ಬೆಂಗಳೂರು: ವಜ್ರಮಹೋತ್ಸವ ಆಚರಿಸುತ್ತಿರುವ ಬೆಂಗಳೂರು ಜಲಮಂಡಳಿ ವತಿಯಿಂದ ತನ್ನ ವ್ಯಾಪ್ತಿಯಲ್ಲಿ 60 ಸಾವಿರ ಗಿಡಗಳನ್ನು ನೆಡುವ “ಹಸಿರು ಹಾದಿ – ನೀರಿನ ಭವಿಷ್ಯ” ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದು ಜಲಮಂಡಳಿ ಅಧ್ಯಕ್ಷ ಡಾ ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.
ಇಂದು ಜಿಕೆವಿಕೆ ಆವರಣದಲ್ಲಿ 60 ವಿವಿಧ ಜಾತಿಯ ಗಿಡಗಳನ್ನು ನೆಡುವ ಮೂಲಕ ಈ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನೀರು ಹಾಗೂ ಪರಿಸರದ ಸಂರಕ್ಷಣೆಗೆ ಹಸಿರು ವಾತಾವರಣ ಅತ್ಯಂತ ಅಗತ್ಯ. ಪ್ರತಿಯೊಬ್ಬರೂ ತಮ್ಮ ವ್ಯಾಪ್ತಿಯಲ್ಲಿ ಗಿಡ ನೆಡುವ ಮೂಲಕ ನಗರವನ್ನು ಇನ್ನಷ್ಟು ಸುಂದರಗೊಳಿಸುವುದಕ್ಕೆ ಕೊಡುಗೆ ನೀಡಬೇಕು. ಬೆಂಗಳೂರು ಜಲಮಂಡಳಿ ನಗರದಲ್ಲಿ ಬಹಳಷ್ಟು ಜಾಗವನ್ನು ಹೊಂದಿದೆ. ಈ ಜಾಗದಲ್ಲಿ ಗಿಡಗಳನ್ನು ನೆಡುವ ಮೂಲಕ ಹಸಿರು ಪರಿಸರವನ್ನು ಇನ್ನಷ್ಟು ಹೆಚ್ಚಿಸುವುದು ನಮ್ಮ ಉದ್ದೇಶವಾಗಿದೆ. ವಿಶ್ವ ಪರಿಸರ ದಿನದ ಪ್ರೇರಣೆಯಿಂದ “ಹಸಿರು ಹಾದಿ – ನೀರಿನ ಭವಿಷ್ಯ” ಎಂಬ ಘೋಷವಾಕ್ಯದಡಿಯಲ್ಲಿ ಈ ಗಿಡನೆಡುವ ಅಭಿಯಾನವನ್ನು ಚಾಲನೆ ನೀಡಲಾಗಿದೆ. ಒಂದು ವರ್ಷದ ಅವಧಿಯಲ್ಲಿ ಒಟ್ಟಾರೆಯಾಗಿ 60 ಸಾವಿರ ಗಿಡಗಳನ್ನು ನೆಡುವುದು ನಮ್ಮ ಉದ್ದೇಶವಾಗಿದೆ ಎಂದರು.
ಇದಕ್ಕಾಗಿ ಬಲ್ಕ್ ಯೂಸರ್ಸ್, ಅಪಾರ್ಟ್‌ಮೆಂಟ್ ಗಳು, ಕೈಗಾರಿಕೆಗಳು, ತಂತ್ರಜ್ಞಾನ ಉದ್ಯಾನಗಳು ಹಾಗೂ ವಿದ್ಯಾ ಸಂಸ್ಥೆಗಳಿಗೆ ಈ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಜಲಮಂಡಳಿ ಕೋರಿದೆ. ಇವುಗಳ ಆವರಣಗಳಲ್ಲಿ ಗಿಡ ನೆಡುವುದರ ಜೊತೆಗೆ, ಅವುಗಳನ್ನು ಪೋಷಿಸುವ ಜವಾಬ್ದಾರಿಯನ್ನೂ ಹೊತ್ತುಕೊಳ್ಳುವಂತೆ ಪ್ರೋತ್ಸಾಹಿಸಲಾಗುತ್ತಿದೆ. ಅಲ್ಲದೇ, ಜಲಮಂಡಳಿ ವ್ಯಾಪ್ತಿಯ ಎಲ್ಲ ಉಪವಿಭಾಗಗಳಿಗೆ ಹಾಗೂ ಕಚೇರಿಗಳಿಗೆ ತಮ್ಮ ತಮ್ಮ ಪ್ರದೇಶಗಳಲ್ಲಿ ಗಿಡ ನೆಡುವ ಕಾರ್ಯಕ್ಕೆ ಮುಂದಾಗುವಂತೆ ನಿರ್ದೇಶನ ನೀಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಂಡಳಿಯ ಹಿರಿಯ ಅಧಿಕಾರಿಗಳು, ಎಂಜಿನಿಯರ್‌ಗಳು ಹಾಗೂ ಸಿಬ್ಬಂದಿಯವರು ಈ ವೇಳೆ ಗಿಡ ನೆಡುವಲ್ಲಿ ಭಾಗವಹಿಸಿದರು.