ಭಾರತ ಮತ್ತೊಮ್ಮೆ ರಾಜಕೀಯವಾಗಿ ಮಗ್ಗುಲು ಬದಲಿಸುವ ಕಾಲಘಟ್ಟದಲ್ಲಿದೆ. ಸಂವಿಧಾನದಲ್ಲಿ ಅಚಲ ನಂಬಿಕೆಯುಳ್ಳವರು ಆತಂಕದಲ್ಲಿದ್ದಾರೆ. ಇಂಥ ಹೊತ್ತು ಪ್ರಜಾಪ್ರಭುತ್ವವನ್ನು ಉಳಿಸುವ ಕಟ್ಟಕಡೆಯ ಪ್ರಯತ್ನವನ್ನು ಪ್ರಜ್ಙಾವಂತರು ಮಾಡುತ್ತಿದ್ದಾರೆ. ʼಕಠಾರಿ ಅಂಚಿನ ನಡಿಗೆʼ ಪುಸ್ತಕ ಅಂಥಹಾ ಒಂದು ಪ್ರಯತ್ನ. ಚಂದ್ರಪ್ರಭ ಕಠಾರಿ ಬರೆದಿರುವ ಈ ಪುಸ್ತಕದ ಬಿಡುಗಡೆ ಸಮಾರಂಭವು 24-04-2024 ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಪುರುಷೋತ್ತಮ ಬಿಳಿಮಲೆಯವರು ಬರೆದ ಬೆನ್ನುಡಿ ಇಲ್ಲಿದೆ.
ಚಂದ್ರಪ್ರಭ ಕಠಾರಿಯವರ ಪ್ರಸ್ತುತ ಪುಸ್ತಕ ʼಕಠಾರಿ ಅಂಚಿನ ನಡಿಗೆʼ, ಅವರು ಸಾಂದರ್ಭಿಕವಾಗಿ ಬರೆದ 34 ಅಂಕಣ ಬರೆಹಗಳ ಸಂಕಲನ. ನೇರ ಮತ್ತು ಖಚಿತ ಮಾತುಗಳಿಗೆ ಹೆಸರಾಗಿರುವ ಅವರು ಈ ಪುಸ್ತಕದಲ್ಲಿ ವ್ಯಂಗ್ಯ ಮತ್ತು
ವಿಡಂಬನೆಗಳು ಕೂಡಾ ಎಷ್ಟು ಪರಿಣಾಮಕಾರಿಯಾಗಬಲ್ಲವು ಎಂಬುದನ್ನು ಓದುಗರಿಗೆ ಮನದಟ್ಟು ಮಾಡಿಕೊಟ್ಟಿದ್ದಾರೆ. ಹೀಗೆ ಬರೆಯಲು ಬೇಕಾದ ಧೈರ್ಯ ಅವರಲ್ಲಿರುವುದು ವಿಶೇಷವೇ ಸರಿ. ಅನೇಕರು ಗುಟ್ಟಾಗಿ
ಮಾತಾಡಲೂ ಹೆದರುವ ವಿಷಯಗಳ ಬಗ್ಗೆ ಕಠಾರಿಯವರು ಇಲ್ಲಿ ಯಾವ ಸಂಕೋಚವೂ ಇಲ್ಲದೆ ಬರೆದಿದ್ದಾರೆ.
ಕಠಾರಿಯವರ ಹರಿತವಾದ ವ್ಯಂಗ್ಯ-ವಿಡಂಬನೆಗಳು ವರ್ತಮಾನದ ಹಲವು ಘಟನೆಗಳ ಸುತ್ತ ಬೆಳೆದಿವೆ. ಕೋಮುವಾದ, ದ್ವೇಷ ಭಾಷಣ, ಧಾರ್ಮಿಕ ಅವಾಂತರಗಳು, ಬಡವರ ಮನೆಯ ಮೇಲೆ ಮಾತ್ರ ಹರಿಯುವ ಬುಲ್ಡೋಜರುಗಳು, ಭ್ರಷ್ಟಾಚಾರದ ಹೆಚ್ಚಳ, ಪಠ್ಯ ಪುಸ್ತಕ ರಚನೆಯ ಬಿಕ್ಕಟ್ಟುಗಳು, ಮಾಧ್ಯಮಗಳ ದಯನೀಯ ಸ್ಥಿತಿ, ದಿಢೀರನೆ ಹುಟ್ಟಿ ಮಾಯವಾದ ಉರಿಗೌಡ- ನಂಜೇಗೌಡರು, ವಾಟ್ಸಪ್ ವಿಶ್ವವಿದ್ಯಾಲಯದ ಪದವೀಧರರ ಜ್ಞಾನ ಮೀಮಾಂಸೆ, ಸುಳ್ಳುಗಳ ವಿಜೃಂಭಣೆ, ನಕಲಿ ನಾಯಕರ ಕಿತಾಪತಿಗಳು, ಸಮಾಜವನ್ನು ಹಿಂದಕ್ಕೆ ತಳ್ಳುತ್ತಿರುವ ಮೌಢ್ಯಗಳು, ರಾಜಕಾರಣಿಗಳ ಹಾಸ್ಯಾಸ್ಪದ ಹೇಳಿಕೆಗಳು, ಟ್ರೋಲ್ ಗಿರಾಕಿಗಳ ಕಷ್ಟಗಳೇ ಮೊದಲಾದ ಹಲವು ಸಂಗತಿಗಳು ಇಲ್ಲಿ ಕಠಾರಿಯವರ ಮಾತಿನೇಟಿಗೆ ಗುರಿಯಾಗಿವೆ.
ಕನ್ನಡದಲ್ಲಿ ಪೂರ್ಣಚಂದ್ರ ತೇಜಸ್ವಿ, ಲಂಕೇಶ್ ಮೊದಲಾದವರು ವ್ಯಂಗ್ಯವನ್ನು ಪರಿಣಾಮಕಾರಿಯಾಗಿ ಬಳಸಿದ್ದುಂಟು. ಚಾಪ್ಲಿನ್ ಈ ವಿಷಯದಲ್ಲಿ ಅದ್ಭುತವನ್ನೇ ಸಾಧಿಸಿದ. ನಮ್ಮ ಸಾಮಾನ್ಯ ಗ್ರಹಿಕೆಗಳಲ್ಲಿಯ
ವಿರೋಧಾಭಾಸಗಳನ್ನು ಅವರು ದಿಟ್ಟವಾಗಿ ಬಯಲಿಗೆಳೆದಿದ್ದರು. ಲಂಕೇಶರು ಬಳಸಿದ ʼಬಂʼ ಮತ್ತು ʼಗುಂʼ ಪದಗಳು ಒಂದು ಕಾಲಕ್ಕೆ ರಾಜ್ಯದ ರಾಜಕಾರಣವನ್ನೇ ಅಲ್ಲಾಡಿಸಿದ್ದವು. ಈ ಪರಂಪರೆಯನ್ನು ತನ್ನದೇ ರೀತಿಯಲ್ಲಿ
ಮುಂದುವರೆಸಿರುವ ಚಂದ್ರಪ್ರಭ ಕಠಾರಿಯವರು ವರ್ತಮಾನ ಕಾಲದಲ್ಲಿ ಪ್ರಚಲಿತದಲ್ಲಿರುವ ಅನೇಕ ಪದಗಳನ್ನು ಈ ಪುಸ್ತಕದಲ್ಲಿ ಬಳಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಇವು ಭಾಷಾಭ್ಯಾಸಿಗಳ ಪ್ರಯೋಜನಕ್ಕೂ ಬರಬಹುದು.
ಕಠಾರಿಯವರ ವ್ಯಂಗ್ಯ ಮತ್ತು ವಿಡಂಬನೆಗಳು ವಾಸ್ತವದ ವೈರುದ್ಧ್ಯಗಳನ್ನು ದಿಟ್ಟವಾಗಿ ತೆರೆದಿಡುತ್ತವೆ. ಇವುಗಳ ಓದಸಮಾಜದ ಹಲವು ಬೆಳವಣಿಗೆಗಳ ಬಗ್ಗೆ ಮಾತಾಡಲು ಮತ್ತು ಚರ್ಚಿಸಲು ಪ್ರಚೋದನೆ ನೀಡುತ್ತದೆ. ಮಾನವನ
ಮೂರ್ಖತನಗಳ ಬಗ್ಗೆ ಲೇಖಕರು ಬರೆಯದೇ ಹೋದರೆ ಮತ್ಯಾರು ಬರೆಯ ಬೇಕು?
(ಪುಸ್ತಕದ ಬೆನ್ನುಡಿಯಿಂದ)
ಪುರುಷೋತ್ತಮ ಬಿಳಿಮಲೆ
ನಿವೃತ್ತ ಪ್ರಾಧ್ಯಾಪಕರು, ಜೆ ಎನ್ ಯು, ದೆಹಲಿ