ದಾವಣಗೆರೆ: ಬಿಜೆಪಿ ಮುಖಂಡ ಬಿ.ಎಸ್.ಯಡಿಯೂರಪ್ಪ ಅವರು ಪಕ್ಷ ತೊರೆದು ಹೋಗಿದ್ದರು. ಪಕ್ಷ ಸೇರ್ಪಡೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ಮನೆ ಬಾಗಿಲು ಬಡಿದಿದ್ದರು. ಆದರೂ ಅವರು ಮತ್ತೆ ಪಕ್ಷಕ್ಕೆ ಏಕೆ ಮರಳಿದರೋ ಗೊತ್ತಿಲ್ಲ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ವ್ಯಂಗ್ಯವಾಡಿದ್ದಾರೆ.
ದಾವಣಗೆರೆಯಲ್ಲಿ ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಅಭಿಮಾನಿ ಬಳಗ ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ ಅವರ 74ನೇ ಜನ್ಮದಿನದ ಅಂಗವಾಗಿ ಇಂದು ಹಮ್ಮಿಕೊಂಡಿದ್ದ’ನಮ್ಮಾಭಿಮಾನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಯಡಿಯೂರಪ್ಪ ಅವರು ಉಪಮುಖ್ಯಮಂತ್ರಿ, ಮುಖ್ಯಮಂತ್ರಿ ಹುದ್ದೆ ಅನುಭವಿಸಲು ಜಿ.ಎಂ. ಸಿದ್ದೇಶ್ವರ ಅವರ ಅಪಾರ ಪರಿಶ್ರಮವಿದೆ. ಯಡಿಯೂರಪ್ಪ ಅವರಿಗೆ ಆರ್ಥಿಕ ಶಕ್ತಿಯಾಗಿ, ಹೆಗಲಿಗೆ ಹೆಗಲು ಕೊಟ್ಟಿದ್ದಾರೆ. ಆದರೆ ಇಂದು ಅವರನ್ನು ಯಡಿಯೂರಪ್ಪ ನಡೆಸಿಕೊಳ್ಳುತ್ತಿರುವ ರೀತಿ ಬಗ್ಗೆ ಬೇಸರವಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪಕ್ಷದಲ್ಲಿ ಸಮಸ್ಯೆ ಸೃಷ್ಟಿಸುವ ವ್ಯಕ್ತಿಗಳನ್ನು ನಿಯಂತ್ರಿಸಬೇಕಿದೆ. ಇದಕ್ಕೆ ನಮ್ಮ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವ ಅಗತ್ಯವಿದೆ. ಸಿದ್ದೇಶ್ವರ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಘೋಷಿಸಿದರು.
ಜಿ.ಎಂ.ಸಿದ್ದೇಶ್ವರ ಮಾತನಾಡಿ ನಾನು ಬಿಜೆಪಿಯ ಶಿಸ್ತಿನ ಸಿಪಾಯಿ. ಭದ್ರಾ ಜಲಾಶಯದ ಬಲದಂಡೆ ನಾಲೆಯ ವಿಚಾರವಾಗಿ ಚರ್ಚಿಸಲು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿದ್ದೆ. ನಾನು ಬಿಜೆಪಿ ತೊರೆದು ಕಾಂಗ್ರೆಸ್ ಎಂದು ಸ್ಪಷ್ಟಪಡಿಸಿದರು.
ಸೋಮವಾರ ರಾತ್ರಿಯೇ ದಾವಣಗೆರೆ ಅಗಮಿಸಿದ್ದ ಬಹುತೇಕ ನಾಯಕರು, ಜಿ.ಎಂ. ವಿಶ್ವವಿದ್ಯಾಲಯದ ಅತಿಥಿಗೃಹದಲ್ಲಿ ಕಾರ್ಯಕ್ರಮಕ್ಕೂ ಮುನ್ನ ಚರ್ಚೆ ನಡೆಸಿದರು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಬದಲಾವಣೆ ಕುರಿತು ಚರ್ಚೆ ನಡೆಸಿದರು ಎಂದು ತಿಳಿದು ಬಂದಿದೆ.
ಮಾಜಿ ಸಚಿವ ಕುಮಾರ ಬಂಗಾರಪ್ಪ, ಮಾಜಿ ಸಂಸದ ಪ್ರತಾಪ್ ಸಿಂಹ ಬಿ.ಪಿ.ಹರೀಶ್ ಮೊದಲಾದ ಮುಖಂಡರು ಹಾಜರಿದ್ದರು.