ಬೆಂಗಳೂರು: ಬಿಗ್ ಬಾಸ್ ಮಾಜಿ ಸ್ಪರ್ಧಿ ಹಾಗೂ ವಕೀಲ ಜಗದೀಶ್ ಮತ್ತು ಅವರ ಗನ್ ಮ್ಯಾನ್ ನನ್ನು ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಶುಕ್ರವಾರ ಕೊಡಿಗೆಹಳ್ಳಿಯಲ್ಲಿ ನಡೆದ ಗಲಾಟೆಯಲ್ಲಿ ಅವರ ಗನ್ಮ್ಯಾನ್ ಕಾನೂನು ಬಾಹಿರವಾಗಿ ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಈ ಸಂಬಂಧ ತೇಜಸ್ ಎಂಬುವರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಲಾಯರ್ ಜಗದೀಶ್ ಅವರನ್ನು ಬಂಧಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಮಾತ್ರ ಬಳಸಲು ಪರವಾನಗಿ ಪಡೆದು, ಕರ್ನಾಟಕದಲ್ಲಿ ಗುಂಡು ಹಾರಿಸಿದ ಹಿನ್ನಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಮತ್ತೊಂದೆಡೆ ದೂರುದಾರನ ಮೇಲೂ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.
ಸಹಕಾರ ನಗರದಲ್ಲಿ ಶುಕ್ರವಾರ ರಾತ್ರಿ ವಕೀಲ ಜಗದೀಶ್ ಮೇಲೆ ಹಲ್ಲೆ ನಡೆಸಲಾಗಿತ್ತು. ನನ್ನ ಮೇಲೆ ಗುಂಪೊಂದು ಹಲ್ಲೆ ನಡೆಸಿದೆ ಎಂದು ಜಗದೀಶ್ ಅವರು ವಿಡಿಯೊ ಮಾಡಿ ಹೇಳಿಕೊಂಡಿದ್ಧರು. ಮುಖದಲ್ಲಿ ರಕ್ತದ ಕಲೆಗಳು ಆಗಿರುವುದು ವಿಡಿಯೊದಲ್ಲಿ ಕಂಡು ಬಂದಿತ್ತು. ಮೂಗಿನಿಂದ ರಕ್ತ ಬರುವಂತೆ ಆರೋಪಿಗಳು ಹಲ್ಲೆ ನಡೆಸಿದ್ದಾರೆ ಎಂದು ಜಗದೀಶ್ ಆರೋಪಿಸಿ ದೂರು ನೀಡಿದ್ದರು. ಅಣ್ಣಮ್ಮ ದೇವಿಯ ಮೂರ್ತಿಯನ್ನು ಕೂರಿಸುವ ವಿಚಾರದಲ್ಲಿ ಸ್ಥಳೀಯರು ಹಾಗೂ ವಕೀಲ ಜಗದೀಶ್ ನಡುವೆ ಈ ಹಿಂದೆಯೂ ಸಹ ಗಲಾಟೆ ನಡೆದಿತ್ತು. ಈ ಸಂಬಂಧ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿತ್ತು. ಅದೇ ಗುಂಪು ಮತ್ತೆ ಹಲ್ಲೆ ನಡೆಸಿದೆ ಎನ್ನಲಾಗಿದೆ.