ಬೆಂಗಳೂರು: ಕೇವಲ ವೃದ್ಧ ದಂಪತಿ ವಾಸಿಸುತ್ತಿದ್ದ ಮನೆಗೆ ನುಗ್ಗಿದ ದರೋಡೆಕೋರರು ದಂಪತಿಯ ಕೈಕಾಲು ಕಟ್ಟಿ ಹಣ ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿರುವ ಪ್ರಕರಣ ಕೊಡಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬಿ.ಕೆ. ಲೇಔಟ್ ನಲ್ಲಿ ನಡೆದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ನಡೆಸಿದ್ದಾರೆ.
ಬಿ.ಕೆ.ಲೇಔಟ್‌ನ ತಿಂಡ್ಲು ರಸ್ತೆಯಲ್ಲಿ ಚಂದ್ರಶೇಖರ್ ದಂಪತಿ ವಾಸಿಸುತ್ತಿದ್ದರು. ಅವರಿಗೆ ಮೂವರು ಹೆಣ್ಣು ಮಕ್ಕಳಿದ್ದು, ಎಲ್ಲರಿಗೂ ವಿವಾಹ ಮಾಡಿದ್ದಾರೆ. ಮನೆಯಲ್ಲಿ ದಂಪತಿ ಮಾತ್ರ ವಾಸವಿದ್ದರು. ಇವರಿಬ್ಬರೇ ಮನೆಯಲ್ಲಿ ವಾಸಿಸುತ್ತಿದ್ದಾರೆ ಎಂಬ ವಿಷಯ ತಿಳಿದುಕೊಂಡ ದರೋಡೆಕೋರರು ಮನೆಗೆ ನುಗ್ಗಿ ನಗದು ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದಂಪತಿ ಮನೆಯ ಬಳಿ ಬಂದಿದ್ದ ಮೂವರು ದರೋಡೆಕೋರರು ವಯಸ್ಸಾದ ವೃದ್ಧರಿಗೆ ಹಣ್ಣುಹಂಪಲು ವಿತರಣೆ ಮಾಡುತ್ತಿದ್ದು, ನಿಮಗೂ ನೀಡಲು ಬಂದಿದ್ದೇವೆ ಎಂದು ನಂಬಿಸಿದ್ದರು. ಆರೋಪಿಗಳ ಮಾತು ನಂಬಿದ ಚಂದ್ರಶೇಖರ್ ಅವರು ಮನೆಯ ಬಾಗಿಲು ತೆರೆದಿದ್ದರು. ಒಳಗೆ ನುಗ್ಗಿದ ದೋಡೆಕೋರರು ದಂಪತಿಯ ಕೈಕಾಲು ಕಟ್ಟಿ ಹಾಕಿ, ಶೌಚಾಲಯದಲ್ಲಿ ಕೂಡಿಹಾಕಿ ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಸ್ವಲ್ಪ ಸಮಯದ ನಂತರ ಕಷ್ಟಪಟ್ಟು ಹಗ್ಗವನ್ನು ಬಿಡಿಸಿಕೊಂಡು ಹೊರಬಂದಿದ್ದ ದಂಪತಿ ಕರೆ ಮಾಡಿ ಘಟನೆಯ ಬಗ್ಗೆ ಮಾಹಿತಿ ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ನಡೆಸಲಾಗುತ್ತಿದೆ. ಅಕ್ಕಪಕ್ಕದ ಮನೆ ಮತ್ತು ರಸ್ತೆಯ ಸಿ.ಸಿ.ಟಿ.ವಿ ಕ್ಯಾಮೆರಾದ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.