ಭಾರತೀಯ ಜನತಾ ಪಕ್ಷದ ಮಧ್ಯಪ್ರದೇಶದ ರಾಜ್ಯಸಭಾ ಸದಸ್ಯ ಅಜಯ್ ಪ್ರತಾಪ್ ಸಿಂಗ್ ಅವರು ಲೋಕಸಭಾ ಟಿಕೆಟ್ ಸಿಗದ ಕಾರಣ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವುದಾಗಿ ಶನಿವಾರ ಹೇಳಿದ್ದಾರೆ.
ತಮ್ಮ ರಾಜೀನಾಮೆ ಪತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಸಿಂಗ್, ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಟ್ಯಾಗ್ ಮಾಡಿ, ರಾಜೀನಾಮೆ ಪತ್ರವನ್ನು ಹಂಚಿಕೊಂಡಿದ್ದಾರೆ. “ನಾನು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ” ಎಂದು ಬರೆದುಕೊಂಡಿದ್ದು, ರಾಜೀನಾಮೆಗೆ ಯಾವುದೇ ಕಾರಣವನ್ನು ತಿಳಿಸಿಲ್ಲ.
ಬಿಜೆಪಿಯಿಂದ ಮಧ್ಯಪ್ರದೇಶದ ಸಿದ್ಧಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದೆ ಆದರೆ ಪಕ್ಷವು ರಾಜೇಶ್ ಮಿಶ್ರಾ ಅವರನ್ನು ಅಲ್ಲಿಂದ ಕಣಕ್ಕಿಳಿಸುತ್ತದೆ ಎಂದು ಸುದ್ದಿಗಾರರಿಗೆ ತಿಳಿಸಿದ್ದು, ರಾಜೀನಾಮೆಗೆ ಮೂಲ ಕಾರಣವನ್ನು ತೆರೆದಿಟ್ಟಿದ್ದಾರೆ.
ಸಿಂಗ್ ಅವರು ಮಾರ್ಚ್ 2018 ರಲ್ಲಿ ರಾಜ್ಯಸಭೆಗೆ ನಾಮನಿರ್ದೇಶನಗೊಂಡಿದ್ದರು ಮತ್ತು ಅವರ ಅಧಿಕಾರಾವಧಿಯು ಏಪ್ರಿಲ್ 2 ಕ್ಕೆ ಕೊನೆಗೊಳ್ಳಲಿದೆ.