ಬೆಂಗಳೂರು : ಜಿಬಿಎ ವ್ಯಾಪ್ತಿಯಲ್ಲಿ ಮತ್ತಷ್ಟು ಜೈವಿಕ ಅನಿಲ ಘಟಕಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಬಿಎ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ತಿಳಿಸಿದರು.
ಜಿಬಿಎ ವ್ಯಾಪ್ತಿಯ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಕೋರಮಂಗಲದಲ್ಲಿರುವ ಕಸ-ರಸ ಘಟಕಕ್ಕೆ ಇಂದು ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಹಸಿ ಕಸದಿಂದ ಜೈವಿಕ ಅನಿಕ ಉತ್ಪತ್ತಿ ಮಾಡುವ ಸಲುವಾಗಿ ಸಮಗ್ರವಾಗಿ ಅಧ್ಯಯನ ನಡೆಸಿ, ಜಿಬಿಎ ನಗರ ಪಾಲಿಕೆಗಳಲ್ಲಿ ಜೈವಿಕ ಅನಿಲ ಘಟಕಗಳನ್ನು ಸ್ಥಾಪಿಸಲು ಕ್ರಮ ವಹಿಸಲಾಗುವುದೆಂದು ಹೇಳಿದರು.
ನಗರದಲ್ಲಿ ವೀಕೇಂದ್ರಿಕೃತ ಕೇಂದ್ರಗಳನ್ನು ಸ್ಥಾಪಿಸಬೇಕಾದರೆ ಆಯಾ ನಗರ ಪಾಲಿಕೆಗಳಲ್ಲಿ 2/3 ಎಕರೆ ಜಾಗ ಬೇಕಾಗುತ್ತದೆ. ಕಡಿಮೆ ಅವಧಿಯಲ್ಲಿ ಪ್ರಸ್ತುತ ಇರುವಂತಹ ಘಟಗಳನ್ನು ಉನ್ನತೀಕಣಗೊಳಿಸಿ ಅಲ್ಲಿ ಬಯೋ ಗ್ಯಾಸ್ ಉತ್ಪತ್ತಿ ಮಾಡಿ, ಸ್ಥಳೀಯ ಹೋಟೆಲ್ ಗಳಿಗೆ ವಿತರಣೆ ಮಾಡಲು ಕ್ರಮ ವಹಿಸಲಾಗುವುದೆಂದು ತಿಳಿಸಿದರು.
ಸ್ಥಳೀಯವಾಗಿ ಹಸಿ ಹಾಗೂ ಒಣ ತ್ಯಾಜ್ಯ ವಿಂಗಡಣೆಯಾದರೆ ಸಾಕಷ್ಟು ಅನುಕೂಲವಾಗಲಿದೆ. ಅದಕ್ಕೆ ನಾಗರೀಕರ ಸಹಕಾರ ಪ್ರಮುಖ ಪಾತ್ರ ವಹಿಸಲಿದ್ದು, ನಾಗರಿಕರು ತ್ಯಾಜ್ಯವನ್ನು ವಿಂಗಡಿಸಿ ಕೊಡಲು ಮನವಿ ಮಾಡಿದರು.
ಕಸ-ರಸ ಘಟಕದಲ್ಲಿ 10 ಟನ್ ನಿಂದ ಬಯೋ ಗ್ಯಾಸ್ ಉತ್ಪಾದಿಸಿ ಹತ್ತಿರದ ಹೋಟೆಲ್ ಗೆ ವಿತರಣೆ ಮಾಡಲಾಗುತ್ತಿದ್ದು, ಆ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸಲು ಕ್ರಮವಹಿಸಲಾಗುತ್ತದೆ. ಈ ಸ್ಥಳದಲ್ಲಿರುವ ಹೈ ಟೆನ್ಷನ್ ಲೈನ್ ಲೈನ್ ಬದಲಾಯಿಸಿದರೆ, ಬೃಹತ್ ಪ್ರಮಾಣದಲ್ಲಿ ಬಯೋಗ್ಯಾಸ್ ಉತ್ಪತ್ತಿಸಬಹುದಾಗಿದ್ದು, ಆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿ ಕರೀಗೌಡ ರವರು ಮಾತನಾಡಿ, ಹಸಿ ಘನತ್ಯಾಜ್ಯದ ವ್ಯವಸ್ಥಿತ ಹಾಗೂ ವೈಜ್ಞಾನಿಕ ಸಂಸ್ಕರಣೆ ಘನತ್ಯಾಜ್ಯ ನಿರ್ವಹಣೆಯ ಪ್ರಮುಖ ಅಂಶವಾಗಿದೆ. ಈ ನಿಟ್ಟಿನಲ್ಲಿ ಬಿಎಸ್ಡಬ್ಲ್ಯೂಎಂಎಲ್ ವತಿಯಿಂದ ಹಸಿ ತ್ಯಾಜ್ಯದಿಂದ ಬಯೋಗ್ಯಾಸ್ ಉತ್ಪಾದಿಸಲು ವಿವಿಧ ಬಯೋಮೆಥನೈಸೇಷನ್ ಘಟಕಗಳನ್ನು ನಿರ್ಮಿಸಿ ನಿರ್ವಹಿಸಲಾಗುತ್ತಿದೆ ಎಂದರು.
ಈ ಹಿಂದೆ ಬಿಬಿಎಂಪಿ ವತಿಯಿಂದ ನಿರ್ಮಾಣಗೊಂಡ 12 ಬಯೋಗ್ಯಾಸ್ ಘಟಕಗಳಲ್ಲಿ 6 ಘಟಕಗಳು ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದು, ಪ್ರತಿ ಘಟಕದಲ್ಲಿ ದಿನಕ್ಕೆ 5 ಟನ್ ಹಸಿ ತ್ಯಾಜ್ಯ ಸಂಸ್ಕರಿಸಿ ಒಟ್ಟಾರೆ ಸುಮಾರು 30 ಟನ್ ತ್ಯಾಜ್ಯದಿಂದ ಬಯೋಗ್ಯಾಸ್ ಉತ್ಪಾದಿಸಲಾಗುತ್ತಿದೆ. ಉಳಿದ 6 ಘಟಕಗಳನ್ನು ನವೀಕರಣಗೊಳಿಸುವ ಕಾಮಗಾರಿಯನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ಬಯೋಗ್ಯಾಸ್ ಘಟಕಗಳಲ್ಲಿ ಪ್ರತಿ ಟನ್ ಹಸಿ ತ್ಯಾಜ್ಯದಿಂದ ಸುಮಾರು 30 ರಿಂದ 50 ಕೆಜಿ ಬಯೋಗ್ಯಾಸ್ ಉತ್ಪಾದನೆ ಸಾಧ್ಯವಾಗುತ್ತದೆ. ಅದರಂತೆ ಪ್ರತಿ ಘಟಕದಲ್ಲಿ ದಿನಕ್ಕೆ ಸುಮಾರು 200 ಕೆಜಿ ಗ್ಯಾಸ್ ಉತ್ಪಾದನೆ ನಡೆಯುತ್ತಿದೆ. ಉತ್ಪಾದನೆಯಾಗುವ ಬಯೋಗ್ಯಾಸ್ ಅನ್ನು ಘಟಕಗಳ ಒಳಾಂಗಣ ಬಳಕೆಗೆ ಬಳಸಲಾಗುತ್ತಿದ್ದು, ಹೆಚ್ಚುವರಿ ಗ್ಯಾಸ್ ಮೂಲಕ ಜನರೇಟರ್ ಮೂಲಕ ವಿದ್ಯುತ್ ಉತ್ಪಾದಿಸಿ ಸಮೀಪದ ಉದ್ಯಾನವನಗಳಲ್ಲಿ ದೀಪಗಳನ್ನು ಬೆಳಗಿಸಲಾಗುತ್ತಿದೆ.
ಹೋಟೆಲ್ ಗೆ ಬಯೋಗ್ಯಾಸ್ ಸರಬರಾಜು:
ಕೋರಮಂಗಲದಲ್ಲಿರುವ 8.5 ಟನ್ ಸಾಮರ್ಥ್ಯದ ಬಯೋಗ್ಯಾಸ್ ಘಟಕದಿಂದ ಸಮೀಪದ ಹೋಟೆಲ್ಗೆ ಪ್ರತಿದಿನ ಸುಮಾರು 120 ಕೆಜಿ ಬಯೋಗ್ಯಾಸ್ ಸರಬರಾಜು ಮಾಡಲಾಗುತ್ತಿದ್ದು, ಪ್ರತಿ ಕೆಜಿಗೆ ರೂ.70ರಂತೆ ದಿನಕ್ಕೆ ಸುಮಾರು ರೂ.8,400 ಆದಾಯ ಲಭ್ಯವಾಗುತ್ತಿದೆ. ಇದರ ಮೂಲಕ ಹಸಿ ತ್ಯಾಜ್ಯದಿಂದ ಉತ್ಪತ್ತಿಯಾಗುವ ಜೈವಿಕ ಅನಿಲವನ್ನು ಅಡುಗೆ ಇಂಧನವಾಗಿ ಬಳಸಲಾಗುತ್ತಿದೆ.
ಬೃಹತ್ ಬಯೋಗ್ಯಾಸ್ ಘಟಕ ಸ್ಥಾಪನೆ:
ಗೇಲ್ ಗ್ಯಾಸ್ ಇಂಡಿಯಾ ಕಂಪನಿಯ ಸಹಯೋಗದೊಂದಿಗೆ ದಿನಕ್ಕೆ ಸುಮಾರು 300 ಟನ್ ಹಸಿ ತ್ಯಾಜ್ಯ ಸಂಸ್ಕರಿಸುವ ಸಾಮರ್ಥ್ಯದ ಹೊಸ ಬಯೋಗ್ಯಾಸ್ ಘಟಕ ನಿರ್ಮಾಣಕ್ಕೂ ಚಾಲನೆ ನೀಡಲಾಗಿದೆ. ಇದಲ್ಲದೆ ಕನ್ನಹಳ್ಳಿ ಪ್ರದೇಶದಲ್ಲಿ ಸುಮಾರು 1,000 ಟನ್ ಹಸಿ ತ್ಯಾಜ್ಯದಿಂದ ಬಯೋಗ್ಯಾಸ್ ಉತ್ಪಾದಿಸುವ ಘಟಕ ನಿರ್ಮಾಣಕ್ಕೆ ಮೆ. ಸಾತರಾಂ ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಅನುಮೋದನೆ ನೀಡಲಾಗಿದೆ ಎಂದರು.

