ಬೆಂಗಳೂರು: ಬಿಎಂಟಿಸಿ ಬಸ್ ಹಿಂದಿನಿಂದ ಡಿಕ್ಕಿಹೊಡೆದ ಪರಿಣಾಮ ಓರ್ವ ವೈದ್ಯರೂ ಸೇರಿ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಗರದ ಬನಶಂಕರಿ ಸಂಚಾರಿ ಪೊಲೀಸ್ ಠಾಣೆಯ ಸೀತಾ ಸರ್ಕಲ್ ಹತ್ತಿರ ನಡೆದಿದೆ.
ಮೃತರನ್ನು ವಿಷ್ಣು ಮತ್ತು ಅನಿಲ್ ಕುಮಾರ್ ಎಂದು ಗುರುತಿಸಲಾಗಿದೆ. 80 ವರ್ಷದ ಡಾ.ವಿಷ್ಣು ವೃತ್ತಿಯಿಂದ ವೈದ್ಯರಾಗಿದ್ದರು. ಅನಿಲ್ ಕುಮಾರ್ ಆಟೋ ಚಾಲಕ ಎಂದು ತಿಳಿದು ಬಂದಿದೆ. ಡಾ.ವಿಷ್ಣು ನಿನ್ನೆಯಷ್ಟೇ ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡಿದ್ದರು. ಅಪ್ಪನ ಹುಟ್ಟುಹಬ್ಬ್ಕಾಗಿ ಇವರ ಮಗ ವಿದೇಶದಿಂದ ಬಂದಿದ್ದರು. ಹುಟ್ಟುಹಬ್ಬದ ನಂತರ ನಿನ್ನೆ ಮರಳಿದ್ದರು. ಇಂದು ಆಟೋದಲ್ಲಿ ವಿಷ್ಣು ತೆರಳುತ್ತಿದ್ದರು. ಈ ವೇಳೆ ಬಿಎಂಟಿಸಿ ಬಸ್, ಹಿಂದಿನಿಂದ ಡಿಕ್ಕಿ ಹೊಡೆದಿದ್ದು, ಆಟೋದಲ್ಲಿದ್ದ ಇಬ್ಬರೂ ಮೃತಪಟ್ಟಿದ್ದಾರೆ. ಬಸ್ ಇಂದಿರಾನಗರ ಡಿಪೋಗೆ ಸೇರಿದ್ದು ಎಂದು ಗೊತ್ತಾಗಿದೆ.