ಬಿಹಾರ ಮತದಾರರ ಪಟ್ಟಿ  ಪರಿಷ್ಕರಣೆ: ಚುನಾವಣಾ ಆಯೋಗದ ವಿರುದ್ಧದ ಅರ್ಜಿಗಳ ವಿಚಾರಣೆಗೆ ಸುಪ್ರೀಂಕೋರ್ಟ್‌ ಒಪ್ಪಿಗೆ

Most read

ನವದೆಹಲಿ: ಈ ವರ್ಷದ ಕೊನೆಯಲ್ಲಿ  ವಿಧಾನಸಭಾ ಚುನಾವಣೆ ನಡೆಯಲಿರುವ ಬಿಹಾರದಲ್ಲಿ ಮತದಾರರ ಪಟ್ಟಿಯನ್ನು ಆಮೂಲಾಗ್ರವಾಗಿ ಪರಿಷ್ಕರಣೆ ಮಾಡುವ ಕೇಂದ್ರ ಚುನಾವಣಾ ಆಯೋಗದ ಕ್ರಮದ ಸಿಂಧುತ್ವ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ಇಂದು ಸಮ್ಮತಿ ಸೂಚಿಸಿದೆ.

ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಹಾಗೂ ಜೊಯ್‌ಮಲ್ಯ ಬಾಗ್ಚಿ ಅವರ ದ್ವಿಸದಸ್ಯ ಪೀಠದ ಎದುರು, ರಾಜ್ಯ ಸಭಾ ಸದಸ್ಯ, ಹಿರಿಯ ವಕೀಲ ಕಪಿಲ್‌ ಸಿಬಲ್‌ ಅವರು ಅರ್ಜಿದಾರರ ಪರವಾಗಿ ಈ  ಅರ್ಜಿಗಳ ತುರ್ತು ವಿಚಾರಣೆಗೆ ಮನವಿ ಮಾಡಿಕೊಂಡರು. ಆಗ ನ್ಯಾಯಾಲಯ ವಿಚಾರಣೆಯನ್ನು ಜುಲೈ 10, ಗುರುವಾರ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿತು.

ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ, ಸ್ವಯಂ ಸೇವಾ ಸಂಸ್ಥೆಗಳಾದ ಎಡಿಆರ್‌, ಪಿಯುಸಿಎಲ್‌, ಸಾಮಾಜಿಕ ಹೋರಾಟಗಾರರಾದ ಯೋಗೇಂದ್ರ ಯಾದವ್ ಸೇರಿದಂತೆ ಅನೇಕ ಹೋರಾಟಗಾರರು ಚುನಾವಣಾ ಆಯೋಗದ ಕ್ರಮವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು. ಲಕ್ಷಾಂತರ ಅರ್ಹ ಮತದಾರರನ್ನು ಮತದಾರರ ಪಟ್ಟಿಯಿಂದ ಹೊರಗಿಡುವ ಪ್ರಯತ್ನ ಇದು ಎಂದು ಎಡಿಆರ್ ಆತಂಕ ವ್ಯಕ್ತಪಡಿಸಿತ್ತು.

ಜೂನ್ 24ರಂದು ಆಯೋಗ ಹೊರಡಿಸಿರುವ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ ಆದೇಶ ಸಂವಿಧಾನದ 14, 19(1)(ಎ), 21, 325, 328ರ ವಿಧಿ ಹಾಗೂ ಪ್ರಜಾ ಪ್ರತಿನಿಧಿ ಕಾಯ್ದೆ–1950, ಮತದಾರ ನೋಂದಣಿ ನಿಯಮ–1960ರ ಉಲ್ಲಂಘನೆಯಾಗಿದೆ. ಹೀಗಾಗಿ ಆದೇಶವನ್ನು ವಜಾ ಮಾಡುವಂತೆ ಮಹುವಾ ಕೋರಿದ್ದಾರೆ.

ಈಗಾಗಲೇ ಪಟ್ಟಿಯಲ್ಲಿ ಹೆಸರಿರುವ, ಹಲವು ಬಾರಿ ಮತದಾನ ಮಾಡಿರುವವರನ್ನು ತಮ್ಮ ಅರ್ಹತೆ ಸಾಬೀತುಪಡಿಸುವಂತೆ ಸೂಚಿಸಲಾಗುತ್ತಿದೆ. ದಾಖಲೆ ನೀಡದವರನ್ನು ಪಟ್ಟಿಯಿಂದ ಕೈಬಿಡುವ ಸಾಧ್ಯತೆಗಳಿವೆ. ಆದ್ದರಿಂದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಮಾಡದಂತೆ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಅವರು ಅರ್ಜಿಯಲ್ಲಿ ಕೋರಿದ್ದಾರೆ.

ಇದೇ ವಿಷಯಕ್ಕೆ ಸಂಬಂಧಪಟ್ಟಂತೆ ಈ ಮಧ್ಯೆ ಜುಲೈ 9ರಂದು ಎಡಪಕ್ಷಗಳ ನೇತೃತ್ವದಲ್ಲಿ ಕಾರ್ಮಿಕ ಸಂಘಟನೆಗಳು ಬಂದ್‌ ಗೆ ಕರೆ ನೀಡಿವೆ.

More articles

Latest article