ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಎರಡು ಶಾಲೆಗಳು ಹಾಗೂ ಉಡುಪಿ ಜಿಲ್ಲೆಯ ಒಂದು ಶಾಲೆಗೆ ಇಂದು ಬಾಂಬ್ ಬೆದರಿಕೆಯ ಇ-ಮೇಲ್ ಸಂದೇಶ ಬಂದಿದ್ದು ಆತಂಕ ಸೃಷ್ಟಿಯಾಗಿತ್ತು. ಪೊಲೀಸರು ತಪಾಸಣೆ ನಡೆಸಿ ಇದೊಂದು ಹುಸಿ ಬೆದರಿಕೆ ಎಂದು ಖಚಿತಪಡಿಸಿದ್ದಾರೆ. ಆದರೂ ಭದ್ರತೆಯ ದೃಷ್ಟಿಯಿಂದ ಪೊಲೀಸರು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದಾರೆ. ಉಡುಪಿಯ ಶಾರದಾ ಇಂಟರ್‌ನ್ಯಾಷನಲ್ ವಸತಿ ಶಾಲೆಗೆ ಇ-ಮೇಲ್ ಮೂಲಕ ಸೋಮವಾರ ಬೆಳಗ್ಗೆ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು, ಕೂಡಲೇ ಆಡಳಿತ ಮಂಡಳಿ ಪೊಲೀಸ್ ಠಾಣೆಗೆ ದೂರು ನೀಡಿದೆ. ಸ್ಥಳಕ್ಕೆಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ನಂತರ ಮಂಗಳೂರಿನ ಎರಡು ಪ್ರತಿಷ್ಠಿತ ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದಿದೆ. ಕಿಡಿಗೇಡಿಗಳು ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಕಳಿಸಿದ್ದಾರೆ. ಮಂಗಳೂರು ಪೊಲೀಸರು ಸ್ಥಳಕ್ಕೆ ತೆರಳಿ ಶಾಲೆಯಲ್ಲಿ ಶೋಧಕಾರ್ಯ ನಡೆಸಿ ಇದು ಕೂಡಾ ಹುಸಿ ಬೆದರಿಕೆ ಎಂಬುದನ್ನು ಖಚಿತಪಡಿಸಿದ್ದಾರೆ. ಸೋಮವಾರ ಬೆಳಗ್ಗಿನ ಜಾವ ಉಡುಪಿಯ ಶಾರದಾ ಇಂಟರ್‌ನ್ಯಾಶನಲ್ ಶಾಲೆಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಬೆಳಗ್ಗೆ 9:15ರ ಸುಮಾರಿಗೆ ಶಾಲೆಯ ಇ-ಮೇಲ್ ಪರಿಶೀಲನೆ ವೇಳೆ ಇದು ತಿಳಿದು ಬಂದಿದೆ.
ಶಾರದಾ ರೆಸಿಡೆನ್ಷಿಯಲ್ ಸ್ಕೂಲ್‌ಗೆ ಇ-ಮೇಲ್ ಮೂಲಕ ಬೆದರಿಕೆ ಬಂದಿದ್ದು, ದೇಶದ ನಕ್ಸಲ್ ಚಟುವಟಿಕೆ ಹಾಗೂ ಭಯೋತ್ಪಾದಕ ವಿಚಾರಗಳನ್ನು ಅದರಲ್ಲಿ ಉಲ್ಲೇಖಿಸಲಾಗಿದೆ. ಇದು ನಮ್ಮ ಕೊನೆಯ ಕಾರ್ಯಾಚರಣೆ ಎಂದಿರುವ ಇ-ಮೇಲ್‌ನಲ್ಲಿ ಕಿಡಿಗೇಡಿಗಳು ಅಫ್ಜಲ್ ಗುರು ಗಲ್ಲು ವಿಚಾರ ಸೇರಿದಂತೆ ಅನೇಕ ವಿಚಾರಗಳನ್ನು ಉಲ್ಲೇಖಿಸಿದ್ದಾರೆ. IED ಸ್ಫೋಟ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾರೆ. ತಮಿಳುನಾಡಿನ ಅಣ್ಣಾ ವಿವಿಯ ಪ್ರೊಫೆಸರ್ ಚಿತ್ರಕಲಾ ಗೋಪಾಲನ್ ಘಟನೆ ಉಲ್ಲೇಖಿಸಿ ಬೆದರಿಕೆ ಹಾಕಿದ್ದಾರೆ. ಈ ಸ್ಫೋಟದ ಮೂಲಕ ನಾವು ಸ್ವರ್ಗ ಪಡೆಯುತ್ತೇವೆ ಎಂದೂ ಹೇಳಿದ್ದು ಕೆಲ ಕಾಲ ಶಾಲೆಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು.