ಬೆಂಗಳೂರು: ನಕಲಿ ಕೀ ಬಳಸಿ ರಸ್ತೆ ಹಾಗೂ ಮನೆಗಳ ಎದುರು ಪಾರ್ಕಿಂಗ್ ಮಾಡಿರುತ್ತಿದ್ದ ದ್ವಿಚಕ್ರ ವಾಹನಗಳ ಹ್ಯಾಂಡಲ್ ಲಾಕ್ ಮುರಿದು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ವೈಟ್‌ಫೀಲ್ಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ವೈಟ್‌ಫೀಲ್ಡ್ ನಿವಾಸಿ ಲೋಹಿತ್ (26) ಬಂಧಿತ ಆರೋಪಿ. ಈತನಿಂದ ರೂ.7 ಲಕ್ಷ ಮೌಲ್ಯದ 10 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಠಾಣಾ ವ್ಯಾಪ್ತಿಯ ಹಿಮ್ಮಡಿಹಳ್ಳಿಯ ನಿವಾಸಿಯೊಬ್ಬರು ತಮ್ಮ ಅಪಾರ್ಟ್ ಮೆಂಟ್ ನ ಪಾರ್ಕಿಂಗ್ ಸ್ಥಳದಲ್ಲಿ ಬೈಕ್ ನಿಲುಗಡೆ ಮಾಡಿದ್ದರು. ಅಲ್ಲಿ ಬೈಕ್ ಕಳ್ಳತನವಾಗಿದೆ ಎಂದು ದೂರು ಸಲ್ಲಿಸಿದ್ದರು. ವಿವಿಧ ಆಯಾಮಗಳಿಂದ ತನಿಖೆ ನಡೆಸಿದ ಪೊಲೀಸರು ವರ್ತೂರಿನ ಮಧುರಾನಗರದ ಮೂರನೇ ಹಂತದಲ್ಲಿ ಆರೋಪಿಯನ್ನು ಬಂಧಿಸಿದ್ದರು. ಪಾರ್ಕಿಂಗ್ ಸ್ಥಳಕ್ಕೆ ಆಗಮಿಸಿ ನಕಲಿ ಕೀ ಬಳಸಿ ಬೈಕ್‌ನ ಹ್ಯಾಂಡಲ್ ಮುರಿದು ಕಳ್ಳತನ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

                                    