ಬೆಂಗಳೂರು: ಇಟ್ಟಿಗೆ ಹಾಗೂ ಮರದ ತುಂಡಿಗೆ ಚಿನ್ನದ ಪಾಲಿಶ್ ಮಾಡಿ ಚಿನ್ನದ ಗಟ್ಟಿಗಳು ಎಂದು ಮಾರಾಟ ಮಾಡಲು ಪ್ರಯತ್ನಿಸಿದ ಬಿಹಾರ ಮೂಲದ ಮೂವರು ಆರೋಪಿಗಳನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಕೋರಮಂಗಲದಲ್ಲಿ ಬಂಧಿಸಿದ್ದಾರೆ. ಬಂಧಿತರನ್ನು ರಬಿಕುಲ್ ಇಸ್ಲಾಂ, ಇದ್ದಿಶ್ ಅಲಿ, ಅನ್ವರ್ ಹುಸೇನ್ ಎಂದು ಗುರುತಿಸಲಾಗಿದೆ. ಮನೆ ಪಾಯ ಹಾಕುವಾಗ ಚಿನ್ನದ ನಿಧಿ ಸಿಕ್ಕಿದೆ ಎಂದು ಆರೋಪಿಗಳು ಕಥೆ ಕಟ್ಟಿ ನಂಬಿಸುತ್ತಿದ್ದರು. ಮಾರುಕಟ್ಟೆಯಲ್ಲಿನ ಚಿನ್ನದ ಬೆಲೆಗಿಂತ ಅರ್ಧ ಬೆಲೆಗೆ ಚಿನ್ನ ಕೊಡುತ್ತೇವೆ ಎಂದು ಸುಳ್ಳು ಹೇಳುತ್ತಿದ್ದರು.
ತಾವು ನೀಡುತ್ತಿರುವುದು ಅಸಲಿ ಚಿನ್ನ ಎಂದು ನಂಬಿಸಲು ಆರೋಪಿಗಳು ಮೊದಲಿಗೆ ಒಂದೆರಡು ಗ್ರಾಂ ಅಸಲಿ ಚಿನ್ನ ನೀಡುತ್ತಿದ್ದರು. ಅವರು ನಂಬಿದ ನಂತರ ನಕಲಿ ಚಿನ್ನ ಮಾರಾಟ ಮಾಡಲು ಹವಣಿಸುತ್ತಿದ್ದರು. ಚಿನ್ನ ತೆಗೆದುಕೊಳ್ಳಲು ತಾವು ತಿಳಿಸಿದ ಜಾಗಕ್ಕೆ ಬರುವಂತೆ ಹೇಳಿ ಪದೆ ಪದೇ ಲೊಕೇಷನ್ ಬದಲಿಸುತ್ತಿದ್ದರು. ಈ ಬಗ್ಗೆ ಸಿಸಿಬಿ ಪೊಲೀಸರಿಗೆ ಖಚಿತ ಮಾಹಿತಿ ದೊರೆತಿತ್ತು. ಇದರ ಆಧಾರದಲ್ಲಿ ಕೋರಮಂಗಲದಲ್ಲಿ ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ. ಬಂಧಿತಆರೋಪಿಗಳಿಂದ 970 ಗ್ರಾಂ ನಕಲಿ ಚಿನ್ನ, ಒಂದು ವಾಹನ, ಮೂರು ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಬಂಧಿತರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗುತ್ತಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.