ಕಾರವಾರ: ಬಿಜೆಪಿಯವರು ಬಾಯ್ತೆರೆದರೆ ಜಾತಿ,ಧರ್ಮ ಬಿಟ್ಟರೆ ಮತ್ತೇನು ಇಲ್ಲ, ಕೇಂದ್ರದಲ್ಲಿ ಹತ್ತು ವರ್ಷಗಳ ಕಾಲ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಡವರ ಮೇಲಿನ ಶೋಷಣೆ, ಹೆಣ್ಣುಮಕ್ಕಳ ಮೇಲೆ ನಿರಂತರ ಅತ್ಯಾಚಾರ ಪ್ರಕರಣಗಳು ನಡೆದಿದೆ. ಆದರೂ ಕಿಂಚಿತ್ತೂ ಯೋಚಿಸದೆ ಶ್ರೀಮಂತರಿಗಾಗಿ ಇರುವ ಸರಕಾರ ಎಂದೆನಿಸಿಕೊಂಡಿದೆ ಎಂದು ಕಾರವಾರ ಶಾಸಕ ಮತ್ತು ಕೆಎಸ್ ಎಂಸಿಎ ಅಧ್ಯಕ್ಷ ಸತೀಶ್ ಸೈಲ್ ಹೇಳಿದರು.
ಅವರು ಕಾರವಾರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಲೋಕಸಭಾ ಚುನಾವಣೆಯ ಪ್ರಯುಕ್ತ ನಗರಸಭೆ ವ್ಯಾಪ್ತಿಯ ನಂದನಗದ್ದಾದಲ್ಲಿ ಹಮ್ಮಿಕೊಳ್ಳಲಾಗಿದ್ದ ಬಹಿರಂಗ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಚುನಾವಣೆ ಪೂರ್ವದಲ್ಲಿ ಹದಿನೈದು ಲಕ್ಷ ನಿಮ್ಮ ನಿಮ್ಮ ಖಾತೆಗೆ ಹಾಕುತ್ತೇವೆ ಎಂದು ನಂಬಿಸಿದ ಕೇಂದ್ರ ಸರಕಾರ ಜನಸಾಮಾನ್ಯರಿಗೆ ಬ್ಯಾಂಕಿನಲ್ಲಿ ಖಾತೆ ತೆರೆಯುವಂತೆ ಹೇಳಿ ಅಲೆದಾಡಿಸಿತ್ತು,ಆದರೆ ಹದಿನೈದು ಲಕ್ಷದ ಬದಲಾಗಿ ಹದಿನೈದು ಪೈಸೆಯು ಹಾಕಿಲ್ಲ,ನಮ್ಮ ಐದು ಗ್ಯಾರಂಟಿಗಳಿಂದ ಮಹಿಳೆಯರು ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾರೆ, ಲೋಕಸಭಾ ಚುನಾವಣೆಯಲ್ಲಿ ಮಹಿಳೆಯರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲು ಮುಂದಾಗಿದ್ದಾರೆ. ನಮ್ಮ ಅಭ್ಯರ್ಥಿ ಡಾ.ಅಂಜಲಿ ಹೇಮಂತ್ ನಿಂಬಾಳ್ಕರ್ ಅವರು ವೈದ್ಯೆಯಾಗಿದ್ದರಿಂದ ಜನರ ನೋವಲ್ಲಿ ಸ್ಪಂದಿಸುತ್ತಾರೆಂಬ ಭರವಸೆಯಿದೆ. ಆದ್ದರಿಂದ ಮೇ 7 ಕ್ಕೆ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಡಾ. ಅಂಜಲಿ ನಿಂಬಾಳ್ಕರರವರನ್ನು ನಿಮ್ಮ ಅತ್ಯಮೂಲ್ಯ ಮತವನ್ನು ನೀಡಿ ಪ್ರಚಂಡ ಬಹುಮತದಿಂದ ಗೆಲ್ಲಿಸಬೇಕು ಎಂದು ಮನವಿಮಾಡಿಕೊಂಡರು.
ಲೋಕಸಭಾ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಮಾತನಾಡಿ ಕಳೆದ ಹತ್ತು ವರ್ಷಗಳಲ್ಲಿ ದೇಶ ಕಷ್ಟದಲ್ಲಿದೆ, ಕಷ್ಟದಿಂದ ಮುಕ್ತವಾಗಬೇಕಾದರೆ ಕಾಂಗ್ರೆಸ್ ಒಂದೇ ಪರಿಹಾರವಾಗಿದೆ. ವಿಪರೀತ ಬೆಲೆಏರಿಕೆಯಿಂದ ಜನಸಾಮಾನ್ಯರ ಬದುಕು ದುಸ್ಥಿತಿಗೆ ತಲುಪಿದೆ, ಆದರೆ ಕೇಂದ್ರ ಸರ್ಕಾರಕ್ಕೆ ಬಡವರ ಬಗ್ಗೆ ಚಿಂತೆಯಿಲ್ಲ, ಬಡವರ ತೆರಿಗೆಯಿಂದ ಅದಾನಿ ಅಂಬಾನಿಗಳು ಮತ್ತಷ್ಟು ಶ್ರೀಮಂತರಾಗಿದ್ದಾರೆ, ಆದರೆ ನಮ್ಮ ಯುವಕರು ವಾಟ್ಸಾಪ್, ಫೇಸ್ಬುಕ್ ಯುನಿವರ್ಸಿಟಿಯಿಂದ ದಾರಿತಪ್ಪುತ್ತಿದ್ದಾರೆ, ಮೋದಿಯವರು ಹತ್ತು ವರ್ಷಗಳಲ್ಲಿ ಒಂದಾದರೂ ಬಡವರ ಪರ ಯೋಜನೆಗಳನ್ನು ತಂದಿದ್ದಾರಾ? ಮನ್ ಕೀ ಬಾತ್ ಎಂದು ರೇಡಿಯೋದಲ್ಲಿ ಮಾತಾಡುವ ಮೋದಿಯವರು, ಜನರ ಮುಂದೆ ಬಂದು ಜನರ ಕಷ್ಟ ಅರಿತು ಜನ್ ಕೀ ಬಾತ್ ಮಾತಾಡಲಿಲ್ಲ ಎಂದರು.
ಕರ್ನಾಟಕದಲ್ಲಿ ಬರಗಾಲ ಇದ್ದರು ಒಂದು ಬಾರಿಯೂ ಅದರ ಪರವಾಗಿ ಮಾತಾಡಲಿಲ್ಲ, ಬಿಜೆಪಿಯವರಿಗೆ ಪ್ರಚಾರ ಬೇಕು ಹೊರತು ಜನರ ಸಮಸ್ಯೆ ಪರಿಹಾರವಾಗಬೇಕಿಲ್ಲ, ಬಿಜೆಪಿ ಅಭ್ಯರ್ಥಿಗಳು ನಮ್ಮನ್ನು ನೋಡಬೇಡಿ ಮೇಲಿನವರನ್ನು ನೋಡಿ ಮತ ನೀಡಿ ಎಂದು ಪದೇ ಪದೇ ಹೇಳುತ್ತಿದ್ದಾರೆ, ಆರು ಬಾರಿ ಶಾಸಕ ,ಒಂದು ಬಾರಿ ಸಚಿವ,ಒಂದು ಬಾರಿ ವಿಧಾನಸಬಾಧ್ಯಕ್ಷರಾಗಿದ್ದ ಕಾಗೇರಿಯವರ ಮುಂದೆ ನಾನು ಚಿಕ್ಕವಳು. ಆದರೆ ಅಭಿವೃದ್ಧಿ ವಿಚಾರದಲ್ಲಿ ಅವರಿಗಿಂತ ಮುಂದಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಮೀರ್ ನಾಯ್ಕ,ಡಿಸಿಸಿ ಸದಸ್ಯ ಶಂಭು ಶೆಟ್ಟಿ,ನಗರಸಭಾ ಸದಸ್ಯರಾದ ಹರೀಶ್ ಸಾಗೇಕರ್,ನಗರಸಭಾ ಮಾಜಿ ಅಧ್ಯಕ್ಷೆ ಲೀಲಾಬಾಯಿ ಠಾಣೆಕರ್,ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸಲಿಮ್ ಶೇಕ್,ಪ್ರಮುಖರಾದ ವಿನಾಯಕ ಸಾಗೇಕರ್ ಮುಂತಾದವರು ಉಪಸ್ಥಿತರಿದ್ದರು. ಕಾರವಾರ ತಾಲೂಕಿನ ನಂದನಗದ್ದಾದಲ್ಲಿರುವ ಗ್ರಾಮದೇವ ನಾಗನಾಥ ದೇವಸ್ಥಾನಕ್ಕೆ ಭೇಟಿನೀಡಿದ ಡಾ. ಅಂಜಲಿ ನಿಂಬಾಳ್ಕರ್ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. ನಂತರ ಸ್ಥಳೀಯ ಮಹಿಳೆಯರು ಅಂಜಲಿಯವರಿಗೆ ಉಡಿ ತುಂಬಿ ಚುನಾವಣೆಯಲ್ಲಿ ಗೆದ್ದುಬರುವಂತೆ ಆಶೀರ್ವದಿಸಿದರು