ಸಿಎ ನಿವೇಶನದಲ್ಲಿ ಕಟ್ಟಡ ನಿರ್ಮಾಣಕ್ಕೆ ಕಾಲಮಿತಿ ಷರತ್ತು ಸಡಿಲಿಕೆಗೆ ಕ್ರಮ: ಸಚಿವ ಬೈರತಿ ಸುರೇಶ್

Most read

ಬೆಳಗಾವಿ: ಸರ್ಕಾರದಿಂದ ಪಡೆದಿರುವ ಸಿಎ ನಿವೇಶನಗಳಲ್ಲಿ ಕಟ್ಟಡ ನಿರ್ಮಾಣ ಮಾಡಲು ಈಗಿರುವ ಮೂರು ವರ್ಷಗಳ ಮಿತಿಯನ್ನು ಐದು ವರ್ಷಗಳಿಗೆ ಹೆಚ್ಚಿಸುವ ಬಗ್ಗೆ ಗಂಭೀರ ಪ್ರಯತ್ನ ಮಾಡಲಾಗುವುದು ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ ಭರವಸೆ ನೀಡಿದ್ದಾರೆ.

ವಿಧಾನಪರಿಷತ್ತಿನಲ್ಲಿ ಸೋಮವಾರ ಬಿಜೆಪಿಯ ಡಿ.ಎಸ್.ಅರುಣ್ ಮತ್ತು ಇತರರ ಗಮನ ಸೆಳೆಯುವ ಸೂಚನೆಗೆ ಸಚಿವರು ಉತ್ತರಿಸಿದರು.

ನಗರಾಭಿವೃದ್ಧಿ ಪ್ರಾಧಿಕಾರಗಳು ನೀಡಿರುವ ಸಿಎ ನಿವೇಶನಗಳನ್ನು 30 ವರ್ಷಗಳ ನಂತರ ಗುತ್ತಿಗೆ ಅವಧಿಯನ್ನು ನವೀಕರಣ ಮಾಡುವಾಗ 30 ವರ್ಷಗಳ ಹಿಂದಿನ ದರವನ್ನೇ ನಿಗದಿಪಡಿಸಲು ಸಾಧ್ಯವಿಲ್ಲ. ಆದರೆ, ಎಸ್ಆರ್ ದರವನ್ನು ಕಡಿಮೆ ಮಾಡುವ ಬಗ್ಗೆ ಪರಿಶೀಲಿಸಲಾಗುವುದು ಎಂದು ತಿಳಿಸಿದರು.

ಸಿಎ ನಿವೇಶನ ಪಡೆದು ಮೂರು ವರ್ಷಗಳ ಒಳಗೆ ಉದ್ದೇಶಿತ ಕಾರ್ಯಕ್ಕಾಗಿ ಕಟ್ಟಡ ನಿರ್ಮಾಣ ಆರಂಭಿಸಬೇಕೆಂಬ ನಿಯಮವನ್ನು ಸಡಿಲಿಸಬೇಕೆಂಬ ಒತ್ತಾಯವಿದೆ. ಈ ಹಿನ್ನೆಲೆಯಲ್ಲಿ ನಿಯಮವನ್ನು ಸಡಿಲಿಸಿ ಐದು ವರ್ಷಗಳಿಗೆ ಹೆಚ್ಚಿಸುವ ಬಗ್ಗೆ ಗಂಭೀರ ಪ್ರಯತ್ನ ನಡೆಸಲಾಗುತ್ತದೆ ಎಂದು ಸಚಿವರು ಸದನಕ್ಕೆ ಭರವಸೆ ನೀಡಿದರು.

ಆದರೆ, ಯಾವುದೇ ಕಾರಣಕ್ಕೂ ನಿವೇಶನಕ್ಕೆ ಶುದ್ಧ ಕ್ರಯಪತ್ರ ನೀಡಲು ಸಾಧ್ಯವಿಲ್ಲ ಮತ್ತು ಎಸ್ ಸಿ ಮತ್ತು ಎಸ್ ಟಿ ಸಮುದಾಯಕ್ಕೆ ನೀಡಲಾಗುತ್ತಿರುವ ಮೀಸಲಾತಿಯನ್ನು ಕಡಿಮೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

More articles

Latest article