ಗಾಂಧಿ ಕೊಂದವರನ್ನು ಬಿಜೆಪಿ, ಆರ್‌ಎಸ್‌ಎಸ್ ಆರಾಧಿಸುತ್ತದೆ:ಸಿಎಂ ಸಿದ್ದರಾಮಯ್ಯ

Most read

ಬೆಂಗಳೂರು: ಮಹಾತ್ಮಾ ಗಾಂಧೀಜಿ ಅವರನ್ನು ಗುಂಡಿಟ್ಟು ಕೊಂದಿರಬಹುದು. ಆದರೆ, ಅವರ ಮೌಲ್ಯಗಳನ್ನು ಕೊಲ್ಲಲು ಸಾಧ್ಯವಿಲ್ಲ. ಯಾವ ಮೌಲ್ಯಗಳಿಗಾಗಿ ಅವರು ಹೋರಾಟ ಮಾಡಿದ್ದಾರೋ, ಆ ಮೌಲ್ಯಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಾವು ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯನವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಹಾತ್ಮಾ ಗಾಂಧೀಜಿ ಹುತಾತ್ಮ ದಿನಾಚರಣೆ ಹಿನ್ನೆಲೆ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಮಹಾತ್ಮಾ ಗಾಂಧಿ ಹುತಾತ್ಮ ದಿನ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು. ನಾವು ಗಾಂಧೀಜಿ ಅವರಿಗೆ ನಿಜವಾಗಿ ಗೌರವ ಸಲ್ಲಿಸುವುದು ಅವರ ತತ್ವಾದರ್ಶಗಳನ್ನು ಪಾಲಿಸಿದಾಗ ಮಾತ್ರ. ದೇಶ, ಸಮಾಜ ಕಟ್ಟುವ ಕೆಲಸ ಮಾಡಿದಾಗ ಮಾತ್ರ ಗಾಂಧೀಜಿಗೆ ಗೌರವ ನೀಡಿದಂತೆ ಎಂದು ಹೇಳಿದರು.

ಗಾಂಧೀಜಿ ಅನ್ಯ ಧರ್ಮ ಮತ್ತು ಬೇರೆ ಭಾಷೆಗಳನ್ನು ಗೌರವಿಸುತ್ತಿದ್ದರು. ಬೇರೆ ಧರ್ಮದ ಬಗ್ಗೆ ಅವರಿಗೆ ಸಹಿಷ್ಣುತೆ ಇತ್ತು, ಸಮಾನತೆ ಸಹಿಷ್ಣುತೆ ಇರುವ ದೇಶ ನಮ್ಮದು. ನಾವೆಲ್ಲರೂ ಬೇರೆ ಧರ್ಮ ಬೇರೆ ಭಾಷೆ ಬಗ್ಗೆ ಸಹಿಷ್ಣುತೆ ಹೊಂದಿರಬೇಕು. ನಾವು ವೈವಿದ್ಯತೆಯಲ್ಲಿ ಏಕತೆ ಕಾಣಬೇಕು. ಯಾವುದೇ ಧರ್ಮ ಮೇಲಲ್ಲ ಯಾವುದೇ ಧರ್ಮ ಕೀಳಲ್ಲ. ಯಾವುದೇ ಜಾತಿ ಮೇಲಲ್ಲ, ಯಾವುದೇ ಜಾತಿ ಕೀಳಲ್ಲ. ಸಂವಿಧಾನ ರಕ್ಷಣೆ ಮಾಡಬೇಕಾಗಿರುವುದು ನಮ್ಮ ಕರ್ತವ್ಯ. ಬಿಜೆಪಿಯವರು ದೇಶವನ್ನು ಹಿಂದೂರಾಷ್ಟ್ರ ಮಾಡುತ್ತೇವೆ ಎಂದು ಹೊರಟಿದ್ದಾರೆ. ಏಕ ಭಾಷೆ ಏಕ ಸಂಹಿತೆ ಜಾರಿಗೆ ತರಲು ಹೊರಟ್ಟಿದ್ದಾರೆ. ಪ್ರಜಾಪ್ರಭುತ್ವ ಉಳಿಸಬೇಕು ಪ್ರಜಾಪ್ರಭುತ್ವ ರಕ್ಷಣೆಯಾಗಬೇಕು. ನಾವೆಲ್ಲರೂ ಕೂಡಾ ಎರಡನೇ ಹೋರಾಟವನ್ನು ಮಾಡಬೇಕು. ಕಾಂಗ್ರೆಸ್ ಕಾರ್ಯಕರ್ತರಿಂದ ಮಾತ್ರ ಸಂವಿಧಾನ ಉಳಿಸಲು ಸಾಧ್ಯ. ಇದು ಅತ್ಯಂತ ಅಗತ್ಯ ಮತ್ತು ಅನಿವಾರ್ಯತೆ ಎಂದರು.

ಬಿಜೆಪಿ ಮತ್ತು ಆರ್‌ಎಸ್‌ಎಸ್ ನವರು ಗಾಂಧಿ ಕೊಂದವರನ್ನು ಆರಾಧಿಸುತ್ತಾರೆ. ಗೋಡ್ಸೆ ಒಬ್ಬ ಹಂತಕ, ಮತಾಂಧ ಅವನನ್ನು ಪೂಜಿಸುತ್ತಾರೆ. ಸಂವಿಧಾನದಲ್ಲಿ ಭಾರತೀಯತೆಯೇ ಇಲ್ಲ ಎಂದಿದ್ದರು ಗೋಲ್ವಾಲ್ಕರ್. ಸಂವಿಧಾನವನ್ನೇ ಬದಲು ಮಾಡಿ ಮನುಸ್ಮೃತಿ ತರಲು ಹೊರಟಿದ್ದಾರೆ. ಸಂವಿಧಾನ ವಿರೋಧಿಗಳ ವಿರುದ್ಧ ನಾವು ಹೋರಾಟ ಮಾಡಬೇಕಾಗುತ್ತದೆ ಎಂದರು.

ಜನವರಿ 30ರಂದು 1948ರಲ್ಲಿ ಮಹಾತ್ಮ ಗಾಂಧಿಯನ್ನ ಹತ್ಯೆಮಾಡಿದ ದಿನ. ಮತಾಂಧ ನಾತೂರಾಮ್ ಗೋಡ್ಸೆ ಗಾಂಧೀಜಿಯನ್ನು ಗುಂಡಿಕ್ಕಿ ಕೊಲ್ಲುತ್ತಾನೆ. ಆದರೆ ಮಹಾತ್ಮ ಗಾಂಧಿ ಮೌಲ್ಯವನ್ನು ಕೊಲ್ಲಲು ಯಾರಿಂದಲೂ ಸಾಧ್ಯವಿಲ್ಲ. ಇಂದಿಗೂ ಅವರ ವಿಚಾರ ಮೌಲ್ಯಗಳು ಜಗತ್ತಿನಲ್ಲೇ ಪ್ರಸ್ತುತವಾಗಿವೆ. ಮಹಾತ್ಯ ಗಾಂಧಿಯವರು ನನ್ನ ಜೀವನವೇ ಸಂದೇಶ ಎಂದಿದ್ದರು. ಅವರ ಹೋರಾಟದ ಬದುಕು ನಮಗೆ ಪ್ರೇರಣೆ. ಬಹಶಃ ಜಗತ್ತಿನಲ್ಲಿ ಸತ್ಯ ಅಹಿಂಸೆ ಮೂಲಕ ಸ್ವಾತಂತ್ರ್ಯ ತಂದು ಕೊಟ್ಟಿದ್ದು ಬೇರೆಲ್ಲೂ ಸಾಧ್ಯವಿಲ್ಲ ಎಂದರು.

More articles

Latest article