ಮುಂಬೈನಲ್ಲಿ ಜಾಹೀರಾತು ಫಲಕ ಬಿದ್ದು ಅವಘಡ: ಸತ್ತವರ ಸಂಖ್ಯೆ 14ಕ್ಕೆ ಏರಿಕೆ

Most read

ಮುಂಬೈ: ನಿನ್ನೆ ಮುಂಬೈನಾದ್ಯಂತ ಬೀಸಿದ ಭಾರೀ ಬಿರುಗಾಳಿಗೆ ಕುಸಿದು ಬಿದ್ದ ಜಾಹೀರಾತು ಫಲಕದಿಂದಾಗಿ ಸಂಭವಿಸಿದ ಭೀಕರ ಅವಘಡದಲ್ಲಿ ಸತ್ತವರ ಸಂಖ್ಯೆ 14ಕ್ಕೆ ಏರಿದೆ. ಈ ದುರ್ಘಟನೆಯಲ್ಲಿ 70 ಮಂದಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳು ಇವೆ.

ನಿನ್ನೆ ಮಧ್ಯಾಹ್ನ ಮುಂಬೈನಲ್ಲಿ ಧೂಳಿನ ಬಿರುಗಾಳಿಯೇ ಎದ್ದ ಹಿನ್ನೆಲೆಯಲ್ಲಿ ಘಾಟ್ಕೋಪರ್‌ ಬಳಿಯಲ್ಲಿ ಜಾಹೀರಾತು ಫಲಕವೊಂದು ಪೆಟ್ರೋಲ್‌ ಬಂಕ್‌ ಮೇಲೆ ಬಿದ್ದಿತ್ತು. ಲೋಹದ ಚೌಕಟ್ಟನ್ನು ಹೊಂದಿದ್ದ ಫಲಕ ಕೆಳಗೆ ಬಿದ್ದ ರಭಸಕ್ಕೆ ಪೆಟ್ರೋಲ್‌ ಬಂಕ್‌ ಬಳಿ ನಿಲ್ಲಿಸಿದ ಕಾರುಗಳು ನುಜ್ಜುಗಜ್ಜಾಗಿದ್ದವು.

ಸ್ಥಳಕ್ಕೆ ಧಾವಿಸಿದ NDRF ಸಿಬ್ಬಂದಿ ಸೇರಿದಂತೆ ಅಗ್ನಿಶಾಮಕ ದಳ ಮತ್ತು ಮಹಾನಗರಪಾಲಿಕೆ ಸಿಬ್ಬಂದಿಗಳು ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ರಕ್ಷಣಾ ಕಾರ್ಯಾಚರಣೆ ಸಂದರ್ಭದಲ್ಲಿ ಊಹೆಗೂ ಮೀರಿದ ಜೀವಹಾನಿ ಆಗಿರುವುದು ಬೆಳಕಿಗೆ ಬಂದಿತು.

ಪೊಲೀಸ್‌ ಕಲ್ಯಾಣ ಸಹಕಾರ ಸಂಘಕ್ಕೆ ಲೀಸ್‌ ಆಧಾರದಲ್ಲಿ ನೀಡಲಾಗಿರುವ ಜಾಗದಲ್ಲಿ ಇಗೋ ಮೀಡಿಯಾ ಏಜೆನ್ಸಿ ಜಾಹೀರಾತು ಫಲಕ ಅವಳಡಿಸಿತ್ತು.  ಇಗೋ ಮೀಡಿಯಾ ಅಳವಡಿಸಿದ್ದ ನಾಲ್ಕು ಫಲಕಗಳ ಪೈಕಿ ನಿನ್ನೆ ಒಂದು ಫಲಕ ಕೆಳಗೆ ಬಿದ್ದಿದೆ. ಮುಂಬೈ ಪೊಲೀಸರು ಇಗೋ ಮೀಡಿಯಾ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಾಲ್ಕು ಫಲಕಗಳನ್ನು ಅಳವಡಿಸಲು ಸಹಾಯಕ ಪೊಲೀಸರ್‌ ಆಯುಕ್ತ (ರೈಲ್ವೇಸ್)‌ರಿಂದ ಇಗೋ ಮೀಡಿಯಾ ಅನುಮತಿ ಪಡೆದಿದ್ದರೂ BMC ಯಿಂದ ನಿರಾಕ್ಷೇಪಣಾ ಪತ್ರ ಪಡೆದಿರಲಿಲ್ಲ. ಇದೀಗ BMC ರೈಲ್ವೆ ಪೊಲೀಸರಿಗೂ ನೋಟಿಸ್‌ ನೀಡಿದ್ದು, ಇತರ ಜಾಹೀರಾತು ಫಲಕಗಳನ್ನು ಕೂಡಲೇ ತೆರವುಗೊಳಿಸುವಂತೆ ಸೂಚಿಸಿದೆ.

ನಿನ್ನೆ ಮಧ್ಯಾಹ್ನ 3ಗಂಟೆಯ ಸುಮಾರಿಗೆ ಮುಂಬೈನಲ್ಲಿ ಹಿಂದೆಂದೂ ಕಾಣದಂಥ ಧೂಳಿಗೆ ಬಿರುಗಾಳಿ ಎದ್ದಿತ್ತು. ಇಡೀ ನಗರದಲ್ಲಿ ಮಧ್ಯಾಹ್ನವೇ ಕತ್ತಲಾಗಿಹೋಗಿತ್ತು.  ಸಂಚಾರ ವ್ಯವಸ್ಥೆ ಸಂಪೂರ್ಣ ಸ್ಥಗಿತಗೊಂಡಿತ್ತು. ಛತ್ರಪತಿ ಶಿವಾಜಿ ಮಹಾರಾಜ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಲ್ಲ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಹಲವೆಡೆ ಮೆಟ್ರೋ ಸೇವೆಯನ್ನು ಹಿಂದಕ್ಕೆ ಪಡೆಯಲಾಗಿತ್ತು. ಸಬರ್‌ ಬನ್‌ ರೈಲು ಸೇವೆಯಲ್ಲೂ ವ್ಯತ್ಯಯವಾಗಿತ್ತು.

ಅವಘಡ ಸಂಭವಿಸಿದ ನಂತರ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಸ್ಥಳಕ್ಕೆ ಭೇಟಿ ನೀಡಿ, ನಗರದಲ್ಲಿ ಅಳವಡಿಸಲಾಗಿರುವ ಅಕ್ರಮ ಮತ್ತು ಅಪಾಯಕಾರಿ ಜಾಹೀರಾತು ಫಲಕಗಳನ್ನು ತೆರವುಗೊಳಿಸುವುದಾಗಿ ಹೇಳಿದರು.  ಘಟನೆಯಲ್ಲಿ ಮೃತಪಟ್ಟ ಕುಟುಂಬದವರಿಗೆ ತಲಾ 5 ಲಕ್ಷ ರೂಪಾಯಿಗಳ ಪರಿಹಾರವನ್ನು ಘೋಷಿಸಿದರು.

More articles

Latest article