ಬೆಂಗಳೂರು: ಇಂದು ದೇಶಾದ್ಯಂತ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನವನ್ನು ಆಚರಿಸಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ನಾಡಿನ ಗಣ್ಯರು ಅವರ ಕೊಡುಗೆಯನ್ನು ಸ್ಮರಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸಂದೇಶದಲ್ಲಿ ಮಹಿಳಾ ಸಬಲೀಕರಣಕ್ಕಾಗಿ ಶಿಕ್ಷಣವನ್ನು ಸಾಧನವಾಗಿಸಿಕೊಂಡು, ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದ ದೇಶದ ಹೆಣ್ಣುಮಕ್ಕಳಿಗಾಗಿ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿ, ಅವರಿಗೆ ಜ್ಞಾನ ಹಾಗೂ ಘನತೆಯ ಬದುಕನ್ನು ಧಾರೆಯೆರೆದ ಧೀಮಂತ ಮಹಿಳೆ ಸಾವಿತ್ರಿಬಾಯಿ ಫುಲೆ ಅವರಿಗೆ ಜನ್ಮದಿನದ ನಮನಗಳು.
ಈ ದಿನ ಶಿಕ್ಷಿತ ಸಮಾಜ ನಿರ್ಮಾಣದ ಮೂಲಕ ಸಾವಿತ್ರಿಬಾಯಿಯವರ ಕನಸನ್ನು ನನಸಾಗಿಸುವ ಸಂಕಲ್ಪಗೈಯ್ಯೋಣ ಎಂದು ಆಶಿಸಿದ್ದಾರೆ.
ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ತಮ್ಮ ಸಂದೇಶದಲ್ಲಿ ಅಕ್ಷರದವ್ವ, ಕ್ರಾಂತಿಜ್ಯೋತಿ ಸಾವಿತ್ರಿಬಾಯಿ ಫುಲೆಯವರ ಜನ್ಮದಿನದಂದು ಗೌರವ ನಮನಗಳು. ಭಾರತದ ಪ್ರಥಮ ಮಹಿಳಾ ಶಿಕ್ಷಕಿಯಾಗಿ, ಅಸಮಾನತೆ ಮತ್ತು ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಡಿ ಸ್ತ್ರೀ ಕುಲಕ್ಕೆ ಅಕ್ಷರ ಜ್ಞಾನದ ದಾರಿದೀಪವಾದ ಸತ್ಯಶೋಧಕಿ ಸಾವಿತ್ರಿಬಾಯಿ ಅವರು ಸದಾ ಸ್ಮರಣೀಯರು ಎಂದು ನೆನಪು ಮಾಡಿಕೊಂಡಿದ್ದಾರೆ.
ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ತಮ್ಮ ಸಂದೇಶದಲ್ಲಿ ತನ್ನಡೆ ಕಲ್ಲೆಸೆದವರಿಗೆ ಮರಳಿ ಅಕ್ಷರದ ಹೂವನ್ನು ಎಸೆದು, ಲೋಕದೊಳಗೆ ಜ್ಞಾನದ ಘಮಲನ್ನು ಹೆಚ್ಚಿಸಿದ ಅಕ್ಷರದವ್ವ ಸಾವಿತ್ರಿ ಬಾಯಿ ಫುಲೆ ಅವರ ಜಯಂತಿಯಂದು ಅವರಿಗೆ ನನ್ನ ನಮನಗಳು ಎಂದು ಸ್ಮರಿಸಿಕೊಂಡಿದ್ದಾರೆ.
ವಿಧಾನಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ಅವರು ಶಿಕ್ಷಣ ವಂಚಿತ ಶೋಷಿತರ ಎದೆಗಳಲ್ಲಿ ಅಕ್ಷರದ ಬೀಜ ಬಿತ್ತಿದ ಮೊಟ್ಟ ಮೊದಲ ಶಿಕ್ಷಕಿ, ಸಮಾಜ ಸುಧಾರಕಿ, ಅಕ್ಷರ ದಾತೆ “ಸಾವಿತ್ರಿ ಬಾಯಿ ಫುಲೆ” ಅವರ ಜನ್ಮ ಜಯಂತಿಯ ನಮನಗಳು. ಸವಾಲುಗಳನ್ನೆ ಮೆಟ್ಟಿಲಾಗಿಸಿಕೊಂಡು, ಜಡ್ಡುಗಟ್ಟಿದ ಸಮಾಜಕ್ಕೆ ಶಿಕ್ಷಣವೇ ಹರಿತ ಆಯುಧ ಎಂದು ಸಾರಿದ ತಾಯಿಗೆ ಶರಣು.ಸದಾ ಸ್ಮರಣೀಯ ಫುಲೆ ದಂಪತಿಗಳಿಗೆ ನಮನಗಳು ಎಂದಿದ್ದಾರೆ.

