ವೆಲೇರಿಯನ್ ರೋಡ್ರಿಗಸ್ ಅವರಿಗೆ ಬೋಧಿವೃಕ್ಷ; ಬೆಟ್ಟಯ್ಯ ಕೋಟೆ, ನಫೀಸಾ ಪೆರುವಾಯಿ ಸೇರಿ ಐವರಿಗೆ ಬೋಧಿವರ್ಧನ ಪ್ರಶಸ್ತಿ ಪ್ರಕಟ

Most read

ಬೆಂಗಳೂರು: ಕಳೆದ ಹದಿನಾರು ವರ್ಷಗಳಿಂದ ‘ಅಂಬೇಡ್ಕರ್ ಜಯಂತಿ’ಯನ್ನು ‘ಅಂಬೇಡ್ಕರ್ ಹಬ್ಬ’ವಾಗಿ ಆಚರಿಸಿಕೊಂಡು ಬರುತ್ತಿರುವ ಬೆಂಗಳೂರಿನ ‘ಸ್ಪೂರ್ತಿಧಾಮ’ ಸಂಸ್ಥೆಯು ತಳಸ್ತರದವರ ಅಭಿವೃದ್ಧಿ ಮತ್ತು ಏಳಿಗೆಗಾಗಿ ದುಡಿದವರನ್ನು ಗುರುತಿಸುವ, ಗೌರವಿಸುವ ಸಲುವಾಗಿ ‘ಬೋಧಿವೃಕ್ಷ’ ಮತ್ತು ‘ಬೋಧಿವರ್ಧನ’ ಹೆಸರಿನ ರಾಷ್ಟ್ರ ಪ್ರಶಸ್ತಿಗಳನ್ನು ನೀಡುತ್ತಾ ಬರುತಿದೆ. ಪ್ರಸಕ್ತ ಸಾಲಿನ ‘ಬೋಧಿವೃಕ್ಷ’ ಪ್ರಶಸ್ತಿಗೆ ವಿದ್ವಾಂಸರು ಮತ್ತು ರಾಜಕೀಯ ವಿಜ್ಞಾನಿಗಳೂ ಆಗಿರುವ ಪ್ರೊ. ವೆಲೇರಿಯನ್ ರೋಡ್ರಿಗಸ್ ಅವರಿಗೆ ಪ್ರಕಟಿಸಲಾಗಿದೆ. ಪ್ರಶಸ್ತಿಯು ಪ್ರಶಸ್ತಿ ಫಲಕ ಮತ್ತು ಒಂದು ಲಕ್ಷ ರೂಪಾಯಿ ನಗದು ನೀಡಿ ಗೌರವಿಸಲಾಗುತ್ತದೆ. ಹಾಗೆಯೇ ಬೆಟ್ಟಯ್ಯ ಕೋಟೆ, ನಫೀಸಾ ಪೆರುವಾಯಿ, ಡಾ. ಶಿವಪ್ಪ ಅರಿವು, ಸಂಗಮ್ಮ ಸಾಣಕ ಮತ್ತು ಡಿಂಗ್ರಿ ನರಸಪ್ಪ ಅವರಿಗೆ ‘ಬೋಧಿವರ್ಧನ’ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತಿದೆ. ಪ್ರಶಸ್ತಿಯು ಪ್ರಶಸ್ತಿ ಫಲಕ ಮತ್ತು ತಲಾ ಇಪ್ಪತ್ತೈದು ಸಾವಿರ ರೂಪಾಯಿ ನಗದನ್ನು ಒಳಗೊಂಡಿರುತ್ತದೆ.

ಪ್ರಶಸ್ತಿ ಪ್ರಧಾನ ಸಮಾರಂಭವು ಸ್ಪೂರ್ತಿಧಾಮದಲ್ಲಿ ಏಪ್ರಿಲ್ 14 ರಂದು ಮಧ್ಯಾಹ್ನ 3 ಗಂಟೆಗೆ ಆರಂಭವಾಗಲಿದೆ. ನಡೆಯಲಿದ್ದು, ವಿಧಾನಸಭೆಯ ಮಾಜಿ ಅಧ್ಯಕ್ಷ ಕೆ.ಆರ್. ರಮೇಶ್ ಕುಮಾರ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಸ್ಪೂರ್ತಿಧಾಮ ಅಧ್ಯಕ್ಷರಾದ ಎಸ್. ಮರಿಸ್ವಾಮಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.

ಪ್ರೊ. ವೆಲೇರಿಯನ್ ರೋಡ್ರಿಗಸ್:

ಇವರು ನಮ್ಮ ಕಾಲದ ಅದ್ವಿತೀಯ ವಿದ್ವಾಂಸರು ಮತ್ತು ರಾಜಕೀಯ ವಿಜ್ಞಾನಿಯಾಗಿದ್ದಾರೆ. ಡಾ. ಬಿ.ಆರ್ ಅಂಬೇಡ್ಕರ್ ಅವರ ಸಿದ್ಧಾಂತಗಳನ್ನು ಆಳವಾಗಿ ಅಧ್ಯಯನ ಮಾಡಿರುವ ಇವರು, ಆ ಮೂಲಕ ಭಾರತದ ಸಂವಿಧಾನದ ಮೌಲ್ಯಗಳನ್ನು ಪುನರ್ ಸ್ಥಾಪಿಸುವ ಮತ್ತು ಅದರ ಪರವಾಗಿ ಅಸ್ಖಲಿತವಾಗಿ ನಿಲ್ಲುವ ನಿಲುವುಗಳೇ ಅಂತಿಮವಾದವು ಎಂಬುದನ್ನು ಸ್ಪಷ್ಟಪಡಿಸುತ್ತಾರೆ. ಜರ್ಮನಿ ಮತ್ತು ಕೆನಡಾದ ಹಲವು ವಿಶ್ವವಿದ್ಯಾಲಯಗಳ ಸಂದರ್ಶಕ ಪ್ರಾಧ್ಯಾಪರಾಗಿದ್ದ ಸಂದರ್ಭದಲ್ಲಿ ಪ್ರೊ ಅವರು ಅಂಬೇಡ್ಕರ್ ಚಿಂತನೆಗಳ ಮೌಲ್ಯಗಳನ್ನು ಪ್ರಸಾರ ಮಾಡುವುದರಲ್ಲಿ ಮುಖ್ಯವಾದ ಪಾತ್ರವನ್ನು ವಹಿಸಿದ್ದಾರೆ. ಕರಾವಳಿ ಕರ್ನಾಟಕದ ಭೂರಹಿತ ತಳಸಮುದಾಯಗಳ ರೈತರಿಗೆ ಭೂಮಿಯನ್ನು ಕೊಡಿಸುವುದಕ್ಕಾಗಿ ಹೋರಾಟಗಳಲ್ಲೂ ತೊಡಗಿಸಿಕೊಂಡಿದ್ದ ಇವರು ಅನೇಕ ಕೃತಿಗಳನ್ನು ರಚಿಸಿದ್ದಾರೆ.

ಬೆಟ್ಟಯ್ಯ ಕೋಟೆ:

ಹೆಗ್ಗಡದೇವನಕೋಟೆಮೂಲದ ಬೆಟ್ಟಯ್ಯ ಕೋಟೆ ಅವರು ಬಿಎ ಪದವಿ ನಂತರ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. 1974ರಲ್ಲಿ ದಲಿತ ಸೇವಕ ಸಂಘ ಮತ್ತು 1981ರಲ್ಲಿ ದಲಿತ ಸಂಘರ್ಷ ಸಮಿತಿಗೆ ಸೇರಿ ಹೆಗ್ಗಡದೇವನಕೋಟೆ ತಾಲ್ಲೂಕು ಸಂಚಾಲಕರಾಗಿ ಆಯ್ಕೆಯಾದರು ಅಲ್ಲಿಂದ ಅವರು ಅನೇಕ ದಲಿತರ ಪರ ಭೂ ಹೋರಾಟಗಳಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಹುಣಸೆಕುಪ್ಪೆ, ನಂಜಯ್ಯನ ಕಾಲೋನಿ, ಪಡುಕೋಟೆ, ದೇವಲಾಪುರ, ಹುಣಸೂರು ಬಿ.ಆರ್ ಕಾವಲ್, ಪಿರಿಯಾಪಟ್ಟಣ ಗುಡ್ಡೆನಹಳ್ಳಿ ಭೂ ಹೋರಾಟಗಳು, ಸುರಗುರು ಮತ್ತು ಬದನವಾಳು ದಲಿತರ ಹತ್ಯಾಕಾಂಡ, ಚಾಮಲಾಪುರ ಉಷ್ಣ ಸ್ಥಾವರ, ಮೈಸೂರು ತಾಲ್ಲೂಕು ಬೆಲವತ್ತ ನಿವೇಶನ, ಚಂದ್ರಗುತ್ತಿ ಬೆತ್ತಲೆ ಸೇವೆ, ಹುಣಸೆಕೋಟಿ, ಕಂಬಾಲಪಲ್ಲಿ ನರಮೇಧ ಹೀಗೆ ಹತ್ತು ಹಲವು ಹೋರಾಟಗಳಲ್ಲಿ ಭಾಗಿಯಾಗಿರುತ್ತಾರೆ. ಆಂಧ್ರದ ಚಂದೂರು ಹತ್ಯಾಕಾಂಡದ ವಿರುದ್ಧ ಜನಕಲಾ ಮೇಳ ಸಹ ಇವರು ಸಂಘಟಿಸಿರುತ್ತಾರೆ. ಹೀಗೆ ಹತ್ತು ಹಲವು ಹೋರಾಟಗಳಲ್ಲಿ ಭಾಗವಹಿಸಿರುವ ಇವರ ಜನ ಸೇವೆ ಅಗಾಧವಾಗಿದೆ.

ನಫೀಸಾ ಪೆರುವಾಯಿ:

ಶ್ರೀಮತಿ ನಫೀಸಾ ಪೆರುವಾಯಿ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪೆರುವಾಯಿ ಗ್ರಾಮದವರು. ಇವರ ಕಾಲೇಜು ಶಿಕ್ಷಣವು ಕನ್ಯಾನದಲ್ಲಿ ನಡೆಯಿತು. ಇವರು 2020-21ರಲ್ಲಿ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿ ವಿಜೇತರಾಗಿ ಉಪಾಧ್ಯಕ್ಷೆಯಾಗಿರುತ್ತಾರೆ. ಆ ಗ್ರಾಮದ ಸ್ವಚ್ಛತಾ ವಾಹನಕ್ಕೆ ಚಾಲಕರು ದೊರೆಯದಿದ್ದಾಗ ತಾವು ಪಂಚಾಯತ್ ಉಪಾಧ್ಯಕ್ಷೆ ಎಂಬುದನ್ನು ಮರೆತು ತಾವೇ ವಾಹನ ತೆಗೆದುಕೊಂಡು ಗ್ರಾಮದ ಪ್ರತಿ ಮನೆ ಮನೆಗೆ ತೆರಳಿ ಕಸ ಪಡೆದು ಗ್ರಾಮದ ಶುಚಿತ್ವಕ್ಕೆ ಅಡಿಪಾಯ ಹಾಕಿದ್ದಾರೆ. ಉಪಾಧ್ಯಕ್ಷೆಯ ಸರದಿ ಮುಗಿದ ನಂತರ ಅಧ್ಯಕ್ಷರಾದ ನಫೀಸಾ ಗರ್ಭಿಣಿಯಾದರೂ ಹೆರಿಗೆಯ ಹಿಂದಿನ ದಿನದವರೆಗೆ ಪಂಚಾಯತಿಗೆ ಆಗಮಿಸಿ ತಮ್ಮ ಕೆಲಸ ನಿರ್ವಹಿಸಿರುತ್ತಾರೆ. ಅಲ್ಲದೇ ಹೆರಿಗೆಯಾದ 9ನೇ ದಿನ ಮತ್ತೆ ಸಾರ್ವಜನಿಕ ಕೆಲಸ ಪ್ರಾರಂಭಿಸಿ ಜನಸೇವೆ ಎಷ್ಟು ಮುಖ್ಯ ಎಂಬುದನ್ನು ತೋರಿಸಿಕೊಟ್ಟಿರುತ್ತಾರೆ. ಇವರು ಸ್ವಚ್ಛ ಗ್ರಾಮಕ್ಕೆ ಸಂಬಂಧಿಸಿದಂತೆ ರಾಜ್ಯ ತರಬೇತುದಾರರಾಗಿ ಆಯ್ಕೆಯಾಗಿರುತ್ತಾರೆ. ಇವರ ಕಾರ್ಯವನ್ನು ಮೆಚ್ಚಿ ಸರ್ಕಾರ ಮತ್ತು ಅನೇಕ ಸಂಘ-ಸಂಸ್ಥೆಗಳು ಇವರನ್ನು ಸನ್ಮಾನಿಸಿವೆ.

ಡಾ. ಶಿವಪ್ಪ ಅರಿವು:

ಇವರು ಸಮಾಜ ಸುಧಾರಣೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಅಸ್ಪೃಶ್ಯತೆ ನಿರ್ಮೂಲನೆಗಾಗಿ ಗೃಹಪ್ರವೇಶ, ದೇವಾಲಯ ಪ್ರವೇಶ, ಸಹಭೋಜನ, ಸಮತೆಯ ಟೀ, ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ, ಒಂದು ನೀರು ಒಂದು ಬಾವಿ ಇತ್ಯಾದಿ ಕಾರ್ಯಕ್ರಮಗಳನ್ನು 2014 ರಿಂದ ನಡೆಸಿಕೊಂಡು ಬಂದಿದ್ದಾರೆ. ವಿಧವೆ ಮತ್ತು ವಿಚ್ಛೇಧಿತರಿಗೆ ಮರುಮದುವೆಗಳನ್ನು ಏರ್ಪಡಿಸುತ್ತಿದ್ದಾರೆ. ಗ್ರಾಮೀಣ ಭಾರತದ ಇತಿಹಾಸ, ಕಲೆ, ಕೃಷಿ, ಕೈಗಾರಿಕೆ, ಕೌಶಲ್ಯಗಳನ್ನು ದಾಖಲಿಸಲು ಅರಿವು ಭಾರತ ಯೂಟ್ಯೂಬ್ ಚಾನೆಲ್ ಮೂಲಕ ಮುನ್ನೂರಕ್ಕೂ ಹೆಚ್ಚು ಡಾಕ್ಯುಮೆಂಟರಿಗಳನ್ನು ಪ್ರಕಟಿಸಿದ್ದಾರಲ್ಲದೆ ಭಾರತದ ಚರಿತ್ರೆ ಮತ್ತು ಸಂಸ್ಕೃತಿ ಕುರಿತು ಅನೇಕ ಪುಸ್ತಕಗಳನ್ನು ರಚಿಸಿದ್ದಾರೆ.

ಸಂಗಮ್ಮ ಸಾಣಕ:

ಸಂಗಮ್ಮ ಸಾಣಕ ಆಳಂದ ತಾಲ್ಲೂಕಿನ ನಿಂದಾಳ ಗ್ರಾಮದವರು. 2013ಕ್ಕಿಂತ ಮುಂಚಿನ ದಿನಗಳಲ್ಲಿ ನಿಂಬಾಳ ಸಾರಾಯಿ ಕುಡುಕರಿಂದ ತುಂಬಿ ಹೋಗಿತ್ತು ಕುಡಿದ ಯುವಕರ ಗಲಾಟೆ, ಬೈಗುಳ ಎಲ್ಲೆಲ್ಲಿಯೂ ಕೇಳಿಬರುತ್ತಿತ್ತು. ಸಾರಾಯಿ ಕುಡಿತದಿಂದ ಅನೇಕರು ಜೀವ ತೆತ್ತರು. ಅನೇಕ ಮನೆಗಳು ಒಡೆದವು. ಇದನ್ನೆಲ್ಲ ನೋಡಿದ ಸಂಗಮ್ಮ ಸಾಣಕ ಅವರು ಇತರ ಗ್ರಾಮದ ಮಹಿಳೆಯರ ಜೊತೆ ಸೇರಿ ‘ಜಡೆ ಶಾಂತಲಿಂಗೇಶ್ವರ ವ್ಯಸನ ಮುಕ್ತ ಸಮಾಜ ನಿರ್ಮಾಣ ಸಮಿತಿ’ ರಚಿಸಿಕೊಂಡು ನಿಂಬಾಳ ಗ್ರಾಮವನ್ನು ಸಾರಾಯ ಮುಕ್ತವಾಗಿ ಮಾಡಲು ಛಲತೊಟ್ಟರು. ಕುಡುಕ ಗಂಡ ಮತ್ತು ಮಕ್ಕಳಿಂದ ನೊಂದ ಮಹಿಳೆಯರನ್ನು ಸಂಘಕ್ಕೆ ಸೇರಿಸಿಕೊಂಡರು. ಹಾಡು, ಬುದ್ದಿಮಾತು, ಕೆಲ ಸಂದರ್ಭದಲ್ಲಿ ಕುಡುಕರನ್ನು ಮಠಕ್ಕೆ ಕರೆತಂದು ಅವರ ಮೇಲೆ ರೂ.1001/-ದಂಡ ಹಾಕಿಸಿದರು. ಇದು ಕುಡುಕರ ಮೇಲೆ ಪರಿಣಾಮ ಬೀರಿತು ಮತ್ತು ಒಬ್ಬೊಬ್ಬರಾಗಿ ಅವರು ಸಾರಾಯಿ ಬಿಟ್ಟರು. ಸಾರಾಯಿ ತಯಾರಾಗುತ್ತಿದ್ದ ದುಧನಿ ತಾಂಡದಲ್ಲಿಯೂ ಜಾಗೃತಿ ಮೂಡಿಸಿ ತಯಾರಿಕೆ ನಿಲ್ಲಿಸುವಂತೆ ಪ್ರೇರೇಪಿಸಿದರು. ಇವರ ಹೋರಾಟದಿಂದ ನಿಂಬಾಳ ಗ್ರಾಮ ಸಾರಾಯಿ ಮುಕ್ತವಾಗಿದೆ.

ಡಿಂಗ್ರಿ ನರಸಪ್ಪ:

ಡಿಂಗ್ರಿ ನರಸಪ್ಪ ಅವರು ಕುಷ್ಟಗಿ ತಾಲೂಕಿನ ಕುದರಿಮೋತಿ ಗ್ರಾಮದವರು, ಆ ಗ್ರಾಮದ ಸ್ವಾಮಿಗಳು ಮಹಿಳೆಯರ ಮೇಲೆ ನಡೆಸಿದ ದೌರ್ಜನ್ಯದ ವಿರುದ್ಧ ಹೋರಾಟ ಪ್ರಾರಂಭಿಸಿದವರು, ದಲಿತ ಸಂಘರ್ಷ ಸಮಿತಿ ಸೇರಿ ದಲಿತ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ನಿರಂತರವಾಗಿ ಹೋರಾಡುತ್ತಾ ಬಂದಿದ್ದಾರೆ. ಮಾನ್ವಿ ತಾಲೂಕಿನ ಅರವಳ್ಳಿ ಗ್ರಾಮದ ಬೆತ್ತಲೆ ಸೇವೆ ಅದೇ ತಾಲ್ಲೂಕಿನ ನೀರಮಾನ್ವಿ ಗ್ರಾಮದಲ್ಲಿನ ದೇವದಾಸಿ ಪದ್ಧತಿ ಇವುಗಳ ವಿರುದ್ಧ ನಿರಂತರವಾಗಿ ಹೋರಾಡಿ ಆ ಪದ್ಧತಿಗಳನ್ನು ನಿಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುತ್ತಾರೆ. 1991 ರಿಂದ ಜಿಲ್ಲಾ ಸಾಕ್ಷರತಾ ಮಿಷನ್ ಸೇರಿ ಜನರನ್ನು ಅಕ್ಷರಸ್ಥರನ್ನಾಗಿ ಮಾಡಲು ಶ್ರಮಿಸಿರುತ್ತಾರೆ. 2007ರಲ್ಲಿ ‘ಶ್ರುತಿ ಸಂಸ್ಕೃತಿ ಸಂಸ್ಥೆ’ಯನ್ನು ಹುಟ್ಟು ಹಾಕಿ ಜಿಲ್ಲೆಯಾದ್ಯಂತ ಬಾಲ್ಯ ವಿವಾಹ, ಅಸ್ಪೃಶ್ಯತೆ ನಿವಾರಣೆ, ಬಾಲಕಾರ್ಮಿಕ ಪದ್ಧತಿ, ದೇವದಾಸಿ ಪದ್ಧತಿ ಮುಂತಾದವುಗಳ ವಿರುದ್ಧ ಸಕ್ರಿಯ ಜನ ಜಾಗೃತಿ ಮೂಡಿಸಿರುತ್ತಾರೆ ಅಲ್ಲದೆ ಹಾಡು, ನಾಟಕ, ತಮಟೆ ಮುಂತಾದ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಿಕೊಂಡು ಸಾಮಾಜಿಕ ಅರಿವನ್ನು ಮೂಡಿಸುವ ಕೆಲಸದಲ್ಲಿ ತೊಡಗಿದ್ದಾರೆ.

More articles

Latest article