ಸಿಎಎ ಸಂಬಂಧಿಸಿದ ಅರ್ಜಿಗಳಿಗೆ ಏಪ್ರಿಲ್ 2ರೊಳಗೆ ಉತ್ತರಿಸಿ: ಕೇಂದ್ರಕ್ಕೆ ಸುಪ್ರೀಂಕೋರ್ಟ್ ಸೂಚನೆ

Most read

ಪೌರತ್ವ ತಿದ್ದುಪಡಿ ಕಾಯ್ದೆ (CAA) ಅನುಷ್ಠಾನಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ. ಅಲ್ಲದೇ, ಕಾಯ್ದೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳಿಗೆ ಏಪ್ರಿಲ್2 ರೊಳಗೆ ಉತ್ತರಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಆದೇಶಿಸಿದೆ.

ಸಿಜೆಐ ಡಿವೈ ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್ ಪೀಠವು ವಿವಾದಾತ್ಮಕ ಸಿಎಎ ಅನುಷ್ಠಾನ ತಡೆ ಕೋರಿ 230ಕ್ಕೂ ಹೆಚ್ಚು ಅರ್ಜಿಗಳನ್ನು ವಿಚಾರಣೆ ನಡೆಸಿತು. ಸುಮಾರು 20 ಅರ್ಜಿಗಳಿಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ಕೇಂದ್ರಕ್ಕೆ ನೋಟಿಸ್ ಜಾರಿ ಮಾಡಿದೆ.

ಸಿಸಿಎ ಅನುಷ್ಠಾನಕ್ಕೆ ತಡೆ ಅರ್ಜಿ ಬಂದಿದ್ದು ಅದಕ್ಕೆ ಸೂಕ್ತವಾದ ಉತ್ತರವನ್ನು ಐದು ಪುಟಗಳಲ್ಲಿ ಉತ್ತರನ್ನು ಏಪ್ರಿಲ್ 2ರೊಳಗೆ ಸಲ್ಲಿಸುವಂತೆ ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್ ಪೀಠವು ಹೇಳಿದೆ.

ನಿಯಮಗಳಿಗೆ ತಡೆ ಕೋರಿ ಅರ್ಜಿ ಸಲ್ಲಿಸಿದ ಅರ್ಜಿದಾರರಲ್ಲಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್, ಡೆಮಾಕ್ರಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾ, ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್‌ನ ಅಸಾದುದ್ದೀನ್ ಓವೈಸಿ ಸೇರಿದಂತೆ ಇತರರು ಸೇರಿದ್ದಾರೆ.

ಕೇಂದ್ರ ಸರ್ಕಾರದ ಪರ ವಕೀಲರಾದ ಸಾಲಿಸಿಟರ್ ಜನರಲ್ ತುಸಾಹರ್ ಮೆಹ್ತಾ ಅವರು, ಕೋರ್ಟ್ ಸೂಚಿಸಿರುವ 20 ಅರ್ಜಿಗಳಿಗೆ ಕೇಂದ್ರ ಪ್ರತಿಕ್ರಿಯಿಸಲು ನಾಲ್ಕು ವಾರಗಳ ಕಾಲಾವಕಾಶ ಕೋರಿದ್ದಾರೆ. ಆದರೆ ಅರ್ಜಿದಾರರ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಕಪಿಲ್ ಸಿಬಲ್ ಇದನ್ನು ವಿರೋಧಿಸಿದ್ದಾರೆ.

ಸಂಸತ್ತಿನಲ್ಲಿ ಕಾಯಿದೆಯನ್ನು ಅಂಗೀಕರಿಸಿ ತಕ್ಷಣವೇ ರಾಷ್ಟ್ರಪತಿಗಳ ಒಪ್ಪಿಗೆಯನ್ನು ಪಡೆದು ನಾಲ್ಕು ವರ್ಷಗಳ ನಂತರ ನಿಯಮಗಳನ್ನು ತಿಳಿಸುವ “ತುರ್ತಿಗೆ” ಕಾರಣವೇನು ಎಂದು ಸಿಬಲ್ ಪ್ರಶ್ನಿಸಿದ್ದಾರೆ.

ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಮತ್ತೋರ್ವ ವಕೀಲೆ ಇಂದಿರಾ ಅವರು, ಸುಪ್ರೀಂಕೋರ್ಟ್ ನಲ್ಲಿ ಈ ಕೇಸು ವಿಚಾರಣೆ ನಡೆಯುತ್ತಿರುವಾಗ ಸಿಎಎ ಅನುಷ್ಠಾನ ಮಾಡದಂತೆ ಕೇಂದ್ರಕ್ಕೆ ಆದೇಶಿಸಬೇಕು ಎಂದು ಕೇಳಿದಾಗ, ಕೋರ್ಟ್, ಸಿಎಎ ಜಾರಿಗೆ ತಡೆ ನೀಡುವ ಯಾವುದೇ ಮಧ್ಯಂತರ ಆದೇಶ ನೀಡಲು ಮಂಗಳವಾರ ನಿರಾಕರಿಸಿದೆ.

ಏಪ್ರಿಲ್ 9ಕ್ಕೆ ಈ ಪ್ರಕರಣದ ವಿಚಾರಣೆಯನ್ನು ಮುಂದೂಡಲಾಗಿದೆ.

More articles

Latest article