ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ: ಎರಡರಲ್ಲಿ ಎಎಪಿ, ಒಂದರಲ್ಲಿ ಬಿಜೆಪಿ ಗೆಲುವು

Most read

ಲುಧಿಯಾನ:  ಪಂಜಾಬ್‌ ನ ಲುಧಿಯಾನ ಪಶ್ಚಿಮ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಆಡಳಿತಾರೂಢ ಆಮ್‌ ಆದ್ಮಿ ಪಕ್ಷದ (ಎಎಪಿ)  ಪಕ್ಷ ಕ್ಷೇತ್ರವನ್ನು ಉಳಿಸಿಕೊಂಡಿದೆ. 

ಎಎಪಿಯ ಅಭ್ಯರ್ಥಿ ಸಂಜೀವ್ ಅರೋರಾ ಅವರು ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ ನ ಭರತ್ ಭೂಷಣ್‌ ಅಶು ವಿರುದ್ಧ 10,637 ಮತಗಳ ಅಂತರದಲ್ಲಿ ಜಯ ಸಾಧಿಸಿದ್ದಾರೆ. ಅರೋರಾ 35,179 ಹಾಗೂ ಅಶು 24,542 ಮತಗಳನ್ನು ಗಳಿಸಿದ್ದಾರೆ. ಕಣದಲ್ಲಿದ್ದ ಬಿಜೆಪಿಯ ಜಿವಾನ್‌ ಗುಪ್ತಾ 20,323, ಶಿರೋಮಣಿ ಅಕಾಲಿಕ ದಳದ ಪರುಪ್‌ಕರ್‌ ಸಿಂಗ್‌ 8,203 ಮತಗಳನ್ನು ಗಳಿಸಿದ್ದಾರೆ. ಎಎಪಿ ಶಾಸಕ ಗುರಪ್ರೀತ್‌ ಬಸ್ಸಿ ಗೋಪಿ ಅವರ ನಿಧನದಿಂದ ತೆರವಾಗಿತ್ತು.

ಗುಜರಾತ್‌ನ ಎರಡು ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿದ್ದು, ಫಲಿತಾಂಶ ಪ್ರಕಟವಾಗಿದೆ. ವಿಸಾವದರ ಕ್ಷೇತ್ರದಿಂದ ಅಮ್ ಆದಿ ಪಕ್ಷದ ಅಭ್ಯರ್ಥಿ ಗೋಪಾಲ್ ಇಟಾಲಿಯಾ ಮತ್ತು ಕಾಡಿ ಕ್ಷೇತ್ರದಿಂದ ಬಿಜೆಪಿಯ ರಾಜೇಂದ್ರ ಛಾವಡ ಗೆಲುವು ಸಾಧಿಸಿದ್ದಾರೆ.

ಇಟಾಲಿಯಾ ಅವರು ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ಕಿರಿಟ್ ಪಟೇಲ್ ಎದುರು 17,554 ಮತಗಳ ಅಂತರದಿಂದ ಗೆದ್ದಿದ್ದಾರೆ.  ಇಟಾಲಿಯಾ 75,942 ಮತಗಳನ್ನು ಹಾಗೂ ಪಟೇಲ್ ಅವರು 58,388 ಮತಗಳನ್ನು ಪಡೆದುಕೊಂಡಿದ್ದಾರೆ. ಇವರು ಎಎಪಿ ಗುಜರಾತ್ ಘಟಕದ ಮಾಜಿ ಅಧ್ಯಕ್ಷರೂ ಹೌದು.

ಕಾಡಿ (ಎಸ್‌ ಸಿ ಮೀಸಲು) ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿ ರಾಜೇಂದ್ರ ಛಾವಡ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ ನ ರಮೇಶ್ ಛಾವಡ ಅವರ ವಿರುದ್ಧ 39,452 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ.

ಪಕ್ಷದ ಗೆಲುವನ್ನು ಕುರಿತು ಪ್ರತಿಕ್ರಿಯಿಸಿರುವ ಎಎಪಿಯ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್‌, ಜನರು ಬಿಜೆಪಿಯಿಂದ ಬೇಸತ್ತು ಹೋಗಿದ್ದು, ಕಾಂಗ್ರೆಸ್‌ ಮತ್ತು ಬಿಜೆಪಿಯನ್ನು ಉಪಚುನಾವಣೆಯಲ್ಲಿ ತಿರಸ್ಕರಿಸಿದ್ದಾರೆ. ಪಂಜಾಬ್‌ ನ ಜನ ಎಎಪಿಯ ಕೆಲಸಗಳನ್ನು ಮೆಚ್ಚಿಕೊಂಡಿರುವುದಕ್ಕೆ ಫಲಿತಾಂಶ ಸಾಕ್ಷಿಯಾಗಿದೆ ಎಂದಿದ್ದಾರೆ.

More articles

Latest article