ಬಿಎಸ್‌ ಯಡಿಯೂರಪ್ಪ POCSO ಪ್ರಕರಣ: ನ್ಯಾಯಾಧೀಶರ ಬದಲಾವಣೆಗೆ ಸಂತ್ರಸ್ಥೆ ಮನವಿ

Most read

ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ರಾಜಕಾರಣಿ ಬಿಎಸ್‌ ಯಡಿಯೂರಪ್ಪ ಅವರ ವಿರುದ್ಧದ ಪೋಕ್ಸೊ (POCSO) ಪ್ರಕರಣದಲ್ಲಿ ಸಂತ್ರಸ್ಥ ಅಪ್ರಾಪ್ತೆಯ ಮ್ಯಾಜಿಸ್ಟೀರಿಯಲ್‌ ಹೇಳಿಕೆ ದಾಖಲಿಸಲಾಗಿದೆ. ಆದರೆ ಈಗಾಗಲೇ ನೀಡಿರುವ ಹೇಳಿಕೆಯನ್ನು ಪರಿಗಣಿಸಬಾರದು ಮತ್ತು ಬೇರೆ ನ್ಯಾಯಾಧೀಶರ ಮುಂದೆ ಮ್ಯಾಜಿಸ್ಟೀರಿಯಲ್‌ ಹೇಳಿಕೆ ದಾಖಲಿಸಬೇಕು ಎಂದು ಸಂತ್ರಸ್ಥೆ ಮತ್ತು ದೂರುದಾರೆ ಸಂತ್ರಸ್ಥೆಯ ತಾಯಿ ತನಿಖಾಧಿಕಾರಿಗಳ ಮುಂದೆ ಅರ್ಜಿ ಸಲ್ಲಿಸಿದ್ದಾರೆ.


ಅರ್ಜಿಯ ಪ್ರತಿ ‘ಕನ್ನಡ ಪ್ಲಾನೆಟ್‌’ಗೆ ಲಭ್ಯವಾಗಿದ್ದು, ಮನವಿಯಲ್ಲಿ ನ್ಯಾಯಾಧೀಶರ ವಿರುದ್ಧ ಗಂಭೀರ ಆರೋಪವನ್ನು ಕೂಡ ಮಾಡಲಾಗಿರುವುದು ಕಂಡು ಬಂದಿದೆ. ಸಂತ್ರಸ್ಥ ಬಾಲಕಿಯ ಹೇಳಿಕೆಯನ್ನು ಯಥಾವತ್ತಾಗಿ ರೆಕಾರ್ಡ್ ಮಾಡಲಾಗಿಲ್ಲ ಮತ್ತು ಹೇಳಿಕೆಯನ್ನು ದಾಖಲಿಸಿದ ನಂತರ ಅದನ್ನು ಓದಲು ಅವಕಾಶ ನೀಡದೇ ಸಹಿ ಮಾಡಿಸಿಕೊಳ್ಳಲಾಗಿದೆ ಎಂದು ದೂರಲಾಗಿದೆ.
“ಸಂತ್ರಸ್ಥ ಅಪ್ರಾಪ್ತ ಬಾಲಕಿಯ ಹೇಳಿಕೆಯನ್ನು ಯಥಾವತ್ತಾಗಿ ಆಕೆಯ ಪದಗಳಲ್ಲಿ ದಾಖಲಿಸಿಲ್ಲ ಮತ್ತು ದಾಖಲಿಸಿದ 164 ಹೇಳಿಕೆಯನ್ನು ಓದಲು ಅವಕಾಶ ನೀಡದೇ ಸಹಿ ಮಾಡಿಸಿಕೊಳ್ಳಲಾಗಿದೆ. ಕ್ಯಾಮೆರಾದಲ್ಲಿ ಈ ಹೇಳಿಕೆಯನ್ನು ಚಿತ್ರೀಕರಿಸಲಾಗಿದೆ, ಬೇಕಿದ್ದಲ್ಲಿ ದೃಶ್ಯಗಳನ್ನು ಪರಿಶೀಲಿಸಬಹುದು,” ಎಂದು ನ್ಯಾಯಾಧೀಶರ ವಿರುದ್ಧ ಗಂಭೀರ ಆರೋಪ ಮಾಡಲಾಗಿದೆ.


ಮುಂದುವರೆದು ಅವರು, “ದಯವಿಟ್ಟು 164 ಹೇಳಿಕೆ ಮರುದಾಖಲಿಸಿಕೊಳ್ಳಲು ನ್ಯಾಯಾಧೀಶರನ್ನು ಬದಲಿಸಿ. ಸಾಧ್ಯವಾದಲ್ಲಿ ಮಹಿಳಾ ನ್ಯಾಯಾಧೀಶರ ಮುಂದೆ 164 ಹೇಳಿಕೆಯನ್ನು ದಾಖಲಿಸಿ. ಆ ಮೂಲಕ ಸಂತ್ರಸ್ಥೆಗೆ ನ್ಯಾಯ ಒದಗಿಸಿ,” ಎಂದು ಮನವಿ ಮಾಡಿದ್ದಾರೆ.

ಏನಿದು ಪ್ರಕರಣ?:


ಪ್ರಕರಣವೊಂದರಲ್ಲಿ ನ್ಯಾಯ ಕೊಡಿಸುವಂತೆ ಮನವಿ ಮಾಡಲು ಅಪ್ರಾಪ್ತ ವಯಸ್ಸಿನ ಸಂತ್ರಸ್ಥೆ ಮತ್ತು ಆಕೆಯ ತಾಯಿ ಬಿಎಸ್‌ ಯಡಿಯೂರಪ್ಪ ಅವರ ಸದಾಶಿವ ನಗರದ ‘ಧವಳಗಿರಿ’ ನಿವಾಸಕ್ಕೆ ಫೆಬ್ರವರಿ 2 ರಂದು ಭೇಟಿ ನೀಡಿದ್ದರು. ಈ ವೇಳೆ ಸಹಾಯ ಮಾಡುವುದಾಗಿ ತಿಳಿಸಿದ ಮಾಜಿ ಮುಖ್ಯಮಂತ್ರಿ, ಸಂತ್ರಸ್ಥ ಅಪ್ರಾಪ್ತ ಬಾಲಕಿಯನ್ನು ಕೊಠಡಿಯೊಳಕ್ಕೆ ಕರೆದಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲಿ ಆಕೆಯ ಮೇಲೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ದೂರುದಾರೆ ಆರೋಪಿಸಿದ್ದರು.


“ಕೊಠಡಿಯೊಳಕ್ಕೆ ಹೋದಾಗ ನನ್ನ ಮಗಳ ಎದೆಯ ಭಾಗವನ್ನು ಯಡಿಯೂರಪ್ಪ ಅವರು ಸ್ಪರ್ಶಿಸಿದ್ದಾರೆ. ನನ್ನ ಮಗಳು ತಕ್ಷಣ ಆಚೆ ಬಂದು ವಿಚಾರ ನನಗೆ ತಿಳಿಸಿದ್ದಾಳೆ. ನಂತರ ನಾನು ಏನು ಮಾಡಿದ್ದೀರಿ ಎಂದು ಕೇಳಿದಾಗ ಸಮಂಜಸ ಉತ್ತರ ನೀಡದೇ, ‘ನನ್ನ ಮೊಮ್ಮಗಳಿದ್ದಂತೆ. ನ್ಯಾಯ ದೊರಕುವಂತೆ ಮಾಡುತ್ತೇನೆ,’ ಎಂದು ತಿಳಿಸಿದ್ದಾರೆ,” ಎಂದು ದೂರಿನಲ್ಲಿ ಮಾಜಿ ಸಿಎಂ ಮೇಲೆ ಆರೋಪಿಸಲಾಗಿದೆ.


ಇದಕ್ಕೆ ಪ್ರತಿಕ್ರಿಯಿಸಿದ್ದ ಯಡಿಯೂರಪ್ಪ, “ಸಹಾಯ ಮಾಡಲು ಹೋಗಿ ಈ ರೀತಿ ಆಗತ್ತೆ ಅಂದುಕೊಂಡಿರಲಿಲ್ಲ. ಯಾವುದೋ ಪ್ರಕರಣದಲ್ಲಿ ಸಹಾಯ ಕೋರಿ ಬಂದಿದ್ದರು. ನಾನು ಬೆಂಗಳೂರು ಆಯುಕ್ತ ಬಿ ದಯಾನಂದ್‌ ಅವರಿಗೆ ಕರೆ ಮಾಡಿ ಸೂಕ್ತ ತನಿಖೆ ಮಾಡುವಂತೆಯೂ ಹೇಳಿದ್ದೆ. ಮಹಿಳೆಗೆ ಆರ್ಥಿಕ ಸಮಸ್ಯೆ ಇರುವ ಹಿನ್ನೆಲೆ ಅವರಿಗೆ ಹಣ ಸಹಾಯ ಕೂಡ ಮಾಡಿದ್ದೆ. ಸಹಾಯ ಮಾಡಲು ಹೋದವನಿಗೆ ಈ ರೀತಿ ಆಗುತ್ತದೆ ಎಂದು ತಿಳಿದಿರಲಿಲ್ಲ,” ಎಂದಿದ್ದರು.


ಜತೆಗೆ ಕಾನೂನು ಹೋರಾಟ ಮಾಡುವುದಾಗಿಯೂ ಯಡಿಯೂರಪ್ಪ ಹೇಳಿದ್ದರು. ಚುನಾವಣೆಯ ಸಮಯವಾದ್ದರಿಂದ ಈ ಪ್ರಕರಣದ ಹಿಂದೆ ರಾಜಕೀಯ ಪಿತೂರಿ ಏನಾದರು ಇರಬಹುದಾ ಎಂಬ ಪ್ರಶ್ನೆಗೆ ಉತ್ತರಿಸಿದ್ದ ಅವರು, “ಇದರಲ್ಲಿ ರಾಜಕೀಯ ದುರುದ್ದೇಶ ಕಾಣಿಸುತ್ತಿಲ್ಲ. ಮಹಿಳೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದು ರಾಜಕೀಯ ಪ್ರೇರಿತ ಎಂದು ನಾನು ಕರೆಯುವುದಿಲ್ಲ. ಕಾನೂನು ಹೋರಾಟ ಮಾಡುತ್ತೇನೆ,” ಎಂದು ಬಿಎಸ್‌ ಯಡಿಯೂರಪ್ಪ ಹೇಳಿದ್ದರು.


ಹೈಪ್ರೊಫೈಲ್‌ ಪ್ರಕರಣವಾದ್ದರಿಂದ ಅಧಿಕಾರಿ ವರ್ಗದ ಮೇಲೆ ಮತ್ತು ದೂರುದಾರರ ಮೇಲೆ ವ್ಯಾಪಕವಾದ ಪ್ರಭಾವ ಬೀರಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಜತೆಗೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ನೀಡುವಂತೆಯೂ ಸಂತ್ರಸ್ಥೆ ಹೈ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

More articles

Latest article