ಸಕಲೇಶಪುರ : ದೆಹಲಿಯಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ಅಪಾರ ಸೇವೆ ಸಲ್ಲಿಸಿದ್ದ, ಜನಾನುರಾಗಿ ಬೈಕೆರೆ ನಾಗೇಶ್ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿಂದು ಮೃತಪಟ್ಟಿದ್ದಾರೆ. ಅವರಿಗೆ 72 ವರ್ಷ ವಯಸ್ಸಾಗಿತ್ತು.
ಮೃತರು ತಮ್ಮ ಪತ್ನಿ ಸುಗುಣ ಮತ್ತು ಪುತ್ರಿ ಅರ್ಪಿತರನ್ನು ಬಿಟ್ಟು ಅಗಲಿದ್ದಾರೆ. ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಸಕಲೇಶಪುರದ ಸಣ್ಣ ಗ್ರಾಮ ಬೈಕೆರೆಯವರಾದ ನಾಗೇಶ್ ಸಾವಿಗೆ ಇಡೀ ಸಕಲೇಶಪುರವೇ ಕಣ್ಣೀರು ಮಿಡಿಯುತ್ತಿದ್ದು, ಅವರ ಸೇವೆಯನ್ನು ಕೊಂಡಾಡುತ್ತಿದೆ.
ನವದೆಹಲಿಯಲ್ಲಿ ಹಲವಾರು ಕೇಂದ್ರ ಮಂತ್ರಿಗಳ ಕಾರ್ಯದರ್ಶಿಯಾಗಿದ್ದಇವರು ಎಚ್.ಡಿ.ದೇವೇಗೌಡರು ಪ್ರಧಾನಿಯಾಗಿದ್ದಾಗಲೂ ವಿಶೇಷ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.
ಕೇಂದ್ರ ಸಚಿವಾಲಯದಲ್ಲಿ ಅತಿಹೆಚ್ಚು, ಅಂದರೆ 10 ಮಂತ್ರಿಗಳ ಆಪ್ತ ಕಾರ್ಯದರ್ಶಿಯಾಗಿ ಸೇವೆಸಲ್ಲಿಸಿದ ನಾಗೇಶ್ ತಮ್ಮ ಸೇವಾವಧಿಯಲ್ಲಿ ಕರ್ನಾಟಕದಿಂದ ಯಾರೇ ಏನೇ ಸಮಸ್ಯೆ ತಂದರೂ ಅವರಿಗೆ ಸ್ಪಂದಿಸುವ ಮೂಲಕ ದೆಹಲಿಯ ಆಪತ್ಪಾಂಧವರೆನಿಸಿಕೊಂಡಿದ್ದರು.
ಜಾಫರ್ ಷರೀಫ್, ಗುರುಪಾದಸ್ವಾಮಿ, ಸಂಜಯ ಸಿಂಗ್, ರಾಮಕೃಷ್ಣಹೆಗ್ಡೆ, ಚಮನಲಾಲ್ ಗುಪ್ತ, ಧನಂಜಯಕುಮಾರ್, ಎಂ.ವಿ. ರಾಜಶೇಖರ್, ಅನಂತಕುಮಾರ್, ಸದಾನಂದ ಗೌಡ, ಎ. ನಾರಾಯಣಸ್ವಾಮಿಯವರಿಗೆ ಆಪ್ತಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದ ಬೈಕೆರೆ ನಾಗೇಶ್ ಜಾಫರ್ ಷರೀಫ್ ಅವರು ರೈಲ್ವೆ ಮಂತ್ರಿಯಾಗಿದ್ದಾಗ ಎಲ್ಲರ ಗಮನ ಸೆಳೆದಿದ್ದರು. ಕರ್ನಾಟಕದ ಸಾವಿರಾರು ನಿರುದ್ಯೋಗಿ ಯುವಕರಿಗೆ ರೈಲ್ವೆಯಲ್ಲಿ ಉದ್ಯೋಗ ದೊರಕಿಸಿಕೊಡುವಲ್ಲಿ ನಾಗೇಶ್ ಪ್ರಧಾನ ಪಾತ್ರ ವಹಿಸಿದ್ದರು.
ಕೇಂದ್ರ ಸರ್ಕಾರದಿಂದ ಬಗೆಹರಿಸಬೇಕಾಗಿದ್ದ ಕರ್ನಾಟಕದ ಹಲವಾರು ಅಭಿವೃದ್ಧಿ ಕಾರ್ಯಯೋಜನೆಗಳ ಅಧ್ಯಯನ ಮತ್ತು ಕೇಂದ್ರ ಮಂತ್ರಿಗಳಿಗೆ ಸೂಕ್ತ ಸಲಹೆ ನೀಡಿ ಅನುಮತಿ ಮತ್ತು ಅನುಷ್ಠಾನಗೊಳಿಸುವಲ್ಲಿ ಬೈಕೆರೆ ನಾಗೇಶ್ ಸಿದ್ಧಹಸ್ತರಾಗಿದ್ದರು.
ರಾಷ್ಟ್ರ ರಾಜಧಾನಿ ದೆಹಲಿಗೆ ಮೊದಲ ಬಾರಿಗೆ ಬರುತ್ತಿದ್ದ ಅಸಹಾಯಕ ಕನ್ನಡಿಗರಿಗೆ ಅವರು ನೀಡುತ್ತಿದ್ದ ಮಾರ್ಗದರ್ಶನ ಮತ್ತು ಸಮಯೋಚಿತ ನೆರವನ್ನು ಯಾರೂ ಮರೆಯುವಂತಿಲ್ಲ.
ತಮ್ಮ ಹುಟ್ಟೂರು ಸಕಲೇಶಪುರ ಮತ್ತು ಬೈಕೆರೆಯ ಅಭಿವೃದ್ಧಿಗೆ ಸಹಿತ ನಾಗೇಶ್ ಹಲವಾರು ವಿಧದಲ್ಲಿ ಶ್ರಮಿಸಿದ್ದರು. ಯಾವ ರಸ್ತೆ ಸಂಪರ್ಕವೂ ಇಲ್ಲದೆ ಕುಗ್ರಾಮವೆನಿಸಿಕೊಂಡಿದ್ದ ಬೈಕೆರೆ ಗ್ರಾಮವನ್ನು ಆಧುನೀಕರಣಗೊಳಿಸಿ ಗ್ರಾಮಸ್ಥರ ಪಾಲಿನ ಹೀರೋ ಆಗಿದ್ದರು.
ಬೈಕೆರೆ ನಾಗೇಶ್ ಅವರ ಸಾವಿಗೆ ನಾಡಿನ ಹಲವಾರು ಗಣ್ಯರು ಕಂಬನಿ ಮಿಡಿದಿದ್ದಾರೆ. ಹಿರಿಯ ವಿದ್ವಾಂಸರಾದ ಪುರುಷೋತ್ತಮ ಬಿಳಿಮಲೆಯವರು ನಾಗೇಶ್ ಅವರ ಸಾವಿಗೆ ಕಂಬನಿ ಮಿಡಿದಿದ್ದು ಬೈಕೆರೆ ನಾಗೇಶ್ ಅವರು ದೆಹಲಿ ಕರ್ನಾಟಕ ಭವನದಲ್ಲಿದ್ದಾಗ ನಮ್ಮಂಥವರಿಗೂ ಅಲ್ಲಿಗೆ ಸುಲಭವಾಗಿ ಪ್ರವೇಶ ದೊರಕುತ್ತಿತ್ತು. ಸಾಹಿತಿಗಳೆಂದರೆ ಅವರಿಗೆ ಅಪಾರ ಗೌರವವೂ ಇತ್ತು. ತಮ್ಮ ಹುಟ್ಟಿದೂರಾದ ಸಕಲೇಶಪುರದ ಬೈಕೆರೆ ಬಗ್ಗೆ ಅವರಿಗೆ ಅತೀವ ಮೋಹ. ಅಲ್ಲಿಂದ ತಾನು ದೆಹಲಿ ಸೇರಿದ ಹಾದಿಗಳ ಬಗ್ಗೆ ಅವರು ʼ ʼಹಳ್ಳಿಯಿಂದ ಡೆಲ್ಲಿಗೆʼ ಎಂಬ ಪುಸ್ತಕವನ್ನೂ ಬರೆದಿದ್ದರು. ಊರಿನ ಅಭಿವೃದ್ಧಿಗೆ ಸಾಕಷ್ಟು ದುಡಿದಿದ್ದರು ಕೂಡಾ.
ಕೇಂದ್ರ ಸರಕಾರವು ವಿವಿಧ ಇಲಾಖೆಗಳಿಗೆ ಬಿಡುಗಡೆ ಮಾಡುವ ಒಟ್ಟು ಹಣ, ಅದರಲ್ಲಿ ಕರ್ನಾಟಕ ಎಷ್ಟು ಹಣ ಬಳಸಿಕೊಂಡಿದೆ ಎಂಬುದರ ಕುರಿತು ಅವರು ಪ್ರತಿವರ್ಷ ವರದಿಯೊಂದನ್ನು ಪುಸ್ತಕ ರೂಪದಲ್ಲಿ ಬರೆಯುತ್ತಿದ್ದರು. ʼ ನೋಡಿ ಬಿಳಿಮಲೆಯವರೇ, ಹಣ ಇದೆ, ನಮ್ಮ ರಾಜ್ಯ ಸರಕಾರಕ್ಕೆ ಅದನ್ನು ತಗೊಳ್ಳಕ್ಕೆ ಬರೋದಿಲ್ಲʼ ಎಂದು ಸದಾ ಹೇಳುತ್ತಿದ್ದ ನಾಗೇಶ್ ನಿಜವಾದ ಅರ್ಥದಲ್ಲಿ ಕರ್ನಾಟಕ ಮತ್ತು ದೆಹಲಿಯ ನಡುವಣ ಸೇತುವೆ ಆಗಿದ್ದರು. ಈಗ ಸೇತುವೆ ತುಂಡಾಗಿದೆ. ಅತ್ಯಂತ ಸಜ್ಜನರಾಗಿದ್ದ ನಾಗೇಶ್ ಅಂತವರು ಇಲ್ಲದಾದಾಗ ಉಂಟಾಗುವ ಶೂನ್ಯವನ್ನು ತುಂಬಿಸುವುದು ಕಷ್ಟವೇ ಸರಿ ಎಂದು ತಮ್ಮ ಫೇಸ್ ಬುಕ್ ಪೋಸ್ಟ್ ನಲ್ಲಿ ಬರೆದಿದ್ದಾರೆ.
ವಾರ್ತಾ ಇಲಾಖೆಯ ಹಿರಿಯ ಅಧಿಕಾರಿಯಾಗಿದ್ದ ಡಿ.ಪಿ. ಮುರುಳೀಧರ್ ಬೈಕೆರೆ ನಾಗೇಶ್ ಕುರಿತು ಹೀಗೆ ಬರೆದಿದ್ದಾರೆ- ಬೈಕೆರೆ ನಾಗೇಶ್ ಎಂದೇ ಜನಪ್ರಿಯವಾಗಿದ್ದ ಬಿ ಎನ್ ನಾಗೇಶ್ ಅವರು ಮೃದು ಮಾತು ಹಾಗೂ ಸೌಮ್ಯ ಸ್ವಭಾವಕ್ಕೆ ಹೆಸರಾಗಿದ್ದರು. ತಮಗೆ ಪರಿಚಯವಿಲ್ಲದಿದ್ಧರೂ ಕನ್ನಡ ಮಾತನಾಡಿದರೆ ಅಥವಾ ಕರ್ನಾಟಕದವರು ಎಂದು ತಿಳಿದು ಬಂದರೆ ಪ್ರೀತಿಯಿಂದ ಮಾತನಾಡಿಸಿ ಕೈಲಾದ ಸಹಾಯ ಮಾಡುತ್ತಿದ್ದರು. ಸಿ ಕೆ ಜಾಫರ್ ಷರೀಫ್ ಅವರು ಕೇಂದ್ರ ರೈಲ್ವೆ ಸಚಿವರಾಗಿದ್ದ ಸಂದರ್ಭದಲ್ಲಿ ವಿಶೇಷ ಕರ್ತವ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ಧ ಕಾಲದಿಂದಲೂ ಇಂದಿನವರೆಗೂ ರೈಲ್ವೇ ಮಂತ್ರಾಲಯದಲ್ಲಿ ಹಿಡಿತ ಸಾಧಿಸಿ, ತಾಯ್ನಾಡಿಗೆ ಸೇರಲು ದೆಹಲಿಯಲ್ಲಿ ಪರದಾಡುವವರಿಗೆ, ವಿಶೇಷವಾಗಿ ಕನ್ನಡಿಗರಿಗೆ, ತಮ್ಮ ಗಮ್ಯಸ್ಥಾನದತ್ತ ಪ್ರಯಾಣಿಸಲು ರೈಲ್ವೇ ಟಿಕೇಟ್ ದೊರಕಿಸಿ ಕೊಡುವಲ್ಲಿ ಸಹಾಯ ಮಾಡುತ್ತಿದ್ದರು.
ಮೂಲತಃ ಮೈಸೂರು ಪೇಪರ್ ಮಿಲ್ಸ್ ನ ಉದ್ಯೋಗಿಯಾಗಿದ್ದ ನಾಗೇಶ್ ಅವರನ್ನು ಮಾರುಕಟ್ಟೆ ವಿಭಾಗದ ವಿಸ್ತರಣಾಧಿಕಾರಿಯಾಗಿ ಮುಂಬಡ್ತಿ ನೀಡಿ ನವದೆಹಲಿಗೆ ನಿಯುಕ್ತಿಗೊಳಿಸಿದಾಗ ಪ್ರತಿಭಟಿಸಿ, ಬಡ್ತಿ ನಿರಾಕರಿಸಿದ್ದರು. ಆದರೆ, ಅನಿವಾರ್ಯವಾಗಿ ಪ್ರಭಾರ ವಹಿಸಿಕೊಳ್ಳಬೇಕಾಯಿತು. ದೆಹಲಿಯಲ್ಲಿ ಪಾದಾರ್ಪಣೆ ಮಾಡಿದ ಘಳಿಗೆಯ ಪರಿಣಾಮವೋ ಅಥವಾ ಮುಹೂರ್ತದ ಪ್ರಭಾವವೋ ಏನೋ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ರಾಷ್ಟ್ರ ರಾಜಧಾನಿಯಲ್ಲೇ ನೆಲೆಯೂರಿದರು. ಎರವಲು ಸೇವೆಯ ಮೇರೆಗೆ ಹತ್ತಾರು ಕೇಂದ್ರ ಸಚಿವರ ಆಪ್ತ ವಲಯದ ಅವಿಭಾಜ್ಯ ಆಂಗವಾಗಿದ್ದರು.ನಾನು ದೆಹಲಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಕನ್ನಡದ ಕಾರ್ಯ ಚಟುವಟಿಕೆಗಳಿಗೆ ಕೈ ಜೋಡಿಸಿದ ತೃಪ್ತಿ ನನ್ನದಾಗಿದೆ.
ನಾಗೇಶ್ ಅವರ ಆತ್ಮಕ್ಕೆ ಶಾಂತಿ ಲಭಿಸಲಿ ಹಾಗೂ ಶ್ರೀಯುತರ ಅಗಲಿಕೆಯಿಂದ ಉಂಟಾದ ದುಃಖ ಮತ್ತು ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬದ ಎಲ್ಲಾ ಸದಸ್ಯರಿಗೂ ಕರುಣಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.