ವಿಜಯಪುರ: ಮುಂದಿನ ದಿನಗಳಲ್ಲಿ ವಿಜಯಪುರ ನಗರದಲ್ಲೂ ಸಚಿವ ಸಂಪುಟ ಸಭೆ ನಡೆಸುವ ಉದ್ದೇಶವಿದೆ. ಮಲೆ ಮಹದೇಶ್ವರದಲ್ಲಿ ನಡೆದಂತೆ ವಿಜಯಪುರದಲ್ಲಿ ಸಚಿವ ಸಂಪುಟ ನಡೆಸುವಂತೆ ಮನವಿ ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮ್ಮತಿ ಸೂಚಿಸಿದ್ದಾರೆ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.
ಮುಂದಿನ ಎರಡು ತಿಂಗಳಲ್ಲಿ ವಿಶೇಷ ಸಚಿವ ಸಂಪುಟ ಸಭೆಯನ್ನು ವಿಜಯಪುರದಲ್ಲಿ ನಡೆಸಲಾಗುತ್ತದೆ.ಇದರಿಂದ ವಿಜಯಪುರ, ಬಾಗಲಕೋಟೆ ಜಿಲ್ಲೆಗಳಿಗೆ ಪ್ರೋತ್ಸಾಹ ಸಿಗಲಿದೆ. ಈ ಭಾಗದ ಯೋಜನೆಗಳಿಗೆ ವೇಗ ಸಿಗುತ್ತದೆ ಎಂದು ಅವರು ಹೇಳಿದ್ದಾರೆ.
ಸಚಿವಸಂಪುಟ ಸಭೆ ಕುರಿತು ಎಲ್ಲ ಶಾಸಕರ ಮಾತನಾಡಿದ್ದೇನೆ. ಅವರು ಪ್ರಸ್ತಾವನೆಯನ್ನು ಸಲ್ಲಿಸಿ ಅನುಮತಿ ಪಡೆದುಕೊಳ್ಳಬೇಕು. ಇದರಿಂದ ವಿಜಯಪುರ ಜಿಲ್ಲೆಯ ಎಲ್ಲ ಬೇಡಿಕೆಗಳ ಈಡೇರಿಕೆಗೆ ಅನುಕೂಲವಾಗಲಿದೆ. ಬಸವ ಜನ್ಮ ಭೂಮಿಯಲ್ಲಿ ಸಚಿವ ಸಂಪುಟ ಸಭೆ ನಡೆಯುತ್ತದೆ ಎಂದು ತಿಳಿಸಿದ್ದಾರೆ.
ಬಸವ ಜಯಂತಿ ಎಲ್ಲಿ?:
ಬಸವ ಜಯಂತಿಯನ್ನು ಬಸವಣ್ಣನವರ ಜನ್ಮ ಭೂಮಿ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದಲ್ಲಿ ನಡೆಸಬೇಕೆಂಬ ಒತ್ತಾಯ ಕೇಳಿ ಬರುತ್ತಿದೆ. ಬಸವಣ್ಣನನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ್ದಕ್ಕೆ ಕೂಡಲಸಂಗಮದಲ್ಲಿ ಬುಧವಾರ ಕಾರ್ಯಕ್ರಮ ಮಾಡಲಾಗುತ್ತಿದೆ. ಬಸವ ಸಮಿತಿ ರಾಜ್ಯ ಮಟ್ಟದಲ್ಲಿ ಬಸವ ಜಯಂತಿಯನ್ನು ಆಚರಿಸುತ್ತಿದೆ.ಮುಖ್ಯಮಂತ್ರಿಗಳು ಬಸವಣ್ಣನವರ ಮೂರ್ತಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಿದ್ದಾರೆ. ಮುಂದಿನ ವರ್ಷ ಬಸವನಬಾಗೇವಾಡಿಯಲ್ಲಿ ಬಸವ ಜಯಂತಿ ಕಾರ್ಯಕ್ರಮ ಮಾಡುತ್ತೇವೆ. ಬಸವ ಕಲ್ಯಾಣದಲ್ಲೂ ಬಸವ ಜಯಂತಿ ಆಚರಣೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಪಾಕಿಸ್ತಾನದ ವಿರುದ್ಧ ಆಕ್ರೋಶ:
ಪಾಕಿಸ್ತಾನದ ಜೊತೆ ಯುದ್ಧ ಬೇಡ ಎಂಬ ಸಿಎಂ ಸಿದ್ದರಾಮಯ್ಯನವರ ಹೇಳಿಕೆ ವಿವಾದ ಕುರಿತು ಪ್ರತಿಕ್ರಿಯಿಸಿದ ಅವರು ಸಿಎಂ ಬೇರೆ ಅರ್ಥದಲ್ಲಿ ಹೇಳಿದ್ದಾರೆ. ಯುದ್ಧವೊಂದೇ ಪರಿಹಾರವಲ್ಲ ಎನ್ನುವುದು ಅವರ ಮಾತಿನ ಅರ್ಥ. ಇತರೆ ಎಲ್ಲ ರಾಷ್ಟ್ರಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಾವು ಯುದ್ಧ ಮಾಡಬೇಕು. ಪಾಕಿಸ್ತಾನದ ಜೊತೆ ಯುದ್ಧ ಆಗಲೇಬೇಕು. ಪಾಕ್ ಗೆ ತಕ್ಕ ಶಾಸ್ತಿ ಆಗಲೇ ಬೇಕು. ಈ ಹಿಂದೆ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಕ್ರಮ ಕೈಗೊಂಡ ರೀತಿ ಕ್ರಮ ತೆಗೆದುಕೊಳ್ಳಬೇಕು. ಪಾಕಿಸ್ತಾನವನ್ನು ನಾವು ಸದೆಬಡಿಯಬೇಕು ಎಂದು ಎಂಬಿ ಪಾಟೀಲ್ ಹೇಳಿದ್ದಾರೆ.
ಉಗ್ರರು ಮಾಡಿದ್ದು ಹೇಡಿತನದ ಕೃತ್ಯ. ಹುಡುಕಿ ಹುಡುಕಿ ಉಗ್ರರನ್ನು ಕೊಲ್ಲಬೇಕು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನವನ್ನು ಮೂಲೆಗುಂಪು ಮಾಡಬೇಕು. ಕಾಶ್ಮೀರದಲ್ಲಿಯೂ ಪಾಕಿಸ್ತಾನಕ್ಕೆ ಬೆಂಬಲ ಇಲ್ಲ. ಕೇಂದ್ರ ಸರ್ಕಾರದ ಜೊತೆಗೆ, ಎಲ್ಲ ರಾಜಕೀಯ ಪಕ್ಷಗಳು ನಿಲ್ಲಲಿವೆ. ಕೇಂದ್ರದ ಜೊತೆಗೆ ನಾವು ಇದ್ದೇವೆ. ಪಾಕಿಸ್ತಾನ ಅಣು ಬಾಂಬ್ ದಾಳಿಯ ಬೆದರಿಕೆ ಹಾಕುತ್ತಿದೆ. ಮುನ್ನೆಚ್ಚರಿಕೆ ತೆಗೆದುಕೊಂಡು ಭಾರತ ಯುದ್ಧ ಮಾಡಲಿ. ನಮ್ಮ ದೇಶದ ಜನರಿಗೆ ತೊಂದರೆಯಾದಂತೆ ಯುದ್ಧ ನಡೆಯಲಿ ಎಂದು ಎಂ.ಬಿ ಪಾಟೀಲ್ ಹೇಳಿದ್ದಾರೆ.