ಕ್ಯಾಲಿಫೋರ್ನಿಯ ಮತ್ತು ಕಾಡ್ಗಿಚ್ಚಿನ ಉರಿ |  ಭಾಗ 2

Most read

‌ಒಂದೇ ಸಮನೆ ಹೇರಳ ಒಣಹವೆಯಲ್ಲಿ ಬೇಯುತ್ತಿದ್ದ ಲಾಸ್‍ಎಂಜೆಲಿಸ್ ಕೌಂಟಿಗೆ ಕಾಡ್ಗಿಚ್ಚಿನ ಅಂಜಿಕೆ ಸದಾ ಬೆನ್ನು ಹತ್ತಿಯೆ ಇತ್ತು. ಅಲ್ಲಿ ಹಲವು ಬಾರಿ ಹಲವು ಕಡೆ ಗಾಳಿಯ ತೇವಾಂಶ ಶೇಕಡಾ ಸೊನ್ನೆಯನ್ನು ತಲುಪಿತ್ತು. ಇದೊಂದೆ ಸುಳುಹು ಸಾಕಿತ್ತು, ಕಾಡ್ಗಿಚ್ಚನ್ನು ಮುಂಗಾಣಲು. ಮುಂಜಾಗ್ರತೆಯಾಗಿ ಬೆಂಕಿ ನಂದಿಸಲು ದೊಡ್ಡ ಪ್ರಮಾಣದಲ್ಲಿ ಅಗತ್ಯವಿರುವ ಎಲ್ಲ ಮುನ್ನೇರ್ಪಾಡುಗಳನ್ನು ಮಾಡಿಕೊಳ್ಳಬಹುದಿತ್ತು. ಹಾಗಿದ್ದರೆ ಅಮೆರಿಕಾದ ಹವಾಮಾನ ಸಂಸ್ಥೆಗಳು ಏನು ಮಾಡುತ್ತಿದ್ದವು? ಕೆ.ಎಸ್.ರವಿಕುಮಾರ್, ವಿಜ್ಞಾನ ಲೇಖಕರು.

ಭಾಗ 1 ಈ ಲಿಂಕ್‌ ನಲ್ಲಿದೆ ಕ್ಯಾಲಿಫೋರ್ನಿಯ ಮತ್ತು ಕಾಡ್ಗಿಚ್ಚಿನ ಉರಿ

ಕ್ಯಾಲಿಫೋರ್ನಿಯ ರಾಜ್ಯ ಹಳೆಯ ಕಾಡ್ಗಿಚ್ಚುಗಳಿಂದ ಪಾಠ ಕಲಿತದ್ದು ಏನು? ಹಿಂದೆಲ್ಲ ನಾಲ್ಕಾರು ತಿಂಗಳುಗಳವರೆಗೆ ಕಾಡ್ಗಿಚ್ಚುಗಳು ಕ್ಯಾಲಿಫೋರ್ನಿಯಾದಲ್ಲಿ ನಿರಂತರ ಉರಿದ ಉದಾಹರಣೆಗಳಿವೆ. ಹೀಗಿದ್ದೂ ಅಮೆರಿಕ ಏಕೆ ಮೈಮರೆಯಿತು? ಹವಾಮಾನ ಬದಲಾವಣೆಯ ಕಾವು ತಟ್ಟಿದ್ದು ಇನ್ನೂ ಸಾಲದೆ ಅದಕ್ಕೆ?

ಕಾರಣ ಹುಡುಕುವ ಕಟಪಟಿಯಲ್ಲಿ 

ಈ ಬಾರಿಯ ಲಾಸ್‍ಎಂಜೆಲಿಸ್ ಕೌಂಟಿ ಕಾಡ್ಗಿಚ್ಚು ಹಲವು ಹೊಸ ಅನುಭವಗಳನ್ನು ನೀಡಿದೆ. ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಡ್ಗಿಚ್ಚುಗಳು ಏಳುವುದಿಲ್ಲ. ಆದರೆ ಈಗ ಆ ನೆಮ್ಮುಗೆಯೂ ಸುಟ್ಟು ಕರಕಲಾಯಿತು. ಲಾಸ್‍ಎಂಜೆಲಿಸ್ ಇರುವ ದಕ್ಷಿಣ ಕ್ಯಾಲಿಫೋರ್ನಿಯ ಪ್ರದೇಶ ಕಾಡ್ಗಿಚ್ಚಿಗೂ ಮುಂಚೆ ಅಕ್ಟೋಬರ್‌ ನಿಂದ ವಿಪರೀತ ಒಣಹವೆಯನ್ನು ದಾಖಲಿಸುತ್ತ ಬಂದಿತ್ತು. ಬಹುತೇಕ ಎಲ್ಲಿಯೂ ಮಳೆಯಾಗಿರಲಿಲ್ಲ. ಆದ ಕಡೆಯೂ ವಾಡಿಕೆಯಲ್ಲಿ ಶೇಕಡಾ 10ರಷ್ಟು ಮಳೆ ಮಾತ್ರ ಬಿದ್ದಿತ್ತು. ಸಹಜವಾಗಿಯೆ ಸಾಮಾನ್ಯ ಮಟ್ಟಕ್ಕಿಂತ ಹೆಚ್ಚು ಕಾದ ಗಾಳಿ ಅಲ್ಲಿ ಬೀಸಿಕೊಂಡಿರುತ್ತಿತ್ತು. ಚಳಿಗಾಲ ಬಂದರೂ ಒಣಹವೆಯ ವಾತಾವರಣ ತಂಪಾಗಿರಲಿಲ್ಲ. ಇಲ್ಲೇ ಹವಾಮಾನ ತನ್ನ ಋತುಬದ್ಧ ಸಾಮಾನ್ಯ ಲಕ್ಷಣವನ್ನು ಕಳೆದುಕೊಂಡಿದ್ದನ್ನು ಗಮನಿಸಬೇಕು. ಬಿರು ಬಿಸಿಲು ಮತ್ತು ಕಾದ ಗಾಳಿ ಎರಡೂ ಕೈಕೈ ಹಿಡಿದು ದೌಡಾಯಿಸಿದರೆ ತಡೆದು ನಿಲ್ಲಿಸುವವರು ಯಾರಿದ್ದಾರು?

ಈ ಸನ್ನಿವೇಶದಲ್ಲಿ ಕಾಡ್ಗಿಚ್ಚು ಏಳಲು ಬೇಕಾದಷ್ಟು ಅವಕಾಶಗಳಿರುತ್ತವೆ. (ಮುಖ್ಯವಾಗಿ ಕಪ್ಪುಬಣ್ಣವಿರುವ) ತರಗೆಲೆಯಂತಹ ಒಣ ಹಗುರ ವಸ್ತುಗಳು ಬಿಸಿಲ ಕಾವಿಗೆ ಸತತ ಕಾದು ಬೇಗ ಹೊತ್ತಿಕೊಳ್ಳುತ್ತವೆ, ಬೇಡವೆಂದು ಬಿಸಾಡಿದ ಗಾಜು, ಲೋಹದ ಚೂರುಗಳೂ ಕಾದು ತಮ್ಮ ಸಂಪರ್ಕಕ್ಕೆ ಬಂದ ಒಣ ವಸ್ತುಗಳನ್ನು ಉರಿಸುತ್ತವೆ, ಕೊಳೆತ ಜೈವಿಕ ಪದಾರ್ಥಗಳಲ್ಲಿ ಹುದುಗಿರುವ ಮಿಥೇನ್ ಹೊತ್ತಿ ಉರಿಯಬಹುದು, ಹಲವು ವೇಳೆ ಮನುಷ್ಯರು ಅರ್ಧ ಸೇದಿ ಎಸೆದ ಸಿಗರೇಟುಗಳಿಂದಲೂ ಬೆಂಕಿ ಹೊತ್ತಬಹುದು, ಕಸ ಸುಡಲು ಹಾಕಿದ ಬೆಂಕಿ ಹೆಬ್ಬೆಂಕಿಯಾಗಿ ಹಬ್ಬುತ್ತ ಹೋಗಬಹುದು, ಬಿರುಸು ಗಾಳಿಗೆ ವಿದ್ಯುತ್ ಕಂಬ ಮತ್ತು ತಂತಿಗಳು ಕಡಿದು ಬಿದ್ದು ಶಾರ್ಟ್ ಸರ್ಕ್ಯೂಟ್ ಬೆಂಕಿ ಹೊತ್ತಬಹುದು, ವಿಹಾರಕ್ಕೆ ಹೋದಾಗ ಹಾಕಿದ ‘ಕ್ಯಾಂಪ್‍ಫೈರ್’ ಅನ್ನು ನಂದಿಸದಿದ್ದರೆ ಮತ್ತು ಪಟಾಕಿಗಳನ್ನು ಸಿಡಿಸುವಾಗ ಎಚ್ಚರಿಕೆ ವಹಿಸದಿದ್ದರೆ ತುಡುಗು ಬೆಂಕಿ ಹರಡಬಹುದು, ಗುಡುಗು ಸಿಡಿಲಿನ ವೇಳೆ ಮಿಂಚು ನೆಲಕ್ಕೆ ತರುವ ಕಿಡಿಗಳು ಕಾಡ್ಗಿಚ್ಚನ್ನು ಹುಟ್ಟು ಹಾಕಬಹುದು… ಹೀಗೆ ಹಲವು ಕಾರಣಗಳಿವೆ. ಲಾಸ್‍ಎಂಜೆಲಿಸ್ ಕೌಂಟಿ ಕಾಡ್ಗಿಚ್ಚಿಗೆ ಕೊನೆಯ ಕಾರಣವೊಂದನ್ನು ಹೊರತುಪಡಿಸಿ ಬೇರೆ ಯಾವುದೇ ಕಾರಣ ಇರಬಹುದು. ಒಂದಕ್ಕಿಂತ ಹೆಚ್ಚಿನ ಕಾರಣವೂ ಇರಬಹುದು.

ಈ ಸಂಬಂಧದ ತನಿಖೆಯನ್ನು ಕ್ಯಾಲಿಫೋರ್ನಿಯ ರಾಜ್ಯ ಕೈಗೆತ್ತಿಕೊಂಡಿದೆ. ಅಪರಾಧಿ ಮನೋಭಾವದ ವ್ಯಕ್ತಿಗಳೆ ದುರುದ್ದೇಶ ಪೂರ್ವಕವಾಗಿ ಬೆಂಕಿ ಹಾಕಿರಬಹುದು ಎಂಬ ಗುಮಾನಿಯೆ ಮೊದಲು ಮೂಡುವುದು. ಆದರೆ ಕಾರಣ ಏನೇ ಇರಲಿ ಹಳಿ ತಪ್ಪಿದ ಹವಾಮಾನದ ಇಂದಿನ ವ್ಯವಸ್ಥೆಯಲ್ಲಿ ಕಾಡ್ಗಿಚ್ಚು ಭೀಕರ ರೂಪ ಪಡೆಯಲು ತುಂಬ ಕಡಿಮೆ ಸಮಯ ಸಾಕು ಮತ್ತು ಆ ಕಡಿಮೆ ಸಮಯದಲ್ಲಿ ಕಲ್ಪನೆಗೂ ನಿಲುಕದ ಕೆಟ್ಟ ಪರಿಣಾಮಗಳನ್ನು ಕಾಣಲು ನಾವು ತಯಾರಿರಬೇಕು.

ಒಂದೇ ಸಮನೆ ಹೇರಳ ಒಣಹವೆಯಲ್ಲಿ ಬೇಯುತ್ತಿದ್ದ ಲಾಸ್‍ಎಂಜೆಲಿಸ್ ಕೌಂಟಿಗೆ ಕಾಡ್ಗಿಚ್ಚಿನ ಅಂಜಿಕೆ ಸದಾ ಬೆನ್ನು ಹತ್ತಿಯೆ ಇತ್ತು. ಅಲ್ಲಿ ಹಲವು ಬಾರಿ ಹಲವು ಕಡೆ ಗಾಳಿಯ ತೇವಾಂಶ ಶೇಕಡಾ ಸೊನ್ನೆಯನ್ನು ತಲುಪಿತ್ತು. ಇದೊಂದೆ ಸುಳುಹು ಸಾಕಿತ್ತು, ಕಾಡ್ಗಿಚ್ಚನ್ನು ಮುಂಗಾಣಲು. ಮುಂಜಾಗ್ರತೆಯಾಗಿ ಬೆಂಕಿ ನಂದಿಸಲು ದೊಡ್ಡ ಪ್ರಮಾಣದಲ್ಲಿ ಅಗತ್ಯವಿರುವ ಎಲ್ಲ ಮುನ್ನೇರ್ಪಾಡುಗಳನ್ನು ಮಾಡಿಕೊಳ್ಳಬಹುದಿತ್ತು. ಹಾಗಿದ್ದರೆ ಅಮೆರಿಕಾದ ಹವಾಮಾನ ಸಂಸ್ಥೆಗಳು ಏನು ಮಾಡುತ್ತಿದ್ದವು? ಲಾಸ್‍ಎಂಜೆಲಿಸ್ ಗವರ್ನರ್ ವಿರುದ್ಧ ಮನೆ ಕಳೆದುಕೊಂಡವರು ಸಿಟ್ಟನ್ನು ಹೊರಹಾಕಿದ್ದಾರೆ. ಅದಾಗಲೆ ಈಟನ್ ಪ್ರದೇಶದ ನಿವಾಸಿಗಳು ‘ಸದರನ್ ಕ್ಯಾಲಿಫೋರ್ನಿಯ ಎಡಿಸನ್’ ಕಂಪೆನಿಯ ವಿರುದ್ಧ ಕೋರ್ಟಿನಲ್ಲಿ ಮೂರು ಮೊಕದ್ದಮೆಯನ್ನು ಹೂಡಿದ್ದಾರೆ. ಕಾಡ್ಗಿಚ್ಚನ್ನು ಹರಡಬಲ್ಲ ಬಿರುಸು ಬಿಸಿಗಾಳಿಗಳು ಸಧ್ಯದಲ್ಲೆ ಜರುಗಬಹುದು ಎಂದು ‘ನ್ಯಾಷನಲ್ ವೆದರ್ ಸರ್ವೀಸ್’ ಮುನ್ನೆಚ್ಚರಿಕೆ ನೀಡಿದಾಗಲು ಕಂಪೆನಿ ವಿದ್ಯುತ್ ಪೊರೈಕೆಯ ಸಂಪರ್ಕವನ್ನು ಕಡಿದಿರಲಿಲ್ಲ. ಕಡಿದಿದ್ದರೆ ವಿದ್ಯುತ್ ಮೂಲದ ಬೆಂಕಿಯನ್ನಾದರೂ ತಡೆಯಬಹುದಿತ್ತು ಎಂಬುದು ಮೊಕದ್ದಮೆ ಹೂಡಿದವರ ವಾದ. ಈ ಮೊಕದ್ದಮೆ ತೀರ್ಪಿನ ಹಂತಕ್ಕೆ ಬರುವ ವೇಳೆಗೆ ಎಷ್ಟು ಕಾಡ್ಗಿಚ್ಚುಗಳು ಭವಿಷ್ಯದಲ್ಲಿ ಬಂದೆರಗುವುದಿದೆಯೊ ಗೊತ್ತಿಲ್ಲ.

ಮನುಷ್ಯ ಹಚ್ಚಿ ಕಡೆಗಣಿಸಿದ ಕಿಡಿಗೆ ಹವಾಮಾನ ಕಾಡ್ಗಿಚ್ಚನ್ನು ಬೆಸೆಯಬಲ್ಲುದು. ಲಿಯೊ ಟಾಲ್‍ಸ್ಟಾಯ್ ಈಗ ಬದುಕಿದ್ದಿದ್ದರೆ ‘ಕಡೆಗಣಿಸಿದ ಕಿಡಿ ಪಟ್ಟಣವನ್ನು ಸುಟ್ಟಿತು’ ಎಂಬ ನೀತಿ ಕತೆಯನ್ನು ಮಕ್ಕಳಿಗಾಗಿ ಬರೆಯುತ್ತಿದ್ದರೇನೊ. ನಾವು ಶಾಲೆಯಲ್ಲಿ ಅವರ ‘ಕಡೆಗಣಿಸಿದ ಕಿಡಿ ಮನೆಯನ್ನು ಸುಟ್ಟಿತು’ ಎಂಬ ಕತೆಯನ್ನು ಇಂಗ್ಲಿಷ್ ಪಠ್ಯದಲ್ಲಿ ಓದಿದ್ದೆವು.

ಕಾಡ್ಗಿಚ್ಚಿನ ಮೂಲ ಏನೇ ಇರಲಿ, ಈ ಬಾರಿ ವಿಪರೀತಗೊಂಡ ಬಿಸಿಗಾಳಿಯ ಒತ್ತರ ಮತ್ತು ಕಸುವು ಹೇಗಿತ್ತೆಂದರೆ ಅದು ತನ್ನೊಡನೆ ಯಾವ ನಿಟ್ಟಿಗೆ ಬೆಂಕಿಯ ಉರಿನಾಲಗೆಗಳನ್ನು ಒಯ್ಯುತ್ತಿದೆ ಎಂದು ಲೆಕ್ಕಿಸುವುದೇ ತೊಡಕಾಗಿತ್ತು. ಸಾಮಾನ್ಯವಾಗಿ ಮುಟ್ಟಿದರೆ ಪುಡಿಯಾಗುವ ಸುಟ್ಟ ವಸ್ತುಗಳ ಹಾರುಬೂದಿ ಲಾಸ್‍ಎಂಜೆಲಿಸ್ ಕೌಂಟಿ ಕಾಡ್ಗಿಚ್ಚಿನ ವೇಳೆ ನಿಂಬೆ ಹಣ್ಣಿನ ಗಾತ್ರದ (ಅಥವಾ ಇನ್ನೂ ದೊಡ್ಡದಾದ) ಕರಿಗೆಂಡ ಅಥವಾ ನಂದುತ್ತಿರುವ ಗಟ್ಟಿ ಕೆಂಡವಾಗಿ ಬಿಸಿಗಾಳಿಯೊಂದಿಗೆ ಹಾರಿ ಹೋಗುತ್ತಿತ್ತು. ಈ ಕೆಂಡಗಳು ಬೇಗ ಬೇಗ ಹೊಸಹೊಸ ತಾಣಗಳನ್ನು ತಲುಪಿ ಹೊಸ ಹೊಸ ಬೆಂಕಿಗೆ ಬೀಜ ಬಿತ್ತುತ್ತಿದ್ದವು. ಫರ್ಲಾಂಗುಗಟ್ಟಲೆ ದೂರದಿಂದಲೆ ಉರಿಬೆಂಕಿಯ ಜಳ ಮೈಯನ್ನು ತಾಕುತ್ತಿತ್ತು. ಉನ್ಮತ್ತ ಬೆಂಕಿಯ ಕೆನ್ನಾಲಿಗೆಗಳನ್ನು ಹತ್ತಿರ ತೆರಳಿ ನಂದಿಸುವುದೇ ಭಾರೀ ಸವಾಲಾಗಿತ್ತು. ಇಡೀ ಆಗಸವೆ ಕೆಂಪು, ಕಿತ್ತಳೆ ಬಣ್ಣಕ್ಕೆ ತಿರುಗಿ ದಟ್ಟ ಹೊಗೆ ಕಿ.ಮೀ.ಗಳೆತ್ತರಕ್ಕೆ ಕವಿದಿತ್ತು. ಆ ಹೊಗೆಯ ನಡುವೆ ಮೇಲಿನಿಂದ ನೀರನ್ನು ಎರಚಲು ಸಾಧ್ಯವಾಗದೆ ಮತ್ತು ದಿಕ್ಕುಗಾಣದೆ ಹೆಲಿಕಾಪ್ಟರ್‌ಗಳು ಏರಿದಷ್ಟೆ ಬೇಗ ನೆಲಕ್ಕಿಳಿಯಬೇಕಾಗುತ್ತಿತ್ತು. ಶುರುವಿನಲ್ಲಿ ಈ ತೊಡಕಿನಿಂದಾಗಿ ಹೆಲಿಕಾಪ್ಟರ್‌ಗಳ ಕಾರ್ಯಾಚರಣೆ 27 ತಾಸಿನಷ್ಟು ತಡವಾಯಿತು. ಒಂದು ಹೆಲಿಕಾಪ್ಟರ್ ಒಮ್ಮೆಲೆ 3,000 ಲೀಟರ್ ನೀರನ್ನು ಆಗಸದಿಂದ ಉರಿಬೆಂಕಿಯ ಮೇಲೆ ಎರಚುವುದು. ಆದರೆ ಬೆಂಕಿಯ ಮೇಲೆ ಬೀಳುವ ಮೊದಲೇ ಎರಚಿದ ನೀರನ್ನು ಬಿಸಿಗಾಳಿ ತನ್ನೊಂದಿಗೆ ಹಾರಿಸಿಕೊಂಡು ಹೋಗುತ್ತಿತ್ತು. ಇತ್ತ ನೀರೂ ಪೋಲು, ಅತ್ತ ಹೆಲಿಕಾಪ್ಟರ್ ಹಾರಾಟಕ್ಕೆ ಹಾಕಿದ ಕಾಸು, ದುಡಿಮೆ, ಉರುವಲು ಎಲ್ಲವೂ ಪೋಲು. ಬಿಸಿಗಾಳಿ ತಾಸಿಗೆ 160 ಕಿ.ಮೀ. ಒತ್ತರದಲ್ಲಿ ಚಲಿಸುತ್ತಿತ್ತು. ಆ ಹುಚ್ಚು ಒತ್ತರವೇ ಬೆಂಕಿ ನಂದಿಸಲು ಅಡಚಣೆಯಾದದ್ದು.

(ಮೂರನೆಯ ಭಾಗ ನಾಳೆ ಪ್ರಕಟವಾಗಲಿದೆ) 

ಕೆ.ಎಸ್.ರವಿಕುಮಾರ್, ಹಾಸನ

ವಿಜ್ಞಾನ ಲೇಖಕರು

ಇದನ್ನೂ ಓದಿ- ಧಗಧಗಿಸಿದ ದಕ್ಷಿಣ ಕ್ಯಾಲಿಫೋರ್ನಿಯಾ: ಕಾರಣ ಏನು?

More articles

Latest article