ಮುಂಬೈ: ಭಾರೀ ಬಿರುಗಾಳಿ ಮಳೆಯಿಂದಾಗಿ ದೊಡ್ಡ ಗಾತ್ರದ ನೂರು ಅಡಿ ಜಾಹೀರಾತು ಫಲಕ (Bill Board) ಧರೆಗೆ ಬಿದ್ದು 35 ಮಂದಿ ಗಾಯಗೊಂಡಿರುವ ಘಟನೆ ಸಂಭವಿಸಿದೆ.
ಇದುವರೆಗೆ ಯಾವುದೇ ಪ್ರಾಣಾಪಾಯಗಳು ಸಂಭವಿಸಿಲ್ಲ.
ಇಂದು ಮಧ್ಯಾಹ್ನ ಮುಂಬೈನಲ್ಲಿ ಧೂಳು ಮಿಶ್ರಿತ ಬಿರುಗಾಳಿ ಆರಂಭಗೊಳ್ಳುತ್ತಿದ್ದಂತೆ, ಘಾಟ್ಕೋಪರ್ ಪೂರ್ವದ ಪಂತ್ ನಗರದ ಎಕ್ಸ್ ಪ್ರೆಸ್ ಹೈವೇ ಸಮೀಪದ ಪೆಟ್ರೋಲ್ ಬಂಕ್ ಬಳಿ ದೊಡ್ಡ ಗಾತ್ರದ ಜಾಹೀರಾತು ಫಲಕ ಕುಸಿದು ಬಿತ್ತು. ಇದರ ಪರಿಣಾಮವಾಗಿ ಹಲವರು ಗಾಯಗೊಂಡಿದ್ದಾರೆ.
ದೇಶದ ವಾಣಿಜ್ಯ ನಗರಿ ಮುಂಬೈ ಇಂದು ಮಧ್ಯಾಹ್ನ ಧೂಳಿನ ಬಿರುಗಾಳಿಗೆ ಸಿಕ್ಕು ತನ್ನ ಚಹರೆಯನ್ನೇ ಬದಲಾಯಿಸಿಕೊಂಡಿತ್ತು. ಮಧ್ಯಾಹ್ನ ಮೂರು ಗಂಟೆಯ ಸುಮಾರಿಗೆ ಭಾರೀ ಬಿರುಗಾಳಿಗೆ ಎದ್ದ ಧೂಳು ಆಕಾಶವನ್ನು ಆವರಿಸಿಕೊಂಡು ರಾತ್ರಿಯ ಕತ್ತಲೆಯ ಅನುಭವ ನೀಡಿತು.
ಬಿರುಗಾಳಿಯೊಂದಿಗೆ ಬಂದ ಈ ವರ್ಷದ ಮೊದಲ ಮಳೆ ಮುಂಬೈ ನಿವಾಸಿಗಳಿಗೆ ಹರ್ಷ ತಂದರೂ, ಮಹಾನಗರವನ್ನು ಆವರಿಸಿಕೊಂಡ ಧೂಳಿನ ಬೆಟ್ಟದಿಂದ ಆತಂಕವೂ ಮೂಡಿತು.
ಬಿರುಗಾಳಿ ಏಳುತ್ತಿದ್ದಂತೆ ಗಾಬರಿಯಾದ ಜನರು ಸುರಕ್ಷಿತ ಜಾಗಗಳನ್ನು ತಲುಪಿಕೊಂಡರು. ವಾಹನ ಸವಾರರು ವಾಹನಗಳನ್ನು ಪಾರ್ಕ್ ಮಾಡಿ ಸಿಕ್ಕ ಸಿಕ್ಕ ಕಟ್ಟಡಗಳಲ್ಲಿ ಆಸರೆ ಪಡೆದುಕೊಂಡರು.
ಕೆಲವು ಭಾಗಗಳಲ್ಲಿ ಮೆಟ್ರೋ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಸಬರ್ಬನ್ ರೈಲು ಸೇವೆಯಲ್ಲೂ ಹಲವೆಡೆ ವ್ಯತ್ಯಯವಾಗಿದೆ. ನಗರದ ಹಲವು ಭಾಗಗಳಲ್ಲಿ ಮರಗಳು ಉರುಳಿ ಬಿದ್ದಿವೆ. ರಸ್ತೆಗಳ ಮೇಲೇ ಬಿದ್ದ ಮರಗಳನ್ನು ತೆರವುಗೊಳಿಸಲು ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.