ಬೀದರ್: ಒಂದೂವರೆ ವರ್ಷದ ಹಿಂದೆ ಸ್ಥಗಿತಗೊಂಡಿದ್ದ ಬೀದರ್-ಬೆಂಗಳೂರು ನಾಗರಿಕ ವಿಮಾನಯಾನ ಸೇವೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೀದರ್ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಜೆ ಕೇಕ್ ಕತ್ತರಿಸಿ ಚಾಲನೆ ನೀಡಿದರು. ಏಪ್ರಿಲ್ 17ರಂದು ಬೀದರ್ ನಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲಿರುವ ಐವರಿಗೆ ಬೋರ್ಡಿಂಗ್ ಪಾಸ್ ವಿತರಿಸಿ, ಹಸಿರು ನಿಶಾನೆ ತೋರಿದರು.
ಸ್ಟಾರ್ ಏರ್ ವಿಮಾನವು ಪ್ರತಿದಿನ ಬೆಳಿಗ್ಗೆ 7.30ಕ್ಕೆ ಬೆಂಗಳೂರಿನಿಂದ ಹೊರಟು, ಬೆಳಿಗ್ಗೆ 8.45ಕ್ಕೆ ಬೀದರ್ ತಲುಪಲಿದೆ. ಅದೇ ದಿನ ಬೆಳಿಗ್ಗೆ 9.10ಕ್ಕೆ ಬೀದರ್ ನಿಂದ ಹೊರಟು ಬೆಳಿಗ್ಗೆ 10.25ಕ್ಕೆ ಬೆಂಗಳೂರು ಸೇರಲಿದೆ.
ಸಚಿವ ಈಶ್ವರ ಬಿ. ಖಂಡ್ರೆ ಮಾತನಾಡಿ, ಕೇಂದ್ರ ಸಹಾಯ ಧನ ಸ್ಥಗಿತಗೊಳಿಸಿತ್ತು. ಡಬಲ್ ಎಂಜಿನ್ ಸರ್ಕಾರ ಇದ್ದರೂ ಏನೂ ಮಾಡಿರಲಿಲ್ಲ. ನಮ್ಮ ಸರ್ಕಾರ ವಿಮಾನಯಾನ ಸೇವೆ ಆರಂಭಿಸಿದೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ರೂ. 14 ಕೋಟಿ ಮೀಸಲಿಡಲಾಗಿದೆ ಎಂದರು. ಮುಖ್ಯಮಂತ್ರಿ ಸೇರಿದಂತೆ ಬೇರೆ ಯಾರೊಬ್ಬರೂ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಲಿಲ್ಲ.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಸಚಿವರಾದ ಈಶ್ವರ ಬಿ. ಖಂಡ್ರೆ, ರಹೀಂ ಖಾನ್, ಎಂ.ಸಿ. ಸುಧಾಕರ್ , ರಾಮಲಿಂಗಾರೆಡ್ಡಿ, ಸಂಸದ ಸಾಗರ್ ಖಂಡ್ರೆ, ವಿಧಾನ ಪರಿಷತ್ ಸದಸ್ಯರಾದ ಚಂದ್ರಶೇಖರ ಪಾಟೀಲ, ಭೀಮರಾವ್ ಪಾಟೀಲ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಬುಡಾ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ನಗರಸಭೆ ಅಧ್ಯಕ್ಷ ಮುಹಮ್ಮದ್ ಗೌಸ್ ಹಾಜರಿದ್ದರು.