ದೆಹಲಿ: ದೆಹಲಿಯ ಕೆಂಪುಕೋಟೆಯ ಬಳಿ ನಿನ್ನೆ ರಾತ್ರಿ ನಡೆದ ಸ್ಫೋಟಕ್ಕೆ ಕಾರಣವಾದ ಹುಂಡೈ i20ಕಾರನ್ನು ಡ್ರೈವ್ ಮಾಡುತ್ತಿದ್ದ ವ್ಯಕ್ತಿಯ ವಿಡಿಯೋ ದೃಶ್ಯಗಳು ಬಯಲಾಗಿವೆ. ಈತನನ್ನು ಪುಲ್ವಾಮಾ ನಿವಾಸಿ, ವೈದ್ಯ ಉಮರ್ ಮೊಹಮ್ಮದ್ ಎಂದು ಗುರುತಿಸಲಾಗಿದೆ. ಈ ಮಧ್ಯೆ ಈ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 12ಕ್ಕೆ ಏರಿಕೆಯಾಗಿದ್ದು 20ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಕೆಂಪುಕೋಟೆ ಮೆಟ್ರೊ ನಿಲ್ದಾಣದ ಸಮೀಪದಲ್ಲಿ ನಿನ್ನೆ ಸಂಜೆ 6.50ರ ಹೊತ್ತಿಗೆ ಹುಂಡೈ ಐ–20 ಕಾರು ಸ್ಫೋಟಗೊಂಡಿತ್ತು.
ಕಾರು ಚಲಾಯಿಸಿದ್ದ ವ್ಯಕ್ತಿಯ ಸಿಸಿಟಿವಿ ದೃಶ್ಯಗಳು ಸೆರೆಯಾಗಿದ್ದು ಆತನನ್ನು ಗುರುತಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ನಿನ್ನೆಯಷ್ಟೇ ಫರಿದಾಬಾದ್‌ನಲ್ಲಿ ಅಪಾರ ಪ್ರಮಾಣದ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಆ ಉಗ್ರರ ತಂಡಕ್ಕೂ ಉಮರ್ ಮೊಹಮ್ಮದ್ ಗೂ ಸಂಪರ್ಕ ಇದೆ ಎಂದೂ ತಿಳಿಸಿದ್ದಾರೆ.
ಈ ಅವಘಡ ಕುರಿತು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ ಹಾಗೂ ಸ್ಫೋಟಕ ವಸ್ತುಗಳ ಕಾಯ್ದೆ ಅಡಿಯಲ್ಲಿ ಪೊಲೀಸರು ಇಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮುನ್ನೆಚ್ಚರಿಕೆ ಕ್ರಮವಾಗಿ ದೆಹಲಿಯಲ್ಲಿ ವಿಮಾನ ನಿಲ್ದಾಣ, ರೈಲ್ವೇ ನಿಲ್ದಾಣ, ಬಸ್ ನಿಲ್ದಾಣ ಮತ್ತು ಜನನಿಬಿಡ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಬಹುತೇಕ ಕಡೆ ವಾಹನಗಳ ತಪಾಸಣೆ ಮಾಡಲಾಗುತ್ತಿದೆ.

