ಹಾಸನ : ಕುಟುಂಬದಲ್ಲಿ ಮಕ್ಕಳು ಬೇರೆ ಕಡೆ ಕೆಲಸ ಮಾಡಿಕೊಂಡು ಆದಾಯ ತೆರಿಗೆ ಪಾವತಿಸುತ್ತಿದ್ದರೆ ತಂದೆ-ತಾಯಿಗೆ ಬಿಪಿಎಲ್ ಕಾರ್ಡ್ ನೀಡಬಹುದು. ಈ ಬಗ್ಗೆ ಸೂಕ್ಷ್ಮವಾಗಿ ಪರಿಶೀಲಿಸಬೇಕು ಎಂದು ಸಚಿವ ಕೆಹೆಚ್. ಮುನಿಯಪ್ಪ
ಹಾಸನ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕುಟುಂಬದಲ್ಲಿ ಮಕ್ಕಳು ಬೇರೆ ಕಡೆ ಕೆಲಸ ಮಾಡಿಕೊಂಡು ಆದಾಯ ತೆರಿಗೆ ಪಾವತಿಸುತ್ತಿದ್ದರೆ ಪೋಷಕರಿಗೆ ತೊಂದರೆಯಾಗಬಾರದು. ಇಂತಹ ಪ್ರಕರಣಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಬಿಪಿಎಲ್ ಕಾರ್ಡ್ ನೀಡಬಹುದು ಎಂದು ಹೇಳಿದರು.
ಬಿಪಿಎಲ್ ಕಾರ್ಡ್ ಪರಿಷ್ಕರಣೆ ವೇಳೆ ಮನೆ ಸಾಲ, ಬೈಕ್ ಸಾಲಕ್ಕಾಗಿ ಆದಾಯ ತೆರಿಗೆ ಪಾವತಿಸುತ್ತಿರುವ ವಿನಾಯಿತಿ ನೀಡಬೇಕು. ದೀರ್ಘ ಕಾಲದಿಂದ ತೆರಿಗೆ ಪಾವತಿ ಮಾಡುತ್ತಿರುವರ ಕಾರ್ಡ್ಗಳನ್ನು ಎ.ಪಿ.ಎಲ್
ಮಾತ್ರ ಪರಿವರ್ತಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
75 ವಯಸ್ಸಿನ ಮೇಲ್ಪಟ್ಟ ಒಂಟಿ ಹಿರಿಯ ನಾಗರೀಕರು ಮಾತ್ರ ಇರುವ ಮನೆಗಳಿಗೆ ಅನ್ನಸುವಿಧಾ ಯೋಜನೆ ಮೂಲಕ ಅರ್ಹ ಫಲಾನುಭವಿಗಳ ನ್ಯಾಯಬೆಲೆ ಅಂಗಡಿಯವರು ಮನೆ ಬಾಗಿಲಿಗೆ ಪಡಿತರ ವಿತರಣೆ ಮಾಡಬೇಕು ಅಧಿಕಾರಿಗಳು ಆದ್ಯತೆ ಮೇಲೆ ಸಮರ್ಪಕವಾಗಿ ಅನುಷ್ಠಾನ ಮಾಡುವಂತೆ ತಿಳಿಸಿದರು.
ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಗೆ ನಿಗದಿಪಡಿಸಿರುವ ರಾಗಿ ಖರೀದಿ ವೇಳೆಯಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು. ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಆಹಾರ ಇಲಾಖೆಯ ಜಂಟಿ ನಿರ್ದೇಶಕರು ಖರೀದಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ನಿರ್ದೇಶನ ನೀಡಿದರು.
ಹೊಸ ನ್ಯಾಯಬೆಲೆ ಅಂಗಡಿಗಳನ್ನು ಮಂಜೂರು ಮಾಡುವ ಸಂದರ್ಭದಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಸಮುದಾಯದ ಸಂಘ ಸಂಸ್ಥೆಗಳಿಗೆ/ಸಮುದಾಯದ ಖಾಸಗಿ ವ್ಯಕ್ತಿಗಳಿಗೆ ಮೀಸಲಾತಿಯನ್ನು ಅನುಸರಿಸಿ ಹೊಸ ನ್ಯಾಯಬೆಲೆ ಅಂಗಡಿ ಮಂಜೂರು ಮಾಡಲು ಆದ್ಯತೆ ನೀಡಬೇಕು ಎಂದು ತಿಳಿಸಿದರು.
ದೇಶದ ವಿವಿಧ ರಾಜ್ಯಗಳಿಗೆ ಹಾಗೂ ವಿದೇಶಗಳಿಗೆ ರಾಗಿಗೆ ಬೇಡಿಕೆ ಬರುತ್ತಿದ್ದು, ಅಧಿಕಾರಿಗಳು ಗುಣಮಟ್ಟದ ಕಾಯ್ದುಕೊಂಡು ರಾಗಿಯನ್ನು ಖರೀದಿ ಮಾಡಬೇಕು. ರೈತರು ಸಹ ಒಳ್ಳೆಯ ರಾಗಿ ಮಾರಾಟ ಮಾಡಬೇಕು ಎಂದರು.
ಸರ್ಕಾರದಿಂದ ಇಂದಿರಾ ಕಿಟ್ ನೀಡುವ ಯೋಜನೆ ಜಾರಿಗೊಳಿಸಿದ್ದು, ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಫೆಬ್ರವರಿ ಅಂತ್ಯ ಅಥವಾ ಮಾರ್ಚ್ ತಿಂಗಳಲ್ಲಿ ಕಿಟ್ ನೀಡಲಾಗುವುದು. ಕಿಟ್ನಲ್ಲಿ ಬೆಲೆ, ಸಕ್ಕರೆ, ಅಡುಗೆ ಎಣ್ಣೆ, ಉಪ್ಪು ನೀಡಲಾಗುವುದು. ಅದರಿಂದ ಪೌಷ್ಟಿಕ ಆಹಾರ ಸಿಗುತ್ತದೆ ಎಂದು ಅವರು ತಿಳಿಸಿದರು.
ತೂಕ ಅಳತೆಯ ಪರಿಶೀಲನೆಯನ್ನು ನಡೆಸಬೇಕು. ಗ್ರಾಹಕರಿಗೆ ಉಂಟಾಗುವ ನಷ್ಟವನ್ನು ತಡೆಯಬೇಕು, ಇಲಾಖೆಗೆ ನಿಗದಿಪಡಿಸುವ ಗುರಿಯನ್ನು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.


