ನ. 6,7 ರಂದು‌ ಬೆಂಗಳೂರಿನಲ್ಲಿ ಶುದ್ದೀಕರಿಸಿದ ನೀರಿನ ಮರುಬಳಕೆ ಕುರಿತು ರಾಷ್ಟ್ರೀಯ ಕಾರ್ಯಾಗಾರ

Most read

ಬೆಂಗಳೂರು: ದೇಶದ ಪ್ರಮುಖ ನೀತಿ ನಿರೂಪಣಾ ಸಂಸ್ಥೆಯಾದ ನೀತಿ ಆಯೋಗವು, ಕರ್ನಾಟಕ ಸರ್ಕಾರ ಹಾಗೂ ಬೆಂಗಳೂರು ಜಲಮಂಡಳಿ ಸಹಯೋಗದಲ್ಲಿ  ‘ಶುದ್ಧೀಕರಿಸಿದ ತ್ಯಾಜ್ಯ ನೀರಿನ ಮರುಬಳಕೆ’ ಕುರಿತು ಎರಡು ದಿನಗಳ ರಾಷ್ಟ್ರೀಯ ಕಾರ್ಯಾಗಾರವನ್ನು ಆಯೋಜಿಸಿದೆ. ನವೆಂಬರ್ 6 ಮತ್ತು 7 ರಂದು ಈ ಎರಡು ದಿನಗಳ ಕಾರ್ಯಕ್ರಮ ನಡೆಯಲಿದ್ದು, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರು ಈ ಕಾರ್ಯಾಗಾರಕ್ಕೆ ಚಾಲನೆ ನೀಡಲಿದ್ದಾರೆ.

ಈ ಮಹತ್ವದ ಕಾರ್ಯಾಗಾರದಲ್ಲಿ ದೇಶದ ವಿವಿಧ ರಾಜ್ಯಗಳ ಉನ್ನತ ಅಧಿಕಾರಿಗಳು, ಜಲ ತಜ್ಞರು ಮತ್ತು ಕೈಗಾರಿಕಾ ಮುಖಂಡರು ಭಾಗವಹಿಸಲಿದ್ದು, ಶುದ್ಧೀಕರಿಸಿದ ನೀರನ್ನು ಗರಿಷ್ಠ ಪ್ರಮಾಣದಲ್ಲಿ ಮರುಬಳಕೆ ಮಾಡಲು ರಾಷ್ಟ್ರೀಯ ಯೋಜನೆಯನ್ನು ರೂಪಿಸುವ ನಿಟ್ಟಿನಲ್ಲಿ ಚರ್ಚೆ ನಡೆಯಲಿದೆ.

ಡಿಕೆ ಶಿವಕುಮಾರ್‌ ಅವರ ನೇತೃತ್ವದ ಬ್ರಾಂಡ್‌ ಬೆಂಗಳೂರು ಅಭಿಯಾನದ ಅಡಿಯಲ್ಲಿ ತ್ಯಾಜ್ಯ ನೀರಿನ ಸಮರ್ಪಕ ಬಳಕೆಗೆ ಒತ್ತು ನೀಡಲಾಗಿದೆ. ಈ ಮೂಲಕ ತ್ಯಾಜ್ಯ ನೀರಿನ ಬಳಕೆಯನ್ನು ಸಮರ್ಪಕವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಏಷ್ಯಾ ಖಂಡಕ್ಕೆ ಬೆಂಗಳೂರು ಜಲಮಂಡಳಿ ಮಾದರಿಯಾಗಿದೆ. ಸರ್ಕ್ಯೂಲರ್‌ ವಾಟರ್‌ ಎಕಾನಮಿಯನ್ನು ಅಳವಡಿಸಿಕೊಂಡಿರುವ ಮಹಾನಗರಗಳ ಪೈಕಿ ಬೆಂಗಳೂರು ನಗರ ಮುಂಚೂಣಿಯಲ್ಲಿದೆ. ಬೆಂಗಳೂರು ನಗರದಲ್ಲಿ ಶೇ.90 ರಷ್ಟು ಒಳಚರಂಡಿ ಶುದ್ದೀಕರಣ ಸಾಮರ್ಥ್ಯವನ್ನು ಹೊಂದಿದ್ದು, 1,348 ಎಂ.ಎಲ್‌.ಡಿ ಯಷ್ಟು ನೀರನ್ನು ಶುದ್ದೀಕರಿಸಲಾಗುತ್ತಿದೆ. ಈ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಕೆರೆಗಳನ್ನು ತುಂಬಿಸಲಾಗುತ್ತಿದೆ. ಅಲ್ಲದೇ, ಪಾರ್ಕ್‌ ಮತ್ತು ಉದ್ಯಾನವಗಳ ನಿರ್ವಹಣೆ ಜೊತೆಯಲ್ಲಿಯೇ ಕೈಗಾರಿಕೆಗಳಿಗೂ ಪೂರೈಸಲಾಗುತ್ತಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಶಿವಕುಮಾರ್ ಅವರ ದೂರದೃಷ್ಟಿಯ ಕಾರಣದಿಂದ ಬೆಂಗಳೂರು ತ್ಯಾಜ್ಯ ನೀರನ್ನು ಆಸ್ತಿಯನ್ನಾಗಿಸುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಶುದ್ಧೀಕರಿಸಿದ ನೀರು ತ್ಯಾಜ್ಯವಲ್ಲ, ಇದು ನಗರದ ಸುಸ್ಥಿರತೆಯನ್ನು ಬಲಪಡಿಸುವ ಸಂಪನ್ಮೂಲ ಎಂದು ನಮ್ಮ ನಗರದ ಯಶಸ್ಸು ಸಾಬೀತುಪಡಿಸಿದೆ”.

“ನೀತಿ ಆಯೋಗದ ಕಾರ್ಯಾಗಾರಕ್ಕೆ ಆತಿಥ್ಯ ವಹಿಸುವುದು ಕರ್ನಾಟಕಕ್ಕೆ ಹೆಮ್ಮೆಯ ವಿಚಾರ. ತ್ಯಾಜ್ಯ ನೀರು ಶುದ್ದೀಕರಣದಲ್ಲಿ ನಮ್ಮ ಬೆಂಗಳೂರು ಪ್ರಗತಿಯನ್ನು ಪ್ರದರ್ಶಿಸಲು ಮತ್ತು ಅನುಭವಗಳನ್ನು ದೇಶದೊಂದಿಗೆ ಹಂಚಿಕೊಳ್ಳಲು ಇದೊಂದು ಉತ್ತಮ ಅವಕಾಶವಾಗಿದೆ. ಡಿಕೆ ಶಿವಕುಮಾರ್‌ ಅವರ ನೇತೃತ್ವದ ಬ್ರಾಂಡ್‌ ಬೆಂಗಳೂರು ಅಭಿಯಾನದ ಅಡಿಯಲ್ಲಿ ಬೆಂಗಳೂರು ನಗರ ತ್ಯಾಜ್ಯ ನೀರು ನಿರ್ವಹಣೆಯಲ್ಲಿ ಕೈಗೊಂಡಿರುವಂತಹ ಯೋಜನೆಗಳನ್ನು ಪ್ರದರ್ಶಿಸಲು ಉತ್ತಮ ವೇದಿಕೆ ಇದಾಗಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ. ರಾಮ್‌ಪ್ರಸಾತ್ ಮನೋಹರ್ ಹೇಳಿದರು.

ಈ ವಿಧಾನದಿಂದ ಬೆಂಗಳೂರಿನಂತಹ ದೊಡ್ಡ ನಗರಗಳು ಕಾವೇರಿಯಂತಹ ಸಿಹಿನೀರಿನ ಮೂಲಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಿ, ಭವಿಷ್ಯದ ಬೆಳವಣಿಗೆಗೆ ನೆರವಾಗಲು ಸಾಧ್ಯ ಎಂದು ರಾಮ್‌ ಪ್ರಸಾತ್‌ ಮನೋಹರ್‌ ತಿಳಿಸಿದ್ದಾರೆ.

ಜಲ-ಸುಭದ್ರ ಭಾರತಕ್ಕಾಗಿ ಮಾರ್ಗಸೂಚಿ:

ಮರುಬಳಕೆಯ ರಾಷ್ಟ್ರೀಯ ಯೋಜನೆಯನ್ನು ರೂಪಿಸಲು ಕಾರ್ಯಾಗಾರದಲ್ಲಿ ಈ ಮೂರು ಮುಖ್ಯ ವಿಷಯಗಳ ಮೇಲೆ ಗಮನ ಹರಿಸಲಾಗುತ್ತದೆ:

1.ನೀತಿ ನಿಯಮಗಳು (Policy Frameworks)

2.ಹಣಕಾಸು ಮಾದರಿಗಳು (Financing Models)

3.ನೂತನ ತಂತ್ರಜ್ಞಾನದ ಅಳವಡಿಕೆ (Technology Integration)

ಶುದ್ಧೀಕರಿಸಿದ ತ್ಯಾಜ್ಯ ನೀರಿನ ಮರುಬಳಕೆಯನ್ನು ಭಾರತದಾದ್ಯಂತ ಕಡ್ಡಾಯಗೊಳಿಸಲು ಒಂದು ಸಮಗ್ರ ರಾಷ್ಟ್ರೀಯ ಯೋಜನೆಯನ್ನು ರೂಪಿಸುವುದು ಈ ಕಾರ್ಯಾಗಾರದ ಮುಖ್ಯ ಗುರಿಯಾಗಿದೆ.

More articles

Latest article