ನವದೆಹಲಿ: ನವಂಬರ್ ನಲ್ಲಿ ಚುನಾವಣೆ ನಡೆಯಲಿರುವ ಬಿಹಾರದಲ್ಲಿ ನಡೆಸಲಾದ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ನಂತರ ಸಿದ್ಧಪಡಿಸಲಾದ ಅಂತಿಮ ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗಿರುವ 3.66 ಲಕ್ಷದ ಮತದಾರರ ವಿವರಗಳನ್ನು ಸಲ್ಲಿಸುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಇಂದು ನಿರ್ದೇಶನ ನೀಡಿದೆ. ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಹಾಗೂ ಜಾಯ್ ಮಾಲ್ಯ ಬಾಗ್ಚಿ ಅವರು ಇದ್ದ ದ್ವಿಸದಸ್ಯ ಪೀಠವು, ಮುಂದಿನ ವಿಚಾರಣೆಯನ್ನು ಅಕ್ಟೋಬರ್ 9ಕ್ಕೆ ಮುಂದೂಡಿದೆ.
ಎಸ್‌ಐಆರ್ ಪ್ರಕ್ರಿಯೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಪೀಠವು ಪ್ರತಿಯೊಬ್ಬ ಅರ್ಜಿದಾರರ ಬಳಿಯೂ ಕರಡು ಮತದಾರರ ಪಟ್ಟಿ ಇದ್ದು, ಸೆಪ್ಟೆಂಬರ್ 30ರಂದು ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗಿದೆ. ಕರಡು ಮತ್ತು ಅಂತಿಮ ಮತದಾರರ ಪಟ್ಟಿಯನ್ನು ಪರಿಶೀಲಿಸಿ ನೋಡಿದಾಗ ಮತದಾರರ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದು ಕಂಡುಬಂದಿದೆ. ಈ ಗೊಂದಲ ನಿವಾರಣೆಗಾಗಿ ಹೊಸದಾಗಿ ಸೇರಿಸಲಾದ ಮತದಾರರ ಗುರುತನ್ನು ಬಹಿರಂಗಪಡಿಸಬೇಕು ಎಂದು ಹೇಳಿದೆ.
ಆಯೋಗವು ಆಗಸ್ಟ್ 1ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಿದ್ದು, ಸೆಪ್ಟೆಂಬರ್ 30ರಂದು ಅಂತಿಮ ಪಟ್ಟಿ ಪ್ರಕಟಿಸಿದೆ. ಕರಡು ಪಟ್ಟಿಯಲ್ಲಿ ಸೇರಿಸಲಾದ ಮತದಾರರ ಸಂಖ್ಯೆ 21.53 ಲಕ್ಷ; ಪರಿಶೀಲನೆ ಬಳಿಕ ಕೈಬಿಡಲಾದ ಮತದಾರರ ಸಂಖ್ಯೆ 3.66 ಲಕ್ಷ; ಲಕ್ಷ ಮತದಾರರ ಸಂಖ್ಯೆಯಲ್ಲಾದ ಒಟ್ಟು ಹೆಚ್ಚಳ 17.87 ಲಕ್ಷ.