ಬಾಂಬ್‌ ಸ್ಫೋಟ: ನೈತಿಕ ಹೊಣೆಹೊತ್ತು  ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡಲಿ: ಬಿಕೆ ಹರಿಪ್ರಸಾದ್‌ ಆಗ್ರಹ

Most read

ಬೆಂಗಳೂರು: ದೆಹಲಿಯ ಕೆಂಪುಕೋಟೆ ಸಮೀಪ ನಡೆದ ಬಾಂಬ್ ಸ್ಫೋಟದ ಕ್ರೂರ ಘಟನೆ ರಾಷ್ಟ್ರದ ಭದ್ರತೆಗೆ ಎದುರಾದ ಗಂಭೀರ ಸವಾಲು. ಅಮಾಯಕ ನಾಗರಿಕರ ಪ್ರಾಣ ಕಸಿದುಕೊಂಡ ಈ ಭಯಾನಕ ಕೃತ್ಯವನ್ನು ಕಾಂಗ್ರೆಸ್‌ ಮುಖಂಡ ವಿಧಾನಪರಿಷತ್‌ ಸದಸ್ಯ ಬಿ ಕೆ ಹರಿಪ್ರಸಾದ್‌ ಖಂಡಿಸಿದ್ದಾರೆ.

ರಾಷ್ಟ್ರದ ರಾಜಧಾನಿಯಲ್ಲೇ ಇಂತಹ ಕೃತ್ಯ ನಡೆದಿರುವುದು ಸರ್ಕಾರದ ಭದ್ರತಾ ವ್ಯವಸ್ಥೆಯ ವಿಫಲತೆಯ ಸ್ಪಷ್ಟ ನಿದರ್ಶನ. ದೆಹಲಿಯಂತಹ ಉನ್ನತ ಭದ್ರತಾ ವಲಯದಲ್ಲಿ ಸ್ಫೋಟ ಸಂಭವಿಸಿರುವುದು ಕೇವಲ ಕಾನೂನು ಸುವ್ಯವಸ್ಥೆಯ ವಿಷಯವಲ್ಲ — ಇದು ರಾಷ್ಟ್ರದ ಆಂತರಿಕ ಭದ್ರತೆಯ ಮೇಲಿನ ನಂಬಿಕೆಗೆ ಬಿದ್ದ ಭಾರಿ ಹೊಡೆತ.

ಕೇಂದ್ರ ಗೃಹ ಸಚಿವ Amit Shah  ನೇತೃತ್ವದ ಭದ್ರತಾ ವ್ಯವಸ್ಥೆ ಸಂಪೂರ್ಣ ಕುಸಿದಿದೆ. ದೇಶದ ರಾಜಧಾನಿಯೇ ಸುರಕ್ಷಿತವಾಗಿರದಿದ್ದರೆ, ಇಡೀ ಭಾರತವು ಹೇಗೆ ಸುರಕ್ಷಿತವಾಗಿರಲು ಸಾಧ್ಯ? ಗೃಹ ಸಚಿವರ ಅಸಮರ್ಥತೆ ಮತ್ತು ನಿರ್ಲಕ್ಷ್ಯದಿಂದಲೇ ಇಂತಹ ದಾರುಣ ಘಟನೆಗಳು ಮತ್ತೆ ಮತ್ತೆ ಮರುಕಳಿಸುತ್ತಿದೆ. ಪುಲ್ವಾಮಾ ಬಳಿ 40 ಭಾರತೀಯ ವೀರ ಯೋಧರನ್ನ ಬಲಿ ಪಡೆದುಕೊಂಡಿದ್ದು, ಪಹಲ್ಗಾಮ್ ನಲ್ಲಿ ಅಮಾಯಕ 26 ಪ್ರವಾಸಿಗರ ಬಲಿ, ರಾಷ್ಟ್ರ ರಾಜಧಾನಿಯಲ್ಲೇ ಭೀಕರ ಬಾಂಬ್ ಸ್ಪೋಟ ಹೀಗೆ ಸಾಲು ಸಾಲು ಭಯೋತ್ಪಾದಕ ಚಟುವಟಿಕೆಗಳು ನಡೆಯುತ್ತಿದ್ದರು ಕಡಿವಾಣ ಹಾಕುವಲ್ಲಿ ಸಂಪೂರ್ಣ ವಿಫಲವಾಗುತ್ತಿದೆ.

ಅಮಾಯಕ ಜನರ ಪ್ರಾಣಗಳು ರಾಜಕೀಯ ಆಟಗಳಿಗೆ ಬಲಿಯಾಗುತ್ತಿರುವುದು ಅಕ್ಷಮ್ಯ. ಜನರ ಜೀವ ಮತ್ತು ಸುರಕ್ಷತೆಯ ಖಾತ್ರಿ ನೀಡಬೇಕಾದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಮ್ಮ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಗೃಹ ಸಚಿವರ ಮೇಲ್ವಿಚಾರಣೆಯಲ್ಲಿರುವ ಭದ್ರತಾ ವ್ಯವಸ್ಥೆ ವಿಫಲವಾಗಿದೆ ಎಂಬುದು ಸ್ಪಷ್ಟವಾಗಿರುವಾಗ, ನೈತಿಕ ಹೊಣೆಹೊತ್ತು  ಗೃಹ ಸಚಿವ ಅಮಿತ್ ಶಾ ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.ದೆಹಲಿಯ ಜನತೆಗೆ ನ್ಯಾಯ ಸಿಗಬೇಕು, ತಪ್ಪಿತಸ್ಥರನ್ನು ಕಾನೂನಿನ ಮುಂದೆ ತರಬೇಕು, ಮತ್ತು ಭದ್ರತಾ ವ್ಯವಸ್ಥೆಯಲ್ಲಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದೂ ಅವರು ಆಗ್ರಹಪಡಿಸಿದ್ದಾರೆ.

More articles

Latest article