ದಲಿತರೇಕೆ ಬಿಜೆಪಿ-ಮೋದಿಗೆ ಓಟು ಹಾಕುವುದಿಲ್ಲ? ಕಾರಣ 3
ದಲಿತ ವಿದ್ಯಾರ್ಥಿ ರೋಹಿತ್ ವೇಮುಲನ ಸಾವಿಗೆ ಕಾರಣವಾದ ಮೋದಿ ನೇತೃತ್ವದ ಬಿಜೆಪಿಗೆ ದಲಿತರು ಖಂಡಿತವಾಗಿಯೂ ಓಟು ಹಾಕಲಾರರು. ಏಕೆಂದರೆ ತಮ್ಮ ಮಕ್ಕಳನ್ನು ತಿಂದ ನಾಗರಹಾವಿನ ಜೊತೆ ಯಾವ ತಾಯಿಯೂ ಸ್ನೇಹ ಬೆಳೆಸಲಾರಳು – ನವೀನ್ ಮಾದಾರ್
2014 ರಲ್ಲಿ ನರೇಂದ್ರ ಮೋದಿಯವರ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷವೂ ಆಗಿರಲಿಲ್ಲ. ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ವಿಜ್ಞಾನಿ ಆಗಬೇಕೆಂದು ಕನಸು ಕಾಣುತ್ತಿದ್ದ ದಲಿತ ಸಂಶೋಧಕನೊಬ್ಬನನ್ನು ಅದು ಬಲಿ ಪಡೆದುಕೊಂಡಿತು. ಜಾತಿ, ಧರ್ಮವೆಂಬ ಗೋಡೆಗಳನ್ನು ದಾಟಿ ಭಾರತದ ಯುವ ಸಮೂಹ ಕಣ್ಣೀರಿಟ್ಟಿತು. ರೋಹಿತ್ ವೇಮುಲನ ಕಡೆಯ ಪತ್ರವು ಹೃದಯವಿದ್ದ ಪ್ರತಿಯೊಬ್ಬರ ಕರುಳನ್ನು ಕಿವುಚಿತ್ತು.
ಇದನ್ನೂ ಓದಿ- ಮತ್ತೆ ಮತ್ತೆ ಕಾಡುವ ರೋಹಿತ್ ವೇಮುಲಾ ಡೆತ್ ನೋಟ್…
ರಾಧಿಕ ವೇಮುಲ ಎಂಬ ದಲಿತೆಯ ಮೊದಲನೇ ಮಗ ರೋಹಿತ್ ವೇಮುಲ. ತನ್ನ ಜೀವಮಾನವಿಡೀ ಸಾಕು ತಾಯಿಯ ಮನೆಯಲ್ಲಿ ನೊಂದು ಬೆಂದು ಕೇವಲ ಕೆಲಸದವಳಾಗಿ ಬದುಕಿದ ರಾಧಿಕಾ ವೇಮುಲ ಕಷ್ಟಪಟ್ಟು ತನ್ನೆರಡು ಮಕ್ಕಳ ವಿದ್ಯಾಭ್ಯಾಸ ಮಾಡಿಸಿದರು. ಇದರ ಪರಿಣಾಮವಾಗಿ ರೋಹಿತ್ ವೇಮುಲ ಹೈದರಾಬಾದ್ ಕೇಂದ್ರೀಯ ವಿವಿಯಲ್ಲಿ ಸಂಶೋಧನಾರ್ಥಿಯಾಗಿ ವಿದ್ಯಾಭ್ಯಾಸ ಮಾಡತೊಡಗಿದನು. ವಿಶ್ವವಿದ್ಯಾಲಯಗಳನ್ನು ಪ್ರವೇಶಿಸುವ ಬೆರಳೆಣಿಕೆಯಷ್ಟು ದಲಿತ ವಿದ್ಯಾರ್ಥಿಗಳ ಮೇಲೆ ಅಂಬೇಡ್ಕರ್‌ರವರು ಪ್ರಭಾವ ಬೀರದೇ ಇರಲಾರರು. ರೋಹಿತ್ ವೇಮುಲನೂ ಅವರಿಂದ ಪ್ರಭಾವಕ್ಕೊಳಗಾದನು. ವಿ.ವಿಯಲ್ಲಿದ್ದ ‘ಅಂಬೇಡ್ಕರ್ ಸ್ಟೂಡೆಂಟ್ ಅಸೋಸಿಯೇಶನ್ (ಅಂಬೇಡ್ಕರ್ ವಿದ್ಯಾರ್ಥಿ ಸಂಘಟನೆ) ಸಕ್ರಿಯ ಕಾರ್ಯಕರ್ತನಾದನು. ಕೇವಲ ಎರಡು ವರ್ಷಗಳಲ್ಲಿ ಸಂಘಟನೆಯ ಪ್ರಮುಖ ತೀರ್ಮಾನಗಳನ್ನು ತೀರ್ಮಾನಿಸುವ ಸದಸ್ಯರಲ್ಲಿ ಒಬ್ಬನಾದನು. ಸದಾ ಮನುಷ್ಯ ಪರ ವಿಚಾರಗಳನ್ನೇ ಆಲೋಚಿಸುತ್ತಿದ್ದ ‘ಎಎಸ್‌ಎ’ (ಅಂಬೇಡ್ಕರ್ ವಿದ್ಯಾರ್ಥಿ ಸಂಘಟನೆ) ಸಹಜವಾಗಿ ಬಿಜೆಪಿಯ ವಿದ್ಯಾರ್ಥಿ ಸಂಘಟನೆಯಾದ ‘ಅಖಿಲ ಭಾರತ ವಿದ್ಯಾರ್ಥಿ ಪರಿಷತ್’ನೊಂದಿಗೆ (ಎಬಿವಿಪಿ) ಎದುರು ಬದಿರಾಗುತ್ತಿತ್ತು. ನರೇಂದ್ರ ಮೋದಿಯವರು ಪ್ರಧಾನಮಂತ್ರಿ ಆದ ಬಳಿಕವಂತೂ ಈ ಎರಡು ಭಿನ್ನ ಚಿಂತನೆಗಳುಳ್ಳ ಸಂಘಟನೆಗಳ ನಡುವೆ ಭಿನ್ನಾಭಿಪ್ರಾಯಗಳು ತಾರಕಕ್ಕೇ ರಿದ್ದವು. ‘ಎಬಿವಿಪಿಯು ‘ಹಿಂದೂರಾಷ್ಟ್ರ’ದ ಕನಸು ಕಾಣುತ್ತಿದ್ದರೆ ‘ಎಎಸ್‌ಎ’ಯು ‘ಜಾತಿ ರಹಿತ ಪ್ರಭುದ್ಧ ಭಾರತದ ಕನಸು ಕಾಣುತ್ತಿತ್ತು. ಇದರ ಭಾಗವಾಗಿ ಈ ಹಿಂದೆ ವಿಶ್ವವಿದ್ಯಾಲಯ ಗಳಲ್ಲಿ ಜಾತಿದಮನದಿಂದ ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದ ವಿದ್ಯಾರ್ಥಿಗಳ ಪರವಾಗಿ ರೋಹಿತ್ ವೇಮುಲ ಮಾತನಾಡ ತೊಡಗಿದನು ಹಾಗೂ ವಿದ್ಯಾರ್ಥಿಗಳನ್ನೂ ಸಂಘಟಿಸಿದನು. ಮರಣದಂಡನೆ ಶಿಕ್ಷೆಯ ವಿರುದ್ಧ, ದನದ ಮಾಂಸ ಸೇವಿಸುವವರ ಮೇಲೆ ನಡೆಯುತ್ತಿದ್ದ ಹಲ್ಲೆಗಳ ವಿರುದ್ಧ ‘ಎಎಸ್‌ಎʼ ವೈಚಾರಿಕ ಹೋರಾಟ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದನು.
ಹೀಗೆ, ಸಕ್ರಿಯವಾಗಿ ‘ಎಎಸ್‌ಎ’ ಕ್ಯಾಂಪಸ್ಸಿನ ಒಳಗೆ ಕೆಲಸ ನಿರ್ವಹಿಸುತ್ತಿರುವುದನ್ನು ಸಹಿಸದಾದ ‘ಎಬಿವಿಪಿ’ ವಿದ್ಯಾರ್ಥಿ ಮುಖಂಡ ಸುಶೀಲ್ ಕುಮಾರ್ 2015ರ ಆಗಸ್ಟ್ 3ರಂದು ಫೇಸ್‌ಬುಕ್‌ನಲ್ಲಿ ‘ಅಂಬೇಡ್ಕರ್ ವಿದ್ಯಾರ್ಥಿ ಸಂಘಟನೆ’ಯ ಸದಸ್ಯರನ್ನು ‘ಗೂಂಡಾಗಳು’ ಎಂದು ಕರೆದನು. ಇದರ ಬಗ್ಗೆ ಸ್ಪಷ್ಟನೆ ಕೇಳಿ ‘ಎಎಸ್‌ಎ’ ಸದಸ್ಯರುಗಳೂ ಸಹ ಪೋಸ್ಟ್ ಮಾಡಿದರು. ಆಗ ದೆಹಲಿ ವಿಶ್ವವಿದ್ಯಾಲಯದಲ್ಲಿ ‘ಎಬಿವಿಪಿ’ ನಡೆಸಿದ್ದ ಗಲಾಟೆಯನ್ನು ‘ಎಎಸ್‌ಎ’ ವಿದ್ಯಾರ್ಥಿಗಳು ಖಂಡಿಸಿದ್ದರಿಂದ ತಾನು ಹಾಗೆ ಬರೆದಿರುವುದಾಗಿ ಸುಶೀಲ್ ಕುಮಾರ್ ಒಪ್ಪಿಕೊಂಡನು. ಆಗ ರೋಹಿತ್ ವೇಮುಲ ಸೇರಿದಂತೆ ಹಲವು ವಿದ್ಯಾರ್ಥಿಗಳು ಸುಶೀಲ್ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದರು. ಅವರ ನಡುವೆ ಮಾತಿಗೆ ಮಾತು ಬೆಳೆದು ಕೊನೆಗೆ ಸುಶಿಲ್ ಕುಮಾರ್ ಕ್ಷಮೆ ಯಾಚಿಸಿದನು. ಇಲ್ಲಿಗೆ ಆ ಪ್ರಕರಣ ಅಂತ್ಯವಾಯಿತು ಎಂದುಕೊಳ್ಳುವಷ್ಟರಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸದಸ್ಯರು ಮೂಗು ತೂರಿಸಲು ಆರಂಭಿಸಿದರು.
ಮರುದಿನ ಅಂದರೆ ಆಗಸ್ಟ್ 4ರಂದು ಬಿಜೆಪಿಯ ಯುವ ಮುಖಂಡ ಹಾಗೂ ಸ್ವತಃ ಸುಶೀಲ್ ಕುಮಾರ್‌ನ ಅಣ್ಣ ಸುಶೀಲ್ ನನ್ನು ಒಂದು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿಸಿದನು. ಈ ಮೊದಲಿಂದಲೇ ಸುಶೀಲನಿಗೆ ಅಪೆಂಡಿಸೈಟಿಸ್ ಕಾಯಿಲೆ ಇದ್ದ ಕಾರಣ ಆಪರೇಷನ್ ಮಾಡಿಸಲಾಯಿತು. ಆದರೆ ಬಿಜೆಪಿ ಮುಖಂಡರು ಇದೇ ನೆಪ ಇಟ್ಟುಕೊಂಡು ‘ಎಎಸ್‌ಎ’ ವಿದ್ಯಾರ್ಥಿಗಳು ಸುಶೀಲ್ ಕುಮಾರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರ ಪರಿಣಾಮವಾಗಿ ಹೊಟ್ಟೆಗೆ ಪೆಟ್ಟಾಗಿದ್ದು ಆಪರೇಷನ್ ಮಾಡಿಸುವಷ್ಟು ಗಂಭೀರವಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿ, ಪೊಲೀಸ್ ಠಾಣೆಗೆ ದೂರು ನೀಡಿದರು. ಈ ಸುಳ್ಳು ಆರೋಪದ ವಿರುದ್ಧ ‘ಎಎಸ್‌ಎ’ ವಿದ್ಯಾರ್ಥಿಗಳು ಕೂಡಲೇ ಪ್ರತಿಭಟನೆ ನಡೆಸಿ ಸುಳ್ಳು ಕೇಸ್ ವಾಪಾಸು ಪಡೆಯಲು ಆಗ್ರಹಿಸಿದ್ದಾರೆ. ಅದೇ ದಿನ ಬಿಜೆಪಿ ಎಂಎಲ್‌ಸಿ ‘ರಾಮಚಂದ್ರ ರಾವ್’ ತಮ್ಮ ಹಿಂಬಾಲಕರೊಟ್ಟಿಗೆ ವಿ.ವಿಯೊಳಗೆ ನುಗ್ಗಿ “ಅಂಬೇಡ್ಕರ್ ವಿದ್ಯಾರ್ಥಿ ಸಂಘಟನೆಯ ‘ದೇಶದ್ರೋಹಿ’ಗಳನ್ನು ವಿವಿಯಿಂದ ಹೊರಹಾಕಬೇಕು” ಎಂದು ಉಪಕುಲಪತಿ ಪ್ರೊ. ಆರ್.ಪಿ.ಶರ್ಮಾ ಅವರಿಗೆ ಧಮುಕಿ ಹಾಕಿ ದಾಂಧಲೆ ನಡೆಸಿದ್ದಾರೆ. ಇದರಿಂದಾಗಿ ಶರ್ಮಾ ಅವರು ಈ ಪ್ರಕರಣದ ಕುರಿತು ಪರಿಶೀಲಿಸಿ ವರದಿ ಸಲ್ಲಿಸುವಂತೆ ಮಾಜಿ ಉಪಕುಲಪತಿಗಳಾಗಿದ್ದ ಪ್ರೊ. ಅಲೋಕ್ ಪಾಂಡೆ ನೇತೃತ್ವದಲ್ಲಿ ಒಂದು ಸಮಿತಿಯನ್ನು ನೇಮಿಸಿದ್ದಾರೆ.
ಪಾಂಡೆಯವರ ಸಮಿತಿಯು ತನಿಖೆ ನಡೆಸಿ ಆಗಸ್ಟ್ 12ರಂದು ತನ್ನ ವರದಿ ನೀಡಿತು. ಅದರಲ್ಲಿ ಸ್ಪಷ್ಟವಾಗಿ ಸುಶೀಲ್ ಕುಮಾರ್ ಮೇಲೆ ಯಾವುದೇ ರೀತಿಯ ಹಲ್ಲೆ ಆಗಿಲ್ಲವೆಂದೂ, ಆತನನ್ನು ದಾಖಲಿಸಿದ್ದ ಆಸ್ಪತ್ರೆಯ ವೈದ್ಯೆ ಡಾ. ಅನುಪಮಾ ಅವರು ಇದಕ್ಕೆ ಸಾಕ್ಷಿ ನೀಡಿದ್ದಾರೆಂದೂ ಹೇಳಿ ‘ಎಎಸ್‌ಎ’ ವಿದ್ಯಾರ್ಥಿಗಳ ವಿರುದ್ಧ ಬಿಜೆಪಿ-ಎಬಿವಿಪಿ ಮಾಡಿದ್ದ ಆರೋಪವನ್ನು ತಳ್ಳಿಹಾಕಿತು. ತಮ್ಮ ಸುಳ್ಳನ್ನು ಸಮರ್ಥಿಸಿಕೊಳ್ಳಲಾಗದೆ ಅವಮಾನಗೊಂಡ ಎಬಿವಿಪಿ-ಬಿಜೆಪಿ ಮುಖಂಡರು ಅಂದಿನ ನರೇಂದ್ರ ಮೋದಿಯವರ ಸರ್ಕಾರದಲ್ಲಿ ಸಚಿವರಾಗಿದ್ದ ಆಂಧ್ರಪ್ರದೇಶದ ಬಂಡಾರು ದತ್ತಾತ್ರೇಯ ಅವರಿಗೆ ತಮ್ಮ ಅಳಲನ್ನು ತೋಡಿಕೊಂಡರು. ಇದಕ್ಕೆ ಸ್ಪಂದಿಸುವುದಾಗಿ ಭರವಸೆ ನೀಡಿದ ದತ್ತಾತ್ರೇಯ ‘ಅಂಬೇಡ್ಕರ್ ವಿದ್ಯಾರ್ಥಿ ಸಂಘಟನೆಯ ದಲಿತ ವಿದ್ಯಾರ್ಥಿಗಳು ವಿವಿಯಲ್ಲಿ ನಡೆಸುತ್ತಿರುವ ತೀವ್ರಗಾಮಿ ಚಟುವಟಿಕೆಗಳಿಗೆ ಕೂಡಲೇ ಕಡಿವಾಣ ಹಾಕಬೇಕು’ ಎಂದು ಅಂದಿನ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಮಂತ್ರಿಯಾಗಿದ್ದ ಸ್ಮೃತಿ ಇರಾನಿಯವರಿಗೆ ಪತ್ರ ಬರೆದರು. ಇದಕ್ಕೆ ಕಾದು ಕುಳಿತವರಂತಿದ್ದ ಸ್ಮೃತಿ ಇರಾನಿಯವರು ವಿ.ವಿಯ ಅಧಿಕಾರಿಗಳಿಗೆ ಮೇಲಿಂದ ಮೇಲೆ ಐದು ಪತ್ರಗಳನ್ನು ಬರೆದರು. ಈ ಪತ್ರಗಳಲ್ಲಿ ವಿ.ವಿಯಲ್ಲಿನ ದೇಶದ್ರೋಹಿ ದಲಿತ ವಿದ್ಯಾರ್ಥಿಗಳನ್ನು ಕ್ಯಾಂಪಸ್ಸಿನಿಂದ ಹೊರಹಾಕಲು ಹಾಗೂ ಅವರ ವಿದ್ಯಾರ್ಥಿ ವೇತನವನ್ನು ತಡೆಹಿಡಿಯಲು ಒತ್ತಾಯಿಸಿದ್ದರು.
ನರೇಂದ್ರ ಮೋದಿಯವರ ಸರ್ಕಾರದ ಮಂತ್ರಿಗಳಾದ ಬಂಡಾರು ದತ್ತಾತ್ರೇಯ ಹಾಗೂ ಸ್ಮೃತಿ ಇರಾನಿಯವರು ಈ ಪ್ರಕರಣಕ್ಕೆ ತಲೆ ಹಾಕಿದ್ದೇ ತಡ ಎಲ್ಲವೂ ಅದಲು ಬದಲಾಯಿತು. ವಿ.ವಿಗೆ ಹೊಸದಾಗಿ ಉಪಕುಲಪತಿಯಾಗಿ ನೇಮಕಗೊಂಡಿದ್ದ ಅಪ್ಪಾರಾವ್ ಪೊಡಿಲೆ, ಈ ಹಿಂದೆ ಪಾಂಡೆಯವರು ನೀಡಿದ್ದ ವರದಿಯನ್ನು ಏಕಾಏಕಿ ನಿರ್ಲಕ್ಷಿಸಿ ಹಿಂದಿನ ಸಮಿತಿಯನ್ನು ವಿಸರ್ಜಿಸಿ ಹೊಸ ಸಮಿತಿಯನ್ನು ರಚಿಸಿದರು. ಆ ಸಮಿತಿಯು ಯಾವ ತನಿಖೆಯನ್ನೂ ಕೈಗೊಳ್ಳದೆ ಸುಶೀಲ್ ಕುಮಾರ್ ಮೇಲೆ ಹಲ್ಲೆ ನಡೆದಿದ್ದು ನಿಜವೆಂದೂ ಐದು ದಲಿತ ವಿದ್ಯಾರ್ಥಿಗಳನ್ನು ವಿ.ವಿಯಿಂದಲೇ ಅಮಾನತುಗೊಳಿಸಬೇಕೆಂದು ಶಿಫಾರಸ್ಸು ಮಾಡಿತು. ಇದಾದ ಐದು ದಿನಕ್ಕೆ ರೋಹಿತ್ ವೇಮುಲ ಸೇರಿದಂತೆ ಐವರು ದಲಿತ ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಯಿತು. ವಿಶ್ವವಿದ್ಯಾಲಯದ ಸಂಗತಿಗಳಿಗೆ ಬಿಜೆಪಿಯವರು ‘ಕುತ್ಸಿತ’ ರಾಜಕೀಯ ತಂದಿದ್ದರ ಪರಿಣಾಮವಾಗಿ ದಲಿತೇತರ ವಿದ್ಯಾರ್ಥಿಗಳೆಲ್ಲಾ ಸೇರಿ ಪ್ರತಿಭಟನೆ ನಡೆಸಿದ್ದರಿಂದ, ಉಪಕುಲಪತಿಗಳು ಮತ್ತೊಂದು ತನಿಖೆ ನಡೆಸುವುದಾಗಿ ಒಪ್ಪಿಕೊಂಡು 2015 ಸೆಪ್ಟೆಂಬರ್ 11ರಂದು ಅಮಾನತ್ತನ್ನು ಹಿಂಪಡೆದರು.
ಈ ಪರಿಣಾಮವಾಗಿ ರಚನೆಯಾದ ಮತ್ತೊಂದು ಸಮಿತಿಯೂ ಸಹ ಕೇವಲ ಸುಶೀಲ್ ಕುಮಾರ್ ಮತ್ತು ಪೊಲೀಸರ ಹೇಳಿಕೆ ಪಡೆದು ವರದಿ ನೀಡಿತು. ಆದಾಗ್ಯೂ ಸುಶೀಲ್ ಮೇಲೆ ಹಲ್ಲೆಯಾಗಿಲ್ಲವೆಂದೇ ತಿಳಿಸಿತ್ತು. ಈ ಸಮಿತಿ ಯಾರ ಮೇಲೂ ಕ್ರಮ ಕೈಗೊಳ್ಳಲು ಶಿಫಾರಸ್ಸು ಮಾಡಿರಲಿಲ್ಲ ಎಂಬುದಿಲ್ಲಿ ಗಮನಾರ್ಹ. ಆದರೆ 2015 ಡಿಸೆಂಬರ್ 12ರಂದು ಇದ್ದಕ್ಕಿದ್ದಂತೆ ವಿವಿ ಉಪಕುಲಪತಿ ಅಪ್ಪಾರಾವ್ ‘ಎಎಸ್‌ಎ’ನ ಐದು ಜನ ದಲಿತ ಸಂಶೋಧನಾ ವಿದ್ಯಾರ್ಥಿಗಳನ್ನು ವಿ.ವಿಯ ವಿದ್ಯಾರ್ಥಿ ನಿಲಯದಿಂದ ಅಮಾನತುಗೊಳಿಸಿ ಆದೇಶಿಸಿದರು. ಜೊತೆಗೆ ಅವರ ವಿದ್ಯಾರ್ಥಿ ವೇತನವನ್ನೂ ನಿಲ್ಲಿಸಿದರು. ಸುಳ್ಳು ದೂರು ನೀಡಿದ್ದ ‘ಎಬಿವಿಪಿ’ ವಿದ್ಯಾರ್ಥಿ ಸುಶೀಲ್ ಕುಮಾರನ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ.
ಇದರಿಂದಾಗಿ, ರೋಹಿತ್ ವೇಮುಲ ತನ್ನ ರೂಮಿನಲ್ಲಿದ್ದ ಅಂಬೇಡ್ಕರ್ ಅವರ ಫೋಟೋ ಹಿಡಿದು ತನ್ನ ನಾಲ್ವರು ಸ್ನೇಹಿತರೊಡನೆ ಹೊರಬಂದಿದ್ದಾನೆ. ಆದರೆ ಈ ಅನ್ಯಾಯದ ವಿರುದ್ಧ ಹೋರಾಡುವ ಸಲುವಾಗಿ ಕ್ಯಾಂಪಸ್ಸಿನೊಳಗೆ ‘ವೆಲಿವಾಡ’ (ಭಾರತದ ಹಿಂದೂ-ಮೇಲ್ಜಾತಿಗಳು ದಲಿತರ ಪ್ರತ್ಯೇಕ ವಾಸನೆಲೆಗೆ ನೀಡಿರುವ ಹೆಸರು) ಟೆಂಟ್ ಹಾಕಿಕೊಂಡು ಅಲ್ಲಿಯೇ ಪ್ರತಿಭಟನೆಗೆ ಕುಳಿತಿದ್ದಾರೆ. ಬರೋಬ್ಬರಿ ಒಂದು ತಿಂಗಳವರೆಗೆ ಈ ಐದು ವಿದ್ಯಾರ್ಥಿಗಳು ವೆಲಿವಾಡದಲ್ಲಿಯೇ ತಂಗುತ್ತಾ ನ್ಯಾಯಕ್ಕಾಗಿ ಹೋರಾಡಿದ್ದಾರೆ. ಆದರೆ ಬಿಜೆಪಿಯ ವಾಮ ಮುಷ್ಟಿಯಲ್ಲಿದ್ದ ವಿ.ವಿ ಆಡಳಿತವು ಅಲ್ಲಾಡಲಿಲ್ಲ. ಇದರಿಂದ ತೀವ್ರ ಹಣದ ಮುಗ್ಗಟ್ಟು ಎದುರಿಸುತ್ತಿದ್ದ ರೋಹಿತ್ ವೇಮುಲ ಎದೆಗುಂದಿದ್ದಾನೆ. ಕಾರ್ಲ್ ಸಗಾನನಂತೆ ವಿಜ್ಞಾನಿಯಾಗಬೇಕು ಎಂದುಕೊಂಡಿದ್ದ ರೋಹಿತ್ ವೇಮುಲ ‘ಜನವರಿ 17’ರಂದು ಸ್ನೇಹಿತನ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಅಲ್ಲಿಗೆ ಭಾರತದ ಭವಿಷ್ಯವಾಗಬೇಕಿದ್ದ ದಲಿತ ವಿಜ್ಞಾನಿಯೊಬ್ಬನನ್ನು ಆರೆಸ್ಸೆಸ್-ಬಿಜೆಪಿ-ಎಬಿವಿಪಿ ಮೇಲ್ಜಾತಿ ಹಾಗೂ ದಲಿತ ವಿರೋಧಿ ರಾಜಕಾರಣವು ಬಲಿ ತೆಗೆದುಕೊಂಡಿತು. ಈ ಸಾಂಸ್ಥಿಕ ಕೊಲೆಯ ವಿರುದ್ಧ ತಪ್ಪಿಸಿ ಕೊಳ್ಳಲು ರೋಹಿತನನ್ನು ದಲಿತನೇ ಅಲ್ಲವೆಂದು, ಉಗ್ರಗಾಮಿ ಎಂದು ಬಿಜೆಪಿ ಹಾಗೂ ಬಿಜೆಪಿ ಐಟಿ ಸೆಲ್ ಪ್ರಚಾರ ಮಾಡತೊಡಗಿದವು. ರೋಹಿತ್ ಕುಟುಂಬಕ್ಕೆ ಮಾನಸಿಕ ಹಿಂಸೆ ನೀಡಲಾಯಿತು. ದೇಶಾದ್ಯಂತ ವಿದ್ಯಾರ್ಥಿಗಳು ರೋಹಿತ್ ವೇಮುಲನಿಗೆ ನ್ಯಾಯ ಸಿಗಬೇಕೆಂದು ಕೇಂದ್ರ ಮಂತ್ರಿಗಳನ್ನು ಬಂಧಿಸಬೇಕೆಂದು ಪ್ರತಿಭಟಿಸಿದರು. ಆದರೆ ನರೇಂದ್ರ ಮೋದಿಯವರ ಕೇಂದ್ರ ಸರ್ಕಾರಕ್ಕೆ ಈ ಕೂಗು ತಟ್ಟಲೇ ಇಲ್ಲ.
ದಲಿತ ವಿದ್ಯಾರ್ಥಿ ರೋಹಿತ್ ವೇಮುಲನ ಸಾವಿಗೆ ಕಾರಣವಾದ ಮೋದಿ ನೇತೃತ್ವದ ಬಿಜೆಪಿಗೆ ದಲಿತರು ಖಂಡಿತವಾಗಿಯೂ ಓಟು ಹಾಕಲಾರರು. ಏಕೆಂದರೆ ತಮ್ಮ ಮಕ್ಕಳನ್ನು ತಿಂದ ನಾಗರಹಾವಿನ ಜೊತೆ ಯಾವ ತಾಯಿಯೂ ಸ್ನೇಹ ಬೆಳೆಸಲಾರಳು.
ನವೀನ್ ಮಾದಾರ್