ನವದೆಹಲಿ: ರಾಜ್ಯಪಾಲರು ಪರಿಗಣನೆಗೆ ಕಾಯ್ದಿರಿಸಿದ ಮಸೂದೆಗಳ ಕುರಿತು ಮೂರು ತಿಂಗಳೊಳಗೆ ನಿರ್ಧಾರ ಕೈಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ರಾಷ್ಟ್ರಪತಿಗಳಿಗೆ ನಿರ್ದೇಶನ ನೀಡಿದೆ.
ತಮಿಳುನಾಡು ಸರ್ಕಾರ ಮತ್ತುರಾಜ್ಯಪಾಲರ ನಡುವಿನ ಪ್ರಕರಣದ ಮಹತ್ವದ ತೀರ್ಪಿನಲ್ಲಿ ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಆರ್. ಮಹಾದೇವನ್ ಅವರ ನ್ಯಾಯಪೀಠವು, ಸಂವಿಧಾನದ 201ನೇ ವಿಧಿಯ ಪ್ರಕಾರ ಕಾರ್ಯನಿರ್ವಹಿಸಲು ರಾಷ್ಟ್ರಪತಿಗೆ ಕಾಲಮಿತಿಯನ್ನು ನಿಗದಿಪಡಿಸಿದೆ. ಈ ಅವಧಿಯನ್ನು ಮೀರಿ ಯಾವುದೇ ವಿಳಂಬವಾದರೆ ಸೂಕ್ತ ಕಾರಣಗಳನ್ನು ದಾಖಲಿಸಬೇಕು ಮತ್ತು ಸಂಬಂಧಪಟ್ಟ ರಾಜ್ಯಕ್ಕೆ ತಿಳಿಸಬೇಕು ಎಂದೂ ತೀರ್ಪಿನಲ್ಲಿ ಉಲ್ಲೇಖಿಸಿದೆ.
201ನೇ ವಿಧಿಯಲ್ಲಿ ‘ಸಮಯ ಮಿತಿ’ ನಿಗದಿಪಡಿಸದೇ ಇರುವುದು ಕೇಂದ್ರ ಮತ್ತು ರಾಜ್ಯಗಳ ನಡುವಿನ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ. ರಾಜ್ಯಪಾಲರು ಮತ್ತು ರಾಜ್ಯ ಸರ್ಕಾರ ಜನರ ಹಿತಾಸಕ್ತಿಗಳು ಮತ್ತು ಯೋಗಕ್ಷೇಮ ಗಮನದಲ್ಲಿಟ್ಟುಕೊಂಡು ಸಾಮರಸ್ಯದಿಂದ ಕೆಲಸ ಮಾಡುತ್ತದೆ ಎಂದು ನಾವು ಭಾವಿಸುತ್ತೇವೆ ಎಂದು ನ್ಯಾಮೂರ್ತಿಗಳು ತಿಳಿಸಿದ್ದಾರೆ.