ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳು ಶರಣಾಗಲು ಮತ್ತಷ್ಟು ಕಾಲಾವಲಾಶ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳನ್ನು ಅವಧಿಪೂರ್ವದಲ್ಲೇ ಬಿಡುಗಡೆ ಮಾಡಿದ್ದ ಗುಜರಾತ್ ಸರ್ಕಾರದ ನಿರ್ಧಾರವನ್ನು ರದ್ದುಪಡಿಸಿದ್ದ ಸುಪ್ರೀಂಕೋರ್ಟ್ ವಾರದ ಒಳಗೆ ಶರಣಾಗಲು ಆದೇಶಿಸಿತ್ತು.
ಶರಣಾಗತಿಗೆ ಕಾಲಾವಕಾಶ ಕೋರಿ ಹನ್ನೊಂದು ಮಂದಿ ಅಪರಾಧಿಗಳು ಸುಪ್ರೀಂ ಕೋರ್ಟ್ ಕದ ತಟ್ಟಿದ್ದರು. ಅಪರಾಧಿಗಳ ಅರ್ಜಿಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್ ಶರಣರಾಗಲು ಆದೇಶಿಸಿದೆ.
ನ್ಯಾಯಮೂರ್ತಿ ಬಿ.ವಿ.ನಾಗರತ್ನ ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರನ್ನು ಒಳಗೊಂಡ ವಿಭಾಗೀಯ ಪೀಠ, ಅರ್ಜಿಯಲ್ಲಿ ಯಾವುದೇ ಹುರುಳಿಲ್ಲ ಎಂದು ಹೇಳಿದೆಯಲ್ಲದೆ ಭಾನುವಾರದೊಳಗೆ ಶರಣಾಗಲು ಅತ್ಯಾಚಾರ, ಕೊಲೆ ಆರೋಪಿಗಳಿಗೆ ಸೂಚಿಸಿದೆ.
ಗುಜರಾತ್ ಸರ್ಕಾರದ ಆದೇಶವನ್ನು ರದ್ದುಗೊಳಿಸಿ ಜನವರಿ 8ರಂದು ಸುಪ್ರೀಂಕೋರ್ಟ್ ಆದೇಶಿಸಿದ ಬೆನ್ನಲ್ಲೇ ತಮಗೆ ಖಾಯಿಲೆ, ಕುಟುಂಬದ ಕಾರ್ಯಗಳು, ಬೆಳೆ ಕೊಯ್ಲು ಇತ್ಯಾದಿ ಕಾರಣಗಳಿಗಾಗಿ ಶರಣಾಗಲು ನಾಲ್ಕರಿಂದ ಆರು ವಾರಗಳ ಕಾಲಾವಕಾಶ ನೀಡಬೇಕು ಎಂದು ಎಲ್ಲ ಅಪರಾಧಿಗಳು ಅರ್ಜಿ ಸಲ್ಲಿಸಿದ್ದರು.
ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳನ್ನು ಅವಧಿಪೂರ್ವದಲ್ಲೇ ಬಿಡುಗಡೆ ಮಾಡಿದ್ದ ಗುಜರಾತ್ ಸರ್ಕಾರದ ಆದೇಶವನ್ನು ರದ್ದುಗೊಳಿಸಿದ್ದ ಸುಪ್ರೀಂ ಕೋರ್ಟ್ ಬಿಡುಗಡೆ ಮಾಡಲು ಗುಜರಾತ್ ಸರ್ಕಾರಕ್ಕೆ ಅಧಿಕಾರ ಇಲ್ಲ ಎಂದು ಹೇಳಿತ್ತು.