ಕನ್ನಡ ಚಿತ್ರರಂಗದಲ್ಲಿ ಕಂಟೆಂಟ್ ಒರಿಯೆಂಟೆಡ್ ಸಿನಿಮಾಗಳಿಗೇನು ಕೊರತೆ ಇಲ್ಲ. ಆದರೆ ಅಂತ ಸಿನಿಮಾಗಳು ರಿಲೀಸ್ ಆದರೆ ಥಿಯೇಟರ್ ನಲ್ಲಿ ಓಡುವುದು ಬಹಳ ಕಡಿಮೆ. ಆದರೆ ಜನಕ್ಕೆ ಗೊತ್ತಾದಾಗ ಶೋಗಳು ಹೆಚ್ಚಾಗುತ್ತ ಹೋಗುತ್ತವೆ. ಕನ್ನಡದಲ್ಲಿ ಬಂದಂತಹ ಸೈನ್ಸ್ ಫಿಕ್ಷನ್ ‘ಬ್ಲಿಂಕ್’ ಕೂಡ ಹಾಗೇ ಆಗಿದ್ದು. ಮಾರ್ಚ್ 8ಕ್ಕೆ ಸಿನಿಮಾ ತೆರೆಗೆ ಬಂದಿತ್ತು. ಆದರೆ ಆರಂಭದಲ್ಲಿ ಅಂತಹ ರೆಸ್ಪಾನ್ಸ್ ಏನು ಸಿಗಲಿಲ್ಲ. ಸಿನಿಮಾ ನೋಡಿದ ಪ್ರತಿಯೊಬ್ಬರಿಗೂ ಇಷ್ಟವಾಗುತ್ತಾ ಹೋಯ್ತು. ಬಳಿಕ ತನ್ನ ಶೋಗಳನ್ನು ಹೆಚ್ಚಿಸಿಕೊಂಡಿತ್ತು. 50 ದಿನಗಳ ಕಾಲ ಯಶಸ್ವಿ ಪ್ರದರ್ಶನ ಕಂಡಿತ್ತು. ಇದೀಗ ಯುಎಸ್ ಅಮೇಜಾನ್ ಚಂದದಾರರಿಗೆ ಈ ಸಿನಿಮಾ ಲಭ್ಯವಿದೆ. ಸದ್ಯದಲ್ಲಿಯೇ ಭಾರತದಲ್ಲೂ ಅಮೇಜಾನ್ ಪ್ರೈಮ್ ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ.
ಆದರೆ ಅದಕ್ಕೂ ಮುನ್ನವೇ ಟೆಲಿಗ್ರಾಂ ಸೇರಿದಂತೆ ಹಲವೆಡೆ ಪೈರಸಿ ಕಾಪಿ ಓಡಾಡುತ್ತಿದೆ. ಅದರಲ್ಲೂ HD ಕ್ವಾಲಿಟಿಯ ಪ್ರಿಂಟ್ ಎಲ್ಲರಿಗೂ ದಕ್ಕುತ್ತಿದೆ. ಇದು ಚಿತ್ರತಂಡವನ್ನು ಸಹಜವಾಗಿಯೇ ಬಾಧಿಸಿದೆ. ಒಂದು ಸಿನಿಮಾ ಮಾಡುವಾಗ ಪಟ್ಟ ಪಾಡುಗಳು, ಖರ್ಚಾದ ಹಣ ಅಷ್ಟಿಷ್ಟಲ್ಲ. ಆದರೆ ಹೀಗೆ ಪೈರಸಿ ಮಾಡುವುದರಿಂದ ಹಾಕಿದ ಹಣವೂ ನಿರ್ಮಾಪಕನ ಕೈ ಸೇರುವುದಿಲ್ಲ. ಇದೇ ನೋವಿನಿಂದ ನೊಂದಿದ್ದಾರೆ ಬ್ಲಿಂಕ್ ನಿರ್ಮಾಪಕ.
ಈ ಬಗ್ಗೆ ಮಾತನಾಡಿರುವ ನಿರ್ಮಾಪಕ ರವಿಚಂದ್ರ ಎ.ಜೆ ‘ನಮ್ಮ ಸಿನಿಮಾ ಸತತವಾಗಿ 55 ದಿನಗಳ ಕಾಲ ಥಿಯೇಟರ್ ನಲ್ಲಿ ಪ್ರದರ್ಶನ ಕಂಡಿದೆ. ನಮ್ಮ ಸಿನಿಮಾ ನೋಡಿ ಮೆಚ್ವಿಕೊಂಡಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು. ಆದಷ್ಟು ಬೇಗ ಅಮೇಜಾನ್ ಪ್ರೈಂ ನಲ್ಲಿ ಬ್ಲಿಂಕ್ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ. ಆದರೆ ಬೇಸರದ ಸಂಗತಿ ಎಂದರೆ ನಮ್ಮ ಬ್ಲಿಂಕ್ ಸಿನಿಮಾದ HD ಪ್ರಿಂಟ್ ಲೀಕ್ ಆಗಿದೆ. ಎಲ್ಲರೂ ಆನ್ಲೈನ್ ನಲ್ಲಿ ನೋಡುತ್ತಿದ್ದಾರೆ. ನಾವೂ ತೆಗೆಸುವ ಪ್ರಯತ್ನ ಮಾಡುತ್ತಿದ್ದೇವೆ. ಒಂದಷ್ಟು ಈಗಾಗಲೇ ತೆಗೆಸಿದ್ದೇವೆ. ನೀವೂ ಸಿನಿಮಾ ನೋಡಿ ಇಷ್ಟವಾದರೆ ನಮ್ಮ ಯುಪಿಐ ಕೋಡ್ ಹಾಕಿದ್ದೇನೆ. ಸಿನಿಮಾ ನೋಡಿದ ಮೇಲೆ ಎಷ್ಟು ಹಣ ಕೊಡಬೇಕು ಎನಿಸುತ್ತೋ ಅಷ್ಟನ್ನು ಕಳುಹಿಸಿ. ಕಷ್ಟಪಟ್ಟು ಸಿನಿಮಾ ಮಾಡಿದ್ದೀವಿ. ನಾವೂ ಹಾಕಿದ ಬಂಡವಾಳ ಬರಬೇಕು ಅಂದ್ರೆ ಹಣ ಬರಬೇಕು. ನೀವೂ ಥಿಯೇಟರ್ ನಲ್ಲೂ ನೋಡ್ತಿಲ್ಲ, ಪ್ರೈಂನಲ್ಲೂ ನೋಡ್ತಿಲ್ಲ’ ಎಂದು ಬೇಸರ ಹೊರ ಹಾಕಿದ್ದಾರೆ.