ನವದೆಹಲಿ: ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಅಭಿಷೇಕ್ ಮನು ಸಿಂಘ್ವಿ ಅವರಿಗೆ ಮೀಸಲಾಗಿದ್ದ ಆಸನದಲ್ಲಿ ಕಂತೆ ಕಂತೆ ನೋಟು ಪತ್ತೆಯಾಗಿವೆ. ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ರಾಜ್ಯಸಭೆ ಸಭಾಪತಿ ಜಗದೀಪ್ ಧನಕರ್ ಇಂದು ಸದನಕ್ಕೆ ತಿಳಿಸಿದ್ದಾರೆ.
ಗುರುವಾರ ಸದನವನ್ನು ಮುಂದೂಡಿದ ಬಳಿಕ ಪರಿಶೀಲನೆ ವೇಳೆ ಆಸನ ಸಂಖ್ಯೆ 222ರಲ್ಲಿ ಭದ್ರತಾ ಸಿಬ್ಬಂದಿ ಕಂತೆ ಕಂತೆ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ಸದನದ ಶಿಷ್ಟಾಚಾರದಂತೆ ತನಿಖೆಗೆ ಆದೇಶಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಸದನಕ್ಕೆ ತಿಳಿಸುವುದು ನನ್ನ ಕರ್ತವ್ಯವಾಗಿದೆ. ನೋಟುಗಳು ನಕಲಿಯೋ ಅಥವಾ ಅಸಲಿಯೋ ಎಂಬುದು ತಿಳಿದು ಬಂದಿಲ್ಲ ಎಂದು ಅವರು ಹೇಳಿದ್ದಾರೆ. ರಾಜ್ಯಸಭೆಯಲ್ಲಿ ಸಭಾಪತಿ ಧನಕರ್ ಹೇಳಿಕೆ ಗದ್ದಲಕ್ಕೆ ಕಾರಣವಾಯಿತು. ತನಿಖೆ ಪೂರ್ಣಗೊಳ್ಳದ ಹೊರತು ಸದಸ್ಯರ ಹೆಸರು ಹೇಳಬಾರದಿತ್ತು ಎಂದು ಮಲ್ಲಿಕಾರ್ಜುನ ಖರ್ಗೆ ಆಪಾದಿಸಿದ್ದಾರೆ.