ಬೆಂಗಳೂರು: electoral bond ಹಗರಣ ಕೊನೆಗೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಕೊರಳಿಗೆ ಸುತ್ತಿಕೊಂಡಿದೆ. ಸುಪ್ರೀಂ ಕೋರ್ಟ್ electoral bonds ಅಸಂವಿಧಾನಿಕ ಎಂದು ಘೋಷಿಸಿ ರಾಜಕೀಯ ಪಕ್ಷಗಳಿಗೆ ನೀಡಲಾದ ದೇಣಿಗೆಯ ಮಾಹಿತಿಯನ್ನು ಹಂಚಿಕೊಳ್ಳುವಂತೆ ಚುನಾವಣಾ ಆಯೋಗಕ್ಕೆ ತಾಕೀತು ಮಾಡಿತ್ತು. ಇದಾದ ನಂತರ ಚುನಾವಣಾ ಆಯೋಗ ಈ ಮಾಹಿತಿಗಳನ್ನು ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿತ್ತು.
ರಾಜಕೀಯ ಪಕ್ಷಗಳ ಹೆಸರಿನಲ್ಲಿ ಖರೀದಿಸಲಾದ electoral bond ಗಳ ಹಿನ್ನೆಲೆಗಳನ್ನು ಕೆದಕಿದ ಸ್ವತಂತ್ರ ಪತ್ರಕರ್ತರು ಮತ್ತು ಕೆಲವೇ ಕೆಲವು ಮೀಡಿಯಾ ಸಂಸ್ಥೆಗಳು ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗಳಿಗೂ ಬಿಜೆಪಿಗೆ ನೀಡಲಾದ ದೇಣಿಗೆ ಹಣಕ್ಕೂ ಸಂಬಂಧ ಇರುವುದನ್ನು ಡಿ ಕೋಡ್ ಮಾಡಿದ್ದವು. ಕಾಂಗ್ರೆಸ್ ಸೇರಿದಂತೆ ಹಲವು ವಿರೋಧ ಪಕ್ಷಗಳು ಬಾಂಡ್ ಹಗರಣದ ಕುರಿತು ಕಳೆದ ಚುನಾವಣೆ ಸಂದರ್ಭದಲ್ಲೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದವು. ಆದರೆ ತನಿಖಾ ಏಜೆನ್ಸಿಗಳೆಲ್ಲ ಸರ್ಕಾರದ ಅಧೀನದಲ್ಲೇ ಇರುವ ಹಿನ್ನೆಲೆಯಲ್ಲಿ ಯಾವುದೇ ತನಿಖೆಯೂ ನಡೆದಿರಲಿಲ್ಲ.
ಪ್ರಕರಣದ ಕುರಿತು ಮಾಹಿತಿ ಹೊಂದಿದ್ದ ಬೆಂಗಳೂರಿನ ಜನಾಧಿಕಾರ ಸಂಘರ್ಷ ಪರಿಷತ್ ಜಂಟಿ ಅಧ್ಯಕ್ಷ ಆದರ್ಶ್ ಅಯ್ಯರ್ ಎಂಬ ಸಾಮಾಜಿಕ ಕಾರ್ಯಕರ್ತರು ಕಳೆದ ಮಾರ್ಚ್ 30ರಂದು ತಿಲಕನಗರ ಪೊಲೀಸ್ ಠಾಣೆಗೆ ತೆರಳಿ electoral bondಗಳ ಹೆಸರಿನಲ್ಲಿ ನಡೆದಿರುವ ಸುಲಿಗೆಯ ಕುರಿತು ದೂರು ದಾಖಲಿಸಿದ್ದರು. ಆದರೆ ತಿಲಕನಗರ ಪೊಲೀಸರು ಎಫ್ ಐ ಆರ್ ದಾಖಲಿಸುವ ಗೋಜಿಗೇ ಹೋಗಿರಲಿಲ್ಲ.
ಎಫ್ ಐಆರ್ ದಾಖಲಾಗದ ಹಿನ್ನೆಲೆಯಲ್ಲಿ ಆದರ್ಶ್ ಅಯ್ಯರ್ ಆಗ್ನೇಯ ಡಿಸಿಪಿ ಕಚೇರಿಗೆ ತೆರಳಿ ದೂರು ಸಲ್ಲಿಸಿದ್ದರು. ಆದರೆ ಆಗಲೂ ಕೂಡ ಪೊಲೀಸರು ಯಾವುದೇ ಪ್ರಕರಣ ದಾಖಲಿಸಲಿಲ್ಲ. ಈ ಹಿನ್ನೆಲೆಯಲ್ಲಿ ದೂರುದಾರರು ನ್ಯಾಯಾಲಯದ ಮೊರೆ ಹೋಗಿದ್ದರು.
ದೂರಿನಲ್ಲಿ ಆದರ್ಶ್ ಅಯ್ಯರ್ ಅವರು ಜಾರಿ ನಿರ್ದೇಶನಾಲಯವನ್ನು ಬಳಸಿಕೊಂಡು ಭಾರತೀಯ ಜನತಾ ಪಕ್ಷ ಹೇಗೆ ಸುಲಿಗೆ ನಡೆಸಿದೆ ಎಂಬುದನ್ನು ವಿವರವಾಗಿ ದಾಖಲಿಸಿದ್ದಾರೆ.
ಕಾರ್ಪೊರೇಟ್ ಅಲ್ಯುಮಿನಿಯಂ ಮತ್ತು ಕಾಪರ್ ಜೈಂಟ್ ಮತ್ತು ವೇದಾಂತ ಕಂಪೆನಿಯನ್ನು ನಡೆಸುತ್ತಿರುವ ಅನಿಲ್ ಅಗರ್ ವಾಲ್ ಎಂಬುವವರ ಮೇಲೆ ಜಾರಿ ನಿರ್ದೇಶನಾಲಯ ಹಲವು ಬಾರಿ ದಾಲಿ ನಡೆಸಿತ್ತು. ಇದರ ಪರಿಣಾಮವಾಗಿ ಅನಿಲ್ ಅಗರವಾಲ್ ತಮ್ಮ ಕಂಪೆನಿಗಳ ಮೂಲಕ 2019ರ ಏಪ್ರಿಲ್, 2022ರ ಆಗಸ್ಟ್ ಮತ್ತು 2023ರ ನವೆಂಬರ್ ನಲ್ಲಿ ಒಟ್ಟು 230.15 ಕೋಟಿ ರುಪಾಯಿ ಮೌಲ್ಯದ ಬಾಂಡ್ ಖರೀದಿಸಿದ್ದರು. ಇಡಿ ನಡೆಸಿದ ದಾಳಿಗಳು ಮತ್ತು ಅದರ ನಂತರ ಬಿಜೆಪಿ ಹೆಸರಿನಲ್ಲಿ ಬಾಂಡ್ ಖರೀದಿಸಿದ ವಿವರಗಳನ್ನು ದೂರುದಾರರು ಪ್ರತ್ಯೇಕವಾಗಿ ವಿವರಿಸಿದ್ದಾರೆ.
ಅರವಿಂದೋ ಫಾರ್ಮಾ ಎಂಬ ಕಂಪೆನಿಯ ಮೇಲೂ ಇದೇ ರೀತಿ ಜಾರಿ ನಿರ್ದೇಶನಾಲಯದ ದಾಳಿಗಳು ನಡೆದಿತ್ತು. ದಾಳಿ ಮಾತ್ರವಲ್ಲದೆ ಕಂಪೆನಿಯ ಸ್ವತ್ತುಗಳನ್ನು ಸೀಜ್ ಮಾಡಿದ್ದಲ್ಲದೆ, ಕಂಪೆನಿಯ ನಿರ್ದೇಶಕರುಗಳನ್ನು ಬಂಧಿಸಲಾಗಿತ್ತು. ಇದಾದ ನಂತರ 2023ರ ಜನವರಿ 5, 2022ರ ಜುಲೈ 2, 2022ರ ನವೆಂಬರ್ 15 ಮತ್ತು 2023ರ ನವೆಂಬರ್ 8ರಂದು ಇದೇ ಕಂಪೆನಿ ಒಟ್ಟು 49.5 ಕೋಟಿ ರುಪಾಯಿ ಮೌಲ್ಯದ ಬಾಂಡ್ ಗಳನ್ನು ಬಿಜೆಪಿ ಪಕ್ಷಕ್ಕಾಗಿ ಖರೀದಿಸಿತ್ತು. ಅರಬಿಂದೋ ಫಾರ್ಮಾ ನಿರ್ದೇಶಕರೊಬ್ಬರೆಉ ಜಾರಿ ನಿರ್ದೇಶನಾಲಯದ ದಾಳಿಯ ಭೀತಿಯಿಂದ ಮಾಫಿ ಸಾಕ್ಷಿಯಾಗಿ ಬದಲಾದರು. ಈ ಹಿನ್ನೆಲೆಯಲ್ಲೇ ದಿಲ್ಲಿಯ ಅಂದಿನ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಬಂಧನವಾಯಿತು ಎಂದು ದೂರುದಾರರು ವಿವರಿಸಿದ್ದಾರೆ. ಅರವಿಂದೋ ಫಾರ್ಮಾ ಮಾಲೀಕರನ್ನು ಭಾರತೀಯ ಜನತಾ ಪಕ್ಷಕ್ಕೆ ದೇಣಿಗೆ ನೀಡುವಂತೆ ಒತ್ತಡ ಹೇರಿ ಸುಲಿಗೆ ಮಾಡಿದ್ದಲ್ಲದೆ, ಅರವಿಂದ ಕೇಜ್ರಿವಾಲ್ ವಿರುದ್ಧ ಸಾಕ್ಷ್ಯ ಹೇಳುವಂತೆ ಜಾರಿ ನಿರ್ದೇಶನಾಲಯವು ಬೆದರಿಸಿರುವುದನ್ನು ದೂರಿನಲ್ಲಿ ವಿವರಿಸಲಾಗಿದೆ.
ಸಿಆರ್ ಪಿಸಿ 156 (3)ರ ಅಡಿಯಲ್ಲಿ ದೂರು ದಾಖಲಿಸಲು ಆದೇಶಿಸಲು ಮ್ಯಾಜಿಸ್ಟ್ರೇಟ್ ಕೋರ್ಟ್ ಮತ್ತು ಸೆಷನ್ ಕೋರ್ಟ್ ಗಳಿಗೆ ಅಧಿಕಾರವಿದೆ ಎಂದು ಹಲವು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ತೀರ್ಪುಗಳು ಹೇಳುತ್ತವೆ ಎಂಬುದನ್ನು ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ನ್ಯಾಯಾಲಯ ಎಫ್ ಐ ಆರ್ ದಾಖಲಿಸಲು ತಿಲಕನಗರ ಪೊಲೀಸರಿಗೆ ಆದೇಶಿಸಿದ್ದರು.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಬಿಜೆಪಿ ಪಕ್ಷದ ರಾಷ್ಟ್ರೀಯ ಮುಖಂಡರು, ಜಾರಿ ನಿರ್ದೇಶನಾಲಯದ ಅಧಿಕಾರಿಗಳು, ರಾಜ್ಯ ಬಿಜೆಪಿ ಘಟಕದ ಹಿಂದಿನ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್, ಆಗಿನ ಉಪಾಧ್ಯಕ್ಷ (ಈಗ ರಾಜ್ಯಾಧ್ಯಕ್ಷ) ಬಿ.ವೈ. ವಿಜಯೇಂದ್ರ, ರಾಜ್ಯ ಬಿಜೆಪಿ ಅಂದಿನ ಪದಾಧಿಕಾರಿಗಳ ಮೇಲೆ 8000 ಕೋಟಿ ರುಪಾಯಿಗೂ ಹೆಚ್ಚು ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ ಐ ಆರ್ ದಾಖಲಿಸಲಾಗಿದೆ. ಈ ಪೈಕಿ ನಿರ್ಮಲಾ ಸೀತಾರಾಮನ್ ಅವರು ಸಾಂವಿಧಾನಿಕ ಹುದ್ದೆಯಲ್ಲಿದ್ದಾರೆ.