ನವದೆಹಲಿ: ಬಿಹಾರದಲ್ಲಿ ನಡೆಯುತ್ತಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್ ಐ ಆರ್) ಗೆ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಮತ್ತು ಪಡಿತರ ಚೀಟಿಗಳನ್ನು ಮಾನ್ಯ ದಾಖಲೆಗಳೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಚುನಾವಣಾ ಆಯೋಗ ಸುಪ್ರೀಂಕೋರ್ಟ್ ಗೆ ಅಫಿಡೆವಿಟ್ ಸಲ್ಲಿಸಿದೆ.
ಈ ವರ್ಷದ ಕೊನೆಯಲ್ಲಿ ಬಿಹಾರ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಎಸ್ ಆರ್ ಐ ವಿರೋಧಿಸಿ ವಿವಿಧ ಪಕ್ಷಗಳು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದವು. ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ನಡೆಯುತ್ತಿದೆ.
ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಮತ್ತು ಪಡಿತರ ಚೀಟಿಗಳನ್ನು ಮಾನ್ಯ ದಾಖಲೆಗಳು ಎಂದು ಪರಿಗಣಿಸಬೇಕು ಎಂದು ಕಳೆದ ಸುಪ್ರೀಂಕೋರ್ಟ್ ಹೇಳಿತ್ತು. ಈ ಅಭಿಪ್ರಾಯಕ್ಕೆ ವಿರೋಧ ವ್ಯಕ್ತಪಡಿಸಿರುವ ಚುನಾವಣಾ ಆಯೋಗ, ಇವುಗಳನ್ನು ಸೂಕ್ತ ದಾಖಲೆಗಳು ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ. ಆಧಾರ್ ಕಾರ್ಡ್ ಕೇವಲ ಗುರುತಿನ ಪುರಾವೆಯಾಗಿದೆ. ದೇಶದಲ್ಲಿ ಹೆಚ್ಚಿನ ಸಂಖ್ಯೆಯ ನಕಲಿ ಪಡಿತರ ಚೀಟಿಗಳು ಚಾಲ್ತಿಯಲ್ಲಿವೆ. ಅಸ್ತಿತ್ವದಲ್ಲಿರುವ ಮತದಾರರ ಕಾರ್ಡ್‌ಗಳನ್ನು ಅವಲಂಬಿಸುವುದರಿಂದ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ವ್ಯರ್ಥವಾಗುತ್ತದೆ ಎಂದು ಪ್ರತಿಪಾದಿಸಿದೆ.
ಆದರೆ, ಮತದಾರರ ಪಟ್ಟಿಯಲ್ಲಿ ಹೆಸರಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯ ಪೌರತ್ವ ಕೊನೆಗೊಳ್ಳುವುದಿಲ್ಲ. ಆಧಾರ್ ಕೇವಲ ವ್ಯಕ್ತಿಯ ಗುರುತಿನ ಪುರಾವೆಯಾಗಿದ್ದು, ಯಾವುದಾದರೂ ಪ್ರಯೋಜನವನ್ನು ಪಡೆಯಲು ಬಯಸುವ ವ್ಯಕ್ತಿಯು ತಾನು ಯಾರೆಂದು ಹೇಳಿಕೊಳ್ಳಲು ಆಧಾರ್ ಕಾರ್ಡ್ ಅನ್ನು ಬಳಸಬಹುದು. ಎಸ್ ಐಆರ್‌ನಿಂದ ಮತದಾರರ ಯಾವುದೇ ಕಾನೂನು ಮತ್ತು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿಲ್ಲ ಎಂದೂ ತಿಳಿಸಿದೆ.
11 ವಿರೋಧ ಪಕ್ಷಗಳು, ಎನ್ ಜಿಒಗಳು ಮತ್ತು ಬಿಹಾರದ ಕೆಲವು ನಿವಾಸಿಗಳು ಎಸ್ ಐ ಆರ್ ಅನ್ನು ರದ್ದುಗೊಳಿಸುವಂತೆ ಕೋರಿ ಹಾಗೂ ಡಿಸೆಂಬರ್‌ನಲ್ಲಿ ಪರಿಷ್ಕರಿಸಲಾದ ಹಿಂದಿನ ಮತದಾರರ ಪಟ್ಟಿಗಳನ್ನೇ ಆಧಾರವಾಗಿ ಇಟ್ಟುಕೊಂಡು ನವೆಂಬರ್ ವಿಧಾನಸಭಾ ಚುನಾವಣೆ ನಡೆಸಬೇಕು ಎಂದು ಅರ್ಜಿ ಸಲ್ಲಿಸಿವೆ.