ಒಂದು ದೇಶದಲ್ಲಿ ನ್ಯಾಯ ಸತ್ತಿದೆಯೆಂದರೆ ಆ ದೇಶದ ಆತ್ಮಸಾಕ್ಷಿಯೂ ಸತ್ತಿದೆ ಎಂದರ್ಥ. ಬಿಲ್ಕಿಸ್ ಯಾಕೂಬ್ ರಸೂಲ್ ಬಾನು ಪ್ರಕರಣದ ಅಪರಾಧಿಗಳನ್ನು ಬಿಡುಗಡೆಗೊಳಿಸಲಾಗಿದ್ದ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ವಿಭಾಗೀಯ ಪೀಠ, ಎಲ್ಲ ಅತ್ಯಾಚಾರಿಗಳನ್ನು ಮತ್ತೆ ಜೈಲಿಗೆ ಕಳುಹಿಸುವಂತೆ ಆದೇಶಿಸಿದೆ. ದೇಶದಲ್ಲಿ ನ್ಯಾಯ ಇನ್ನೂ ಜೀವಂತವಾಗಿದೆ, ತನ್ಮೂಲಕ ದೇಶದ ಆತ್ಮಸಾಕ್ಷಿಯೂ ಉಸಿರಾಡುತ್ತಿದೆ ಎಂದು ನಾವು ಭಾವಿಸಬಹುದು.
ʻʻಒಬ್ಬ ಮಹಿಳೆ ಯಾವುದೇ ಧರ್ಮ ಅನುಸರಿಸುತ್ತಿರಲಿ, ಸಾಮಾಜಿಕ ಸಂರಚನೆಯಲ್ಲಿ ತಳಮಟ್ಟದಲ್ಲೇ ಇರಲಿ, ಆಕೆ ಗೌರವಕ್ಕೆ ಅರ್ಹಳು, ಯಾರೂ ಕೂಡ ಕಾನೂನಿನ ಮುಂದೆ ದೊಡ್ಡವರಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನೆಲದ ಕಾನೂನನ್ನು ನಾವು ರಕ್ಷಿಸಿಕೊಳ್ಳಬೇಕು, ಇಲ್ಲಿ ಅನುಕಂಪ, ಸಹಾನುಭೂತಿಗೆ ಯಾವ ಜಾಗವೂ ಇಲ್ಲ.ʼʼ ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿರುವ ಈ ಮಾತುಗಳು ಈ ದುರಿತ ಕಾಲದಲ್ಲಿ ಸಣ್ಣ ಸಂಜೀವಿನಿಯಂತೆ ಕಾಣಿಸುತ್ತಿದೆ.
2002ರ ಫೆಬ್ರವರಿ ತಿಂಗಳಿನಲ್ಲಿ ಅಯೋಧ್ಯೆಯಲ್ಲಿ ಕರಸೇವಕರಿದ್ದ ರೈಲಿಗೆ ಗುಜರಾತ್ ನ ಗೋದ್ರಾ ಸಮೀಪ ಬೆಂಕಿ ಬಿದ್ದ ಹಿನ್ನೆಲೆಯಲ್ಲಿ 59 ಮಂದಿ ಜೀವಂತವಾಗಿ ಸುಟ್ಟು ಹೋಗಿದ್ದರು. ಈ ಘಟನೆಯ ನಂತರ ಇಡೀ ಗುಜರಾತ್ ರಾಜ್ಯದಾದ್ಯಂತ ಮುಸ್ಲಿಂ ಸಮುದಾಯದ ವಿರುದ್ಧ ದೊಡ್ಡಮಟ್ಟದ ಹಿಂಸಾಚಾರ ನಡೆದು, ಸಾವಿರಾರು ಮುಸ್ಲಿಮರು ಬಲಿಯಾದರು. ಈ ಸಂದರ್ಭದಲ್ಲಿ ತನ್ನನ್ನು, ತನ್ನ ಕುಟುಂಬವನ್ನು ರಕ್ಷಿಸಿಕೊಳ್ಳಲು ಬಿಲ್ಕಿಸ್ ಬಾನು ಎಂಬಾಕೆ (ಐದು ತಿಂಗಳ ಗರ್ಭಿಣಿ) ರಾಧಿಕಾಪುರ ಎಂಬ ತನ್ನ ಊರನ್ನು ಬಿಟ್ಟು ಹದಿನೈದು ಮಂದಿ ಕುಟುಂಬ ಸದಸ್ಯರೊಂದಿಗೆ ಛಾಪರ್ ವದ್ ಜಿಲ್ಲೆಗೆ ತೆರಳಿದ್ದರು. ಆದರೆ ಮಾರ್ಚ್ 3ರಂದು ಆ ಕುಟುಂಬದ ಮಾರಣಹೋಮವೇ ನಡೆದುಹೋಯಿತು.
ಸುಮಾರು 20-30 ಗೂಂಡಾಗಳು ಕತ್ತಿ, ದೊಣ್ಣೆಗಳೊಂದಿಗೆ ನುಗ್ಗಿದರು. ಬಿಲ್ಕಿಸ್ ಬಾನುವನ್ನು ಅತ್ಯಾಚಾರ ಮಾಡಲಾಯಿತು. ಕ್ರೂರಿಗಳು ಆಕೆಯ ಎದುರೇ ಆಕೆ ತಾಯಿಯನ್ನೂ ಅತ್ಯಾಚಾರ ಮಾಡಿದರು. ಕುಟುಂಬದ ಇನ್ನೂ ಮೂರು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರಗಳು ನಡೆದುಹೋದವು. ಕೊನೆಗೆ ಬಿಲ್ಕಿಸ್ ಬಾನು ಅವರ ಮೂರು ವರ್ಷದ ಮಗುವನ್ನೂ ಕೊಂದುಹಾಕಲಾಯಿತು. ಇಡೀ ಘಟನೆಯಲ್ಲಿ ಉಳಿದುಕೊಂಡಿದ್ದು ಬಿಲ್ಕಿಸ್ ಬಾನು ಮತ್ತು ಮೂರು ವರ್ಷದ ಒಬ್ಬ ಹುಡುಗ ಮಾತ್ರ. ಮೂರ್ಛೆ ಹೋಗಿದ್ದ ಬಿಲ್ಕಿಸ್ ಬಾನು ಎಚ್ಚರವಾದ ನಂತರ ಆ ಭಾಗದ ಆದಿವಾಸಿಗಳಿಂದ ಬಟ್ಟೆ ಪಡೆದು, ಧರಿಸಿಕೊಂಡು ಲಿಮ್ಕೇಡಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ತಾನು ದೂರಿನ ಕುರಿತು ಪೊಲೀಸರು ಕ್ರಮ ಕೈಗೊಳ್ಳದೇ ಹೋದಾಗ, ಬಿಲ್ಕಿಸ್ ಬಾನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಮೊರೆ ಹೋದರು. ಸುಪ್ರೀಂಕೋರ್ಟ್ ಮೆಟ್ಟಿಲೇರಿದರು. ಸುಪ್ರಿಂ ಕೋರ್ಟ್ ಸಿಬಿಐ ತನಿಖೆಗೆ ಆದೇಶಿಸಿತು. ಪ್ರಕರಣದ ವಿಚಾರಣೆಯನ್ನು ಗುಜರಾತ್ ನಿಂದ ಹೊರಗೆ ನಡೆಸಲು ತೀರ್ಮಾನಿಸಲಾಯಿತು. ಮುಂಬೈನಲ್ಲಿ ವಿಚಾರಣೆ ನಡೆದು, ಅಲ್ಲಿನ ನ್ಯಾಯಾಲಯ 2008ರ ಜನವರಿಯಲ್ಲಿ ಹತ್ತೊಂಭತ್ತು ಕೊಲೆಗಡುಕರಿಗೆ ಶಿಕ್ಷೆ ವಿಧಿಸಿತು. 2017ರ ಮೇ 8ರಂದು ಬಾಂಬೆ ಹೈಕೋರ್ಟ್ ಈ ತೀರ್ಪನ್ನು ಎತ್ತಿಹಿಡಿಯಿತು. ಸುಪ್ರೀಂ ಕೋರ್ಟ್ 2019ರ ಏಪ್ರಿಲ್ 23ರಂದು ಬಿಲ್ಕಿಸ್ ಯಾಕೂಬ್ ರಸೂಲ್ ಬಾನು ಅವರಿಗೆ 50 ಲಕ್ಷ ರೂ ಪರಿಹಾರ ನೀಡುವಂತೆ, ಆಕೆಗೆ ಒಂದು ಸರ್ಕಾರಿ ನೌಕರಿ ನೀಡುವಂತೆ, ಆಕೆ ಬಯಸುವ ಪ್ರದೇಶದಲ್ಲಿ ವಸತಿ ಸೌಲಭ್ಯ ಕಲ್ಪಿಸುವಂತೆ ಆದೇಶಿಸಿತು.
ಆದರೆ ಇಡೀ ದೇಶದ ನ್ಯಾಯದಾನ ವ್ಯವಸ್ಥೆಯೇ ಅಲುಗಾಡುವಂತೆ 2022ರ ಆಗಸ್ಟ್ 15ರಂದು ಹನ್ನೊಂದು ಅಪರಾಧಿಗಳನ್ನು ಗೋಧ್ರಾ ಜೈಲಿನಿಂದ ಬಿಡುಗಡೆ ಮಾಡುವಂತೆ ಗುಜರಾತ್ ಸರ್ಕಾರ ಆದೇಶಿಸಿತು. ಅಪರಾಧಿಗಳಿಗೆ ಅವಧಿಪೂರ್ವ ಬಿಡುಗಡೆಯ ನಿರ್ಧಾರ ಕೈಗೊಂಡ ಸರ್ಕಾರದ ಸಮಿತಿಯಲ್ಲಿ ಇಬ್ಬರು ಬಿಜೆಪಿ ಶಾಸಕರು, ಒಬ್ಬ ಬಿಜೆಪಿಯ ಮುನ್ಸಿಪಲ್ ಕೌನ್ಸಿಲರ್ ಹಾಗು ಬಿಜೆಪಿ ಯುವ ಮೋರ್ಚಾದ ಸದಸ್ಯೆಯೊಬ್ಬಳು ಇದ್ದರು. ಗುಜರಾತ್ ಸರ್ಕಾರದ ಆದೇಶದಂತೆ ಎಲ್ಲ ಆರೋಪಿಗಳು ಗೋಧ್ರಾ ಜೈಲಿನಿಂದ ಹೊರಗೆ ಬಂದಾಗ ಭಾರತೀಯ ಜನತಾ ಪಕ್ಷದ ಮುಖಂಡರು, ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿದರು. ಸಿಹಿ ಹಂಚಿ ಸಂಭ್ರಮಿಸಲಾಯಿತು. ಅತ್ಯಾಚಾರ ಅಪರಾಧಿಗಳ ಕಾಲುಮುಟ್ಟಿ ನಮಸ್ಕರಿಸಲಾಯಿತು. ಎಲ್ಲ ಅಪರಾಧಿಗಳು ಬ್ರಾಹ್ಮಣರು, ಅವರು ಸಂಸ್ಕಾರವಂತರು. ಅದಕ್ಕಾಗಿಯೇ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಬಿಜೆಪಿ ಶಾಸಕರೋರ್ವರು ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡಿದ್ದರು.
ʻ ದೇಶದ ನ್ಯಾಯ ವ್ಯವಸ್ಥೆಯ ಮೇಲಿನ ನಂಬಿಕೆಯೇ ಅಲುಗಾಡಿದೆ ʼ ಎಂದು ನೊಂದು ನುಡಿದರು ಬಿಲ್ಕಿಸ್ ಬಾನು. ಆಕೆಯ ಊರಿನಲ್ಲಿದ್ದ ಹಲವು ಮುಸ್ಲಿ ಕುಟುಂಬಗಳು ಮತ್ತೆ ತಮ್ಮ ಮೇಲೆ ದಾಳಿ ನಡೆಯಬಹುದೆಂಬ ಆತಂಕದಿಂದ ಊರು ತೊರೆದರು. 2022ರ ಆಗಸ್ಟ್ 18ರಂದು ದೇಶದ ಪ್ರಮುಖ ಲೇಖಕರು, ಸಾಮಾಜಿಕ ಹೋರಾಟಗಾರರು, ಚಲನಚಿತ್ರ ರಂಗದ ಗಣ್ಯರು, ಇತಿಹಾಸಕಾರರು, ಮಾಜಿ ಅಧಿಕಾರಿಗಳನ್ನು ಒಳಗೊಂಡಂತೆ ಸುಮಾರು 6000 ಮಂದಿ ಸುಪ್ರೀಂ ಕೋರ್ಟ್‌ಗೆ ಪತ್ರ ಬರೆದು, ಈ ಭೀಕರ ಅತ್ಯಾಚಾರ-ಕೊಲೆ ಪ್ರಕರಣಗಳ ಅಪರಾಧಿಗಳ ಅವಧಿಪೂರ್ವ ಬಿಡುಗಡೆಯನ್ನು ಪ್ರಶ್ನಿಸಿದರು. ಸುಪ್ರೀಂ ಕೋರ್ಟ್ ಈ ಪ್ರಕರಣದ ವಿಚಾರಣೆಗೆ ಸಮ್ಮತಿಸಿತು. ಇದೀಗ ನ್ಯಾಯಮೂರ್ತಿಗಳಾದ ಬಿವಿ ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠವು,ಎಲ್ಲ ಆರೋಪಿಗಳು ಎರಡು ವಾರಗಳೊಳಗೆ ಶರಣಾಗುವಂತೆ ಆದೇಶಿಸಿದೆ. ಗುಜತಾತ್ ಸರ್ಕಾರಕ್ಕೆ ಆರೋಪಿಗಳ ಶಿಕ್ಷೆ ರದ್ದುಪಡಿಸುವ ಅಧಿಕಾರ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.
ದೇಶದಲ್ಲಿ ಇತೀಚಿನ ವರ್ಷಗಳಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದಾಗ ಬಿಲ್ಕಿಸ್ ಬಾನು ಪ್ರಕರಣದ ಈ ತೀರ್ಪು ಸಣ್ಣ ಸಾಂತ್ವನ ನೀಡಿದಂತಾಗಿದೆ ಎಂದರೆ ಸುಳ್ಳಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯ ಒಳಗೆಯೇ ಒಂದು ಸರ್ವಾಧಿಕಾರಿ ಆಡಳಿತ ಆರಂಭವಾಗಿದೆಯೇನೋ ಎಂಬಂತೆ ಘಟನಾವಳಿಗಳು ನಡೆಯುತ್ತಿರುವಾಗ ದೇಶದ ನ್ಯಾಯವ್ಯವಸ್ಥೆಯೂ ಅದಕ್ಕೆ ಪೂರಕವಾಗಿ ನಡೆಯುತ್ತಿದೆ ಎಂಬ ಟೀಕೆಗಳು ನಿರಂತರ ಕೇಳಿ ಬರುತ್ತಲೇ ಇದ್ದವು. ನ್ಯಾಯ ವ್ಯವಸ್ಥೆ ಪಕ್ಷಪಾತಿಯಾದರೆ ದೇಶಕ್ಕೆ ಕ್ಯಾನ್ಸರ್ ರೋಗ ಅಂಟಿಕೊಂಡಂತೆ. ಅದರಿಂದ ಬಿಡುಗಡೆ ಸಾಧ್ಯವಿಲ್ಲ. ಆಳುವ ಸರ್ಕಾರಗಳು ತನಗೆ ಬೇಕಾದ ಕಾನೂನುಗಳನ್ನು ರೂಪಿಸಿಕೊಂಡು ತನ್ನ ವಿರೋಧಿಗಳ, ತನ್ನ ಟೀಕಾಕಾರರ ಬಾಯಿ ಮುಚ್ಚಿಸಲು ಯತ್ನಿಸುತ್ತಲೇ ಇರುತ್ತದೆ. ಇಂಥ ಸಂದರ್ಭದಲ್ಲಿ ನ್ಯಾಯವ್ಯವಸ್ಥೆಯೂ ಸರ್ಕಾರದ ಕೈಗೊಂಬೆಯಾದರೆ ದೇಶ ಅವನತಿಯ ಹಾದಿ ಹಿಡಿದಿದೆ ಎಂದೇ ಅರ್ಥ.
ಬಿಲ್ಕಿಸ್ ಬಾನು ಪ್ರಕರಣದಂಥವು ಹಲವಾರು ಘಟನೆಗಳು ಗುಜರಾತ್ ಗಲಭೆಯ ಸಂದರ್ಭದಲ್ಲಿ ನಡೆದುಹೋದವು. ನೂರಾರು ಪ್ರಕರಣಗಳು ದಾಖಲಾಗಲೇ ಇಲ್ಲ. ದಾಖಲಾದ ಪ್ರಕರಣಗಳಲ್ಲಿ ಆರೋಪಿಗಳು ಪಾರಾಗಿಹೋದರು, ಮತ್ತೆ ಕೆಲವರು ಸಣ್ಣಪುಟ್ಟ ಶಿಕ್ಷೆ ಅನುಭವಿಸಿ ಹೊರಬಂದರು. ಆದರೆ ತನ್ನ ಕುಟುಂಬದ ವಿರುದ್ಧ ನಡೆದ ಮಾರಣಹೋಮವನ್ನು ಮರೆಯದ ಬಿಲ್ಕಿಸ್ ಬಾನು ಬೆದರಿಕೆ, ಆಮಿಷ ಇತ್ಯಾದಿ ಎಲ್ಲವನ್ನು ಮೆಟ್ಟಿನಿಂತು ಹೋರಾಡಿ ಆರೋಪಿಗಳಿಗೆ ಶಿಕ್ಷೆಯಾಗುವಂತೆ ಮಾಡಿದರು. ಕೊನೆಗೆ ಅಪರಾಧಿಗಳು ಅವಧಿಪೂರ್ವ ಬಿಡುಗಡೆಯಾದಾಗಲೂ ಅದರ ವಿರುದ್ಧ ಹೋರಾಡಿ ಗೆದ್ದರು. ಅವತ್ತು ಬಿಲ್ಕಿಸ್ ಕುಟುಂಬದ ಮೇಲೆ ನಡೆದ ಆ ಘೋರ ದಾಳಿಯಲ್ಲಿ ಆಕೆಯೂ ಸತ್ತುಹೋಗಿದ್ದರೆ ಬಹುಶಃ ಈ ಆರೋಪಿಗಳು ಹೊರಗೆಯೇ ಇರುತ್ತಿದ್ದರು, ಇನ್ನಷ್ಟು ಹೆಣ್ಣುಮಕ್ಕಳನ್ನು ಅತ್ಯಾಚಾರ ಮಾಡಿ ಮೆರೆಯುತ್ತಿದ್ದರು. ಹೀಗಾಗಿ ಈ ಧೀರೋದಾತ್ತ ಹೋರಾಟಕ್ಕೆ ಬಿಲ್ಕಿಸ್ ಬಾನು ಅವರನ್ನು ಅಭಿನಂದಿಸಬೇಕು.
ಇವತ್ತಿನ ಮಟ್ಟಿಗಂತೂ ನ್ಯಾಯ ಗೆದ್ದಿದೆ, ಮನುಷ್ಯತ್ವ ಉಳಿದುಕೊಂಡಿದೆ.