ವ-ಉ.ಪ್ರ (ಪೂರ್ವಂಚಲ) ಮಾತ್ರ ಬಿಹಾರಕ್ಕಿಂತಲೂ ಹೆಚ್ಚು ಹಿಂದುಳಿದಿದೆ. 2013-14 ರಲ್ಲಿಯೇ ಉ.ಪ್ರ ವಿಭಜನೆಯಾಗಿದ್ದರೆ 2017 ರಲ್ಲಿ ಆದಿತ್ಯನಾಥರ ಭೀಷಣ ಬುಲ್ಡೋಜರ್ ಸರಕಾರ ಅಧಿಕಾರಕ್ಕೆ ಬಂದಿದ್ದರೂ ಅದು ಕೇವಲ ಪೂರ್ವಾಂಚಲ ಎಂಬ ಪೂರ್ವ-ಉ.ಪ್ರ ದ ಸಣ್ಣ ಪ್ರದೇಶಕ್ಕೆ ಸೀಮಿತವಾಗಿರುತ್ತಿತ್ತು. ಉಳಿದ ಮೂರು ಭಾಗಗಳು ಬೇರೆ ಹೃದಯವಂತ ನೇತಾರರ ಅಥವಾ ಬೇರೆ ಪಕ್ಷಗಳ ಆಡಳಿತದಲ್ಲಿ ಉತ್ತಮ ಕಾನೂನು ವ್ಯವಸ್ಥೆ ಮತ್ತು ಆರ್ಥಿಕ ಅಭಿವೃದ್ಧಿ ಹೊಂದಿರುತ್ತಿದ್ದವು. ಅದೇ 2012-13ರ ಮಾಯಾವತಿಯವರ ಹಳೆಯ ಪ್ರಸ್ತಾವನೆಯನ್ನು ಈಗಲೂ ಊರ್ಜಿತಗೊಳಿಸಬಹುದು. ಆದರೆ ಎಲ್ಲಾ ಪಕ್ಷಗಳಲ್ಲೂ ಇಚ್ಛಾ ಶಕ್ತಿಯ ಕೊರತೆ ಇದೆ. ಜತೆಗೆ ಚುನಾವಣೆಯ ಲಾಭ-ನಷ್ಟದ ಜಾತಿವಾರು ಮತ್ತು ಪ್ರದೇಶವಾರು ಲೆಕ್ಕಾಚಾರವೂ ಅಡಗಿದೆ. ಉ.ಪ್ರದ ಎಲ್ಲಾ ಪಕ್ಷದ ರಾಜಕಾರಣಿಗಳು ಮತ್ತು ಡಾನ್ ಗಳು ತಮ್ಮ ಕಳ್ಳ ಗಳಿಕೆಯನ್ನು ರಾಜಧಾನಿ ದಿಲ್ಲಿಗೆ ತಾಗಿರುವ ಆಧುನಿಕ ನಗರವಾದ ನೋಯ್ಡಾ ದಲ್ಲಿ ಹೂಡಿಕೆ ಮಾಡಿದ್ದಾರೆ. ಹಾಗಾಗಿ ಸಮಸ್ತ ಉ.ಪ್ರ.ದ ರಾಜಕಾರಣಿಗಳು ಮತ್ತು ಡಾನ್ ಗಳು ನೋಯ್ಡಾ ನಗರ ತಮ್ಮ ಕೈತಪ್ಪಿ ಹೋಗುವುದನ್ನು ಸಹಿಸುತ್ತಿಲ್ಲ. ಅದಕ್ಕಾಗಿ ಉ.ಪ್ರ ರಾಜ್ಯದ ವಿಭಜನೆಗೆ ಈ ಸ್ಥಾಪಿತ ಹಿತಾಸಕ್ತಿಗಳು ಅಡ್ಡಗಾಲು ಹಾಕುತ್ತಿದ್ದಾರೆ. ಎಲ್ಲರಿಗೂ ತಮ್ಮ ಸ್ವಾರ್ಥವೇ ಮುಖ್ಯ!
ಆಂಧ್ರವನ್ನು 2013 ರಲ್ಲಿ ವಿಭಜಿಸಿದಾಗ ಆಡಳಿತಾತ್ಮಕವಾಗಿ ಹೆಚ್ಚು ಸಮಸ್ಯೆ ಆಗಿರಲಿಲ್ಲ. ಹಾಗಿರುವಾಗ ಉ.ಪ್ರ ವನ್ನು ಈಗ ನಾಲ್ಕು ರಾಜ್ಯಗಳಾಗಿ ವಿಭಾಗಿಸಿದರೂ ಹೆಚ್ಚಿನ ಆಡಳಿತಾತ್ಮಕ ಸಮಸ್ಯೆ ಉಂಟಾಗಲಾರದು. ‘ಅವಧ’ ಪ್ರದೇಶಕ್ಕೆ ಈಗಾಗಲೇ ಇರುವ ಲಖನೌ ಮಹಾನಗರವೇ ರಾಜಧಾನಿಯಾಗಿ ಮುಂದುವರಿಯುತ್ತದೆ. ಇನ್ನು ಉಳಿದ ಮೂರು ಭಾಗಕ್ಕೆ ಮೂರು ಹೊಸ ರಾಜಧಾನಿ ಬೇಕಾಗಬಹುದು. ಪಶ್ಚಿಮದ ಹರಿತ್ ಪ್ರದೇಶಕ್ಕೆ ‘ನೋಯ್ಡಾ ಅಥವಾ ಆಗ್ರಾ ಅಥವಾ ಅಲಿಗಢ’ ರಾಜಧಾನಿ ಆಗಬಹುದು, ನೈರುತ್ಯದ ಬುಂದೇಲಖಂಡ ಭಾಗಕ್ಕೆ ‘ಝಾನ್ಸಿ’ ನಗರ ರಾಜಧಾನಿ ಆಗಬಹುದು. ಇನ್ನು ಅತ್ಯಂತ ಹಿಂದುಳಿದ ಪೂರ್ವದ ಪೂರ್ವಾಂಚಲಕ್ಕೆ ಗೊರಖಪುರ ಅಥವಾ ವಾರಣಾಸಿ ಅಥವಾ ಅಲಹಾಬಾದ್ (ಪ್ರಯಾಗ್ ರಾಜ್) ರಾಜಧಾನಿ ಆಗಬಹುದು.
ಉ.ಪ್ರ ದ ವಿಭಜನೆಯಿಂದ ಇತರ ರಾಜ್ಯಗಳಿಗೆ ಆಗುವ ಲಾಭವೇನೆಂದರೆ- ನಮ್ಮ ಕರ್ನಾಟಕದ ತೆರಿಗೆ ಸಂಗ್ರಹದ 85% ಭಾಗವನ್ನು ಉತ್ತರ ಪ್ರದೇಶದ ಗುಡಾಣ ಹೊಟ್ಟೆಗೆ ಸುರಿಯಬೇಕಿಲ್ಲ. ಯಾಕೆಂದರೆ ಪಶ್ಚಿಮದ ಹರಿತ್ ಪ್ರದೇಶವು ಹರಿಯಾಣದಷ್ಟೆ ಕೈಗಾರಿಕೆ ಮತ್ತು ಕೃಷಿಯಲ್ಲಿ ಮುಂದುವರಿದಿದೆ. ಹಾಗಾಗಿ ಅವರ ತೆರಿಗೆ ಸಂಗ್ರಹ ಅವರ ಅಭಿವೃದ್ಧಿಗೆ ಸಾಕಾಗುತ್ತದೆ. ಇನ್ನು ಮಧ್ಯದ ಅವಧಾ ಪ್ರದೇಶದಲ್ಲಿಯೂ ಕಾನ್ಪುರದಂತಹಾ 32 ಲಕ್ಷ ಜನಸಂಖ್ಯೆಯಿರುವ ಔದ್ಯೋಗಿಕ ನಗರವಿದೆ, ಜತೆಗೆ 40 ಲಕ್ಷ ಜನಸಂಖ್ಯೆಯುಳ್ಳ ಲಖನೌ ನಗರ ಇದೆ. ಇನ್ನು ನೈರುತ್ಯದ ಬುಂದೇಲಖಂಡದಲ್ಲಿ ಝಾನ್ಸಿಯಂತಹ ದೊಡ್ಡ ಔದ್ಯೋಗಿಕ ನಗರವಿದೆ, ಮತ್ತು ಅಲ್ಲಿ ಸುತ್ತಮುತ್ತ ಅನೇಕ ಮಿಲಿಟರಿ ರಕ್ಷಣಾ ಸಾಮಗ್ರಿ ಉತ್ಪಾದಿಸುವ ದೊಡ್ಡ ಕೈಗಾರಿಕೆಗಳಿವೆ. ಪೂರ್ವಂಚಲವು ಬಿಹಾರಕ್ಕಿಂತಲೂ ಹೆಚ್ಚು ಬಡತನ ಹೊಂದಿದ್ದರೂ ಅಲ್ಲಿ ವಾರಣಾಸಿ, ಅಲಹಾಬಾದ್, ಅಯೋಧ್ಯಾ ಮತ್ತು ಗೋರಖಪುರ್ ನಂತಹಾ ಪ್ರಸಿದ್ಧ ಹಿಂದೂ ಪ್ರವಾಸಿ ಕೇಂದ್ರಗಳಿವೆ. ಅಷ್ಟೇ ಅಲ್ಲ ಗೌತಮ ಬುದ್ಧ ನಿರ್ವಾಣ ಹೊಂದಿದ ಪವಿತ್ರ ಸ್ಥಳ ಇರುವ ವಿಶ್ವಪ್ರಸಿದ್ಧ ಬೌದ್ಧ ಕೇಂದ್ರವಾದ ‘ಖುಷಿನಗರವೂ’ ಗೋರಖಪುರದ ಹತ್ತಿರವೇ ಇದೆ. ಈ ಪ್ರವಾಸಿ ಕೇಂದ್ರಗಳಿಂದ ಆ ರಾಜ್ಯಕ್ಕೆ ದೊಡ್ಡ ಮೊತ್ತದ ತೆರಿಗೆ ಸಂಗ್ರಹ ಸಿಗುತ್ತದೆ.
ಉ.ಪ್ರ ವಿಭಜನೆಯಾದರೆ ಆರ್ಥಿಕವಾಗಿ ಸಶಕ್ತವಾದ ಮೂರು ಭಾಗಗಳಿಗೆ ದಕ್ಷಿಣ ಭಾರತದ ರಾಜ್ಯಗಳಿಂದ ಪಡೆದ ತೆರಿಗೆಯಲ್ಲಿ ದೊಡ್ಡ ಪಾಲನ್ನು ಕೊಡಬೇಕಾಗಿಲ್ಲ. ಅವರವರ ತೆರಿಗೆ ಗಳಿಕೆಯೇ ಅವರಿಗೆ ಸಾಕಾಗುತ್ತದೆ. ಕೇವಲ ಪೂರ್ವಾಂಚಲಕ್ಕೆ ಕೇಂದ್ರದಿಂದ ಧನಸಹಾಯ ಬೇಕಾಗುತ್ತದೆ. ಆದರೆ ಈಗ ಕೇಂದ್ರ ಸರಕಾರವು ಉತ್ತರ ಪ್ರದೇಶದ ಒಟ್ಟು 26 ಕೋಟಿಯ ಬೃಹತ್ ಜನಸಂಖ್ಯೆಯನ್ನು ಹಾಗೂ ವಿಸ್ತಾರವಾದ ಭೂಪಟವನ್ನು ತೋರಿಸಿ ಯುಪಿಗೆ ಕೇಂದ್ರ ಸರಕಾರದಿಂದ ಹೆಚ್ಚು ಸಹಾಯ ಬೇಕು ಎಂಬ ನೆಪವೊಡ್ಡಿ ನಮ್ಮ ದಕ್ಷಿಣ ರಾಜ್ಯಗಳ ತೆರಿಗೆ ಸಂಗ್ರಹದಿಂದ ಅತಿ ದೊಡ್ಡ ಪಾಲನ್ನು ಉ.ಪ್ರದ ಬಕಾಸುರ ಹೊಟ್ಟೆಗೆ ಸುರುವುತ್ತಿದೆ. ಒಂದು ವೇಳೆ ಉ.ಪ್ರ ರಾಜ್ಯ ವಿಭಜನೆಯಾದರೆ ಅಲ್ಲಿಯ ಮುಂದುವರಿದ ಮೂರು ಭಾಗಕ್ಕೆ ‘ಬಡ ರಾಜ್ಯ’ ಎಂಬ ಟ್ಯಾಗ್ ಬಿಟ್ಟು ಹೋಗುತ್ತದೆ. ಹಾಗಾಗಿ ನಮ್ಮ ದಕ್ಷಿಣ ಭಾರತದ ತೆರಿಗೆ ಸಂಗ್ರಹವನ್ನು ಅವರಿಗೆ ಧಾರೆ ಎರೆಯಬೇಕಿಲ್ಲ. (ನಾನು ನಾಲ್ಕು ವರ್ಷ ಕಾನ್ಪುರದಲ್ಲಿ ಬ್ಯಾಂಕ್ ಅಧಿಕಾರಿಯಾಗಿ ಉದ್ಯೋಗ ಮಾಡಿದ್ದೇನೆ).
ಇನ್ನೊಂದು ಮುಖ್ಯ ವಿಷಯವೆಂದರೆ ಯು.ಪಿಯ ಎಲ್ಲಾ ನಾಲ್ಕೂ ಭಾಗಗಳಲ್ಲಿ ತೆರಿಗೆ ಸಂಗ್ರಹ ಸಮರ್ಪಕವಾಗಿಲ್ಲ. ಅಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿಯೂ ದಲಾಲರ ಮಾಫಿಯಾದ್ದೇ ಕಾರುಬಾರು. ಎಲ್ಲಾ ಕ್ಷೇತ್ರದಲ್ಲಿಯೂ ಭಾರಿ ಭ್ರಷ್ಟಾಚಾರ ನಡೆಯುತ್ತದೆ. ಅದರಿಂದಾಗಿ ನೇರ ತೆರಿಗೆಯಾಗಲಿ ಅಥವಾ ಪರೋಕ್ಷ ತೆರಿಗೆಯಾಗಲಿ ಮುಕ್ಕಾಲು ಪಾಲು ಸೋರಿಕೆಯಾಗಿ ಹೋಗುತ್ತದೆ. ಅಂತಹಾ ಯುಪಿ ರಾಜ್ಯದ ವಿಭಜನೆಯಿಂದ ತೆರಿಗೆ ಇಲಾಖೆಗಳನ್ನು ಸ್ವಲ್ಪ ಮಟ್ಟಿಗಾದರೂ ಸರಿಪಡಿಸಬಹುದು. ಅಲ್ಲಿಯ ತೆರಿಗೆ ಸಂಗ್ರಹ ಉತ್ತಮವಾದರೆ ನಮ್ಮ ದಕ್ಷಿಣ ರಾಜ್ಯಗಳ ತೆರಿಗೆ ಸಂಗ್ರಹದ ಮೇಲೆ ಅವರ ಅವಲಂಬನೆ ಕಡಿಮೆಯಾಗುತ್ತದೆ. ಆಂಧ್ರವನ್ನು 2014 ರಲ್ಲಿ ವಿಭಜಿಸಿದಾಗ ಆಡಳಿತಾತ್ಮಕವಾಗಿ ಹೆಚ್ಚು ಸಮಸ್ಯೆ ಆಗಲಿಲ್ಲ. ಹಾಗಿರುವಾಗ ಉ.ಪ್ರ ವನ್ನು ಈಗ ನಾಲ್ಕು ರಾಜ್ಯಗಳಾಗಿ ವಿಭಾಗಿಸಿದರೂ ಹೆಚ್ಚಿನ ಆಡಳಿತಾತ್ಮಕ ಸಮಸ್ಯೆ ಉಂಟಾಗಲಾರದು.
(ಎರಡನೇ ಭಾಗ- ಮತಯಂತ್ರಗಳ ದುರುಪಯೋಗ ನಾಳೆ 14.12.2024) ಪ್ರಕಟವಾಗಲಿದೆ)
ಪ್ರವೀಣ್ ಎಸ್ ಶೆಟ್ಟಿ
ಚಿಂತಕರು
ಇದನ್ನೂ ಓದಿ- ಮತಗಳ್ಳತನಕ್ಕೆ ಇವಿಎಂ ಬಳಕೆ; ಅನುಮಾನಗಳ ಮುಂದುವರಿಕೆ