ಪುರಿ ಜಗನ್ನಾಥ ದೇವರು ಮೋದಿಯ ಭಕ್ತ ಎಂದ ಬಿಜೆಪಿ ವಕ್ತಾರ: ವ್ಯಾಪಕ ಆಕ್ರೋಶ

Most read

ಪುರಿ (ಒಡಿಶಾ): ಒಡಿಶಾ, ಪಶ್ಚಿಮ ಬಂಗಾಳ, ಜಾರ್ಖಂಡ್‌, ಬಿಹಾರ, ಅಸ್ಸಾಂ, ಮಣಿಪುರ, ತ್ರಿಪುರ ಮಾತ್ರವಲ್ಲದೆ ಬಾಂಗ್ಲಾದೇಶದ ಹಿಂದೂಗಳಿಂದ ಆರಾಧಿಸಲ್ಪಡುವ ಜಗನ್ನಾಥ ದೇವರು ಪ್ರಧಾನಿ ನರೇಂದ್ರ ಮೋದಿಯವರ ಭಕ್ತ ಎಂದು ಬಣ್ಣಿಸುವ ಮೂಲಕ ಬಿಜೆಪಿ ವಕ್ತಾರ, ಪುರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಬಿತ್‌ ಪಾತ್ರ ಹಿಂದೂಗಳ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಲಕ್ಷಾಂತರ ಜನರು ನರೇಂದ್ರ ಮೋದಿಯವರನ್ನು ನೋಡಲು ಇಲ್ಲಿಗೆ (ಪುರಿ)ಗೆ ಬಂದಿದ್ದಾರೆ. ಪುರಿ ಜಗನ್ನಾಥ ಕೂಡ ಮೋದಿಯವರ ಭಕ್ತ. ಈ ಜನಸಾಗರವನ್ನು ನೋಡಿ ನನ್ನ ಭಾವನೆಗಳನ್ನು ನಿಯಂತ್ರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಸಂಬಿತ್‌ ಪಾತ್ರ ಹೇಳಿದ್ದರು.

ನರೇಂದ್ರ ಮೋದಿ ಇಂದು ಪುರಿಯಲ್ಲಿ ಚುನಾವಣಾ ಪ್ರಚಾರದ ಅಂಗವಾಗಿ ರೋಡ್‌ ಶೋ ನಡೆಸಲು ಆಗಮಿಸಿದ್ದರು. ಈ ಸಂದರ್ಭದಲ್ಲಿ ಸಂಬಿತ್‌ ಪಾತ್ರ ಜಗನ್ನಾಥ ದೇವರು ಮೋದಿಯ ಭಕ್ತ ಎಂದು ಹೇಳಿದ್ದರು.

ಸಂಬಿತ್‌ ಪಾತ್ರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದ್ದಂತೆ ದೇಶಾದ್ಯಂತ ಹಿಂದೂಗಳಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಇದು ಜಗನ್ನಾಥ ದೇವರಿಗೆ ಎಸಗಿದ ಅಪಮಾನ, ಕೋಟ್ಯಂತರ ಭಕ್ತರ ಭಾವನೆಗಳಿಗೆ ಮಾಡಿದ ಅಗೌರವ ಎಂದು ಹೇಳಿದ್ದಾರೆ.

ದಯವಿಟ್ಟು ಬಿಜೆಪಿಯವರು ನಮ್ಮ ಪೂಜನೀಯ ದೇವರನ್ನು ತಮ್ಮ ರಾಜಕೀಯ ಚರ್ಚೆಗಳಿಂದ ಹೊರಗಿಡಲಿ. ಸಂಬಿತ್‌ ಪಪಾತ್ರ ಹೇಳಿಕೆ ಒಡಿಶಾ ಅಸ್ಮಿತೆಗೆ ಮಾಡಿದ ಅಪಚಾರ. ಇದನ್ನು ಜನರು ಮರೆಯಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಿಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌, ಈ ಕುರಿತು ಪ್ರತಿಕ್ರಿಯಿಸಿದ್ದು, ಬಿಜೆಪಿಯವರು ತಮ್ಮನ್ನು ತಾವು ದೇವರಿಗಿಂತ ದೊಡ್ಡವರೆಂದು ಭಾವಿಸುವುದಕ್ಕೆ ಆರಂಭಿಸಿದ್ದಾರೆ. ಇದು ದುರಹಂಕಾರದ ಪರಮಾವಧಿ. ದೇವರನ್ನು ಮೋದಿ ಭಕ್ತ ಎಂದು ಕರೆಯುವುದು ದೇವರಿಗೆ ಮಾಡುವ ಅಪಮಾನ ಎಂದು ತಮ್ಮ ಸಿಟ್ಟು ತೋಡಿಕೊಂಡಿದ್ದಾರೆ.

ಒಡಿಶಾದ ಪುರಿಯಲ್ಲಿರುವ ಜಗತ್‌ ಪ್ರಸಿದ್ಧ ಜಗನ್ನಾಥ ದೇವಸ್ಥಾನ

ಸಂಬಿತ್‌ ಪಾತ್ರ ಇದೇ ಪುರಿ ಮತಕ್ಷೇತ್ರದಲ್ಲಿ ಕಳೆದ 2019ರ ಚುನಾವಣೆಯಲ್ಲಿ ಬಿಜು ಜನತಾ ದಳದ ಅಭ್ಯರ್ಥಿ ವಿರುದ್ಧ ಸೋಲನ್ನಪ್ಪಿದ್ದರು. ಈ ಬಾರಿ ಅವರು ಮತ್ತೊಮ್ಮೆ ಇದೇ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು ತಮ್ಮ ಅದೃಷ್ಟ ಪರೀಕ್ಷೆ ಮಾಡುತ್ತಿದ್ದಾರೆ. ಒಡಿಶಾದ ಜನರ ಆರಾಧ್ಯ ದೈವವಾದ ಪುರಿ ಜಗನ್ನಾಥನನ್ನು ಮೋದಿಭಕ್ತ ಎಂದು ಹೇಳುವ ಮೂಲಕ ಸಂಬಿತ್‌ ಪಾತ್ರ ಒಡಿಶಾ ಮಾತ್ರವಲ್ಲದೆ ಜಗನ್ನಾಥ ದೇವರನ್ನು ಆರಾಧಿಸುವ ಅಸಂಖ್ಯಾತ ಭಕ್ತರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

More articles

Latest article