2024ರ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಈ ಬಾರಿ ಬಿಜೆಪಿಗೆ ಅಚ್ಚರಿಯ ಫಲಿತಾಂಶ ಎಂದೇ ಹೇಳಬಹುದು. ಅಯೋಧ್ಯೆಯ ರಾಮಮಂದಿರವನ್ನು ಚುನಾವಣೆ ಹತ್ತಿರವಿರುವಾಗಲೇ ಬಾಲರಾಮನ ಉದ್ಘಾಟನೆ ಮಾಡಲಾಗಿತ್ತು. ಆದರೆ ಅಯೋಧ್ಯೆಯ ಜನರೇ ಬಿಜೆಪಿಯನ್ನು ಸೋಲಿಸಿರುವುದು ಅಚ್ಚರಿಗೆ ಕಾರಣವಾಗಿದೆ. ಅಯೋಧ್ಯೆಯನ್ನು ಮರಳಿ ಪಡೆದಿದ್ದಕ್ಕೆ, ಬಾಲ ರಾಮನ ಪ್ರತಿಷ್ಠಾಪನೆಯಾಗಿದ್ದಕ್ಕೆ ಉತ್ತರ ಪ್ರದೇಶದ ಜನ ಬಿಜೆಪಿಯ ಕೈ ಹಿಡಿಯಬಹುದು, ಈ ಬಾರಿ ಗೆಲುವು ಇನ್ನು ಸುಲಭ ಎಂದೇ ಭಾವಿಸಿದ್ದರು. ಆದರೆ ಫಲಿತಾಂಶವೇ ಉಲ್ಟಾ ಆಗಿದೆ. ಅಯೋಧ್ಯೆಯಲ್ಲಿ ಬಿಜೆಪಿ ಸೋಲು ಕಂಡಿದೆ.
ಈ ಚುನಾವಣೆಯ ಫಲಿತಾಂಶದ ಬೆನ್ನಲ್ಲೇ ಸೋನು ನಿಗಮ್ ಅಯೋಧ್ಯೆಯ ಜನರಿಗೆ ಬೈದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ‘ಯಾವ ಸರ್ಕಾರ ಅಯೋಧ್ಯೆಯನ್ನು ಮಿಂಚುವಂತೆ ಮಾಡಿತ್ತು, ಹೊಸ ಏರ್ಪೋರ್ಟ್ ಕೊಟ್ಟಿತ್ತು, ರೈಲ್ವೇ ಸ್ಟೇಷನ್ ನಿರ್ಮಾಣ ಮಾಡಿತ್ತು, 500 ವರ್ಷಗಳ ಬಳಿಕ ರಾಮ ಮಂದಿರವನ್ನು ನಿರ್ಮಾಣ ಮಾಡಿತ್ತು, ಇಡೀ ಅಯೋಧ್ಯೆಯನ್ನು ಎಕನಾಮಿಯನ್ನಾಗಿ ಮಾಡಿತ್ತು, ಅದೇ ಪಕ್ಷ ಈಗ ಅಯೋಧ್ಯೆಯಲ್ಲಿ ಸೋತಿದೆ. ಅಯೋಧ್ಯೆಯಲ್ಲಿ ವಾಸಿಸುವವರೇ ನಿಮಗೆ ನಾಚಿಕೆಯಾಗಲ್ವಾ’ ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಲಾಗಿದೆ.
ಇದು ಸೋನು ನಿಗಮ್ ಹೆಸರಿನಲ್ಲಿದೆ. ಅದರಲ್ಲೂ ಖಾತೆ ಬ್ಲೂ ಟಿಕ್ ಬೇರೆ ತೋರಿಸುತ್ತಿದೆ. ಹೀಗಾಗಿ ಜನರೆಲ್ಲ ಇದು ಗಾಯಕ ಸೋನು ನಿಗಮ್ ಅವರೇ ಟ್ವೀಟ್ ಮಾಡಿದ್ದಾರೆ ಎಂದೇ ಭಾವಿಸಿದ್ದಾರೆ. ಆದರೆ ಇದು ಸೋನು ನಿಗಮ್ ಸಿಂಗ್ ಎಂಬುವವರು ಮಾಡಿರುವ ಟ್ವೀಟ್ ಇದಾಗಿದೆ. ಅವರು ವಕೀಲರಾಗಿದ್ದಾರೆ. ತಮ್ಮ ಪ್ರೊಫೈಲ್ ನಲ್ಲಿ ಕ್ರಿಮಿನಲ್ ವಕೀಲರು ಎಂದು ಬರೆದುಕೊಂಡು, ಭಾರತ, ಬಿಹಾರ ಎಂದು ಮೆನ್ಶನ್ ಮಾಡಿದ್ದಾರೆ.