ಕೋಲಾರ. ಹೊಸ ವರ್ಷದ ಆರಂಭಕ್ಕೆ ಎರಡು ದಿನ ಬಾಕಿ ಇರುವಾಗ ಕೋಲಾರ ಜಿಲ್ಲಾಧಿಕಾರಿಗಳ ಕಚೇರಿಗೆ ಬಾಂಬ್ ಬೆದರಿಕೆಯ ಇ-ಮೇಲ್ ಸಂದೇಶ ರವಾನೆಯಾಗಿದೆ. 18 ದಿನಗಳ ಹಿಂದೆಯಷ್ಟೇ ಜಿಲ್ಲಾಧಿಕಾರಿಗಳ ಕಚೇರಿಗೆ ಬಾಂಬ್ ಬೆದರಿಕೆ ಕರೆ ಬಂದಿದ್ದ ಘಟನೆ ಮಾಸುವ ಮುನ್ನವೇ ಮತ್ತೊಂದು ಬೆದರಿಕೆ ಸಂದೇಶ ಬಂದಿರುವುದು ಸಿಬ್ಬಂದಿ ಮತ್ತು ಸಾರ್ವಜನಿಕರನ್ನು ಆತಂಕಕ್ಕೆ ದೂಡಿದೆ.
ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳ ಜಿಲ್ಲಾಧಿಕಾರಿಗಳ ಕಚೇರಿಯ ಎಲ್ಲ ಕೊಠಡಿಗಳಲ್ಲೂ ಶೋಧಕಾರ್ಯ ನಡೆಸಿದ್ದಾರೆ. ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.
ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

